ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ವಲಸೆ ಕಾರ್ಮಿಕರಿಗೆ ವಸತಿ ಸಮುಚ್ಚಯ
ಬೆಂಗಳೂರು: ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಇಷ್ಟು ದಿನ ರಸ್ತೆ ಬದಿಯಲ್ಲಿ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿದ್ದರು. ಈ ಕಾರ್ಮಿಕರು ಗೌರವಯುತವಾಗಿ ಜೀವನ ನಡೆಸುವ ನಿಟ್ಟಿನಲ್ಲಿ ಸರ್ಕಾರ ಕಟ್ಟಡ ಹಾಗೂ ವಲಸೆ ಕಾರ್ಮಿಕರಿಗೆ ‘ಶ್ರಮಿಕ್ ವಸತಿ’ ಯೋಜನೆಯನ್ನು ಜಾರಿಗೊಳಿಸಿದೆ. ಇದರ ಭಾಗವಾಗಿ ದೇಶದಲ್ಲೇ ಮೊದಲ ಬಾರಿಗೆ ಕಾರ್ಮಿಕರಿಗೆ ರಾಜ್ಯ ಸರ್ಕಾರ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡಿದೆ.
ಇದನ್ನೂ ಓದಿ: H3N2 ವೈರಸ್ ಗೆ ಮಕ್ಕಳು, ವೃದ್ಧರು, ಗರ್ಭಿಣಿಯರೇ ಟಾರ್ಗೆಟ್ – ಸಚಿವ ಸುಧಾಕರ್ ಕೊಟ್ಟ ಸಲಹೆಗಳೇನು..?
ಕೈಗಾರಿಕಾ ಪ್ರದೇಶಗಳು ಮತ್ತು ಬೃಹತ್ ನಿರ್ಮಾಣ ವಲಯಗಳ ಆಸುಪಾಸಿನಲ್ಲಿ ‘ಶ್ರಮಿಕ್ ನಿವಾಸ್’ ಯೋಜನೆಯಡಿ ಸಂಘಟಿತ ಕಾರ್ಮಿಕರಿಗೆ ವಸತಿ ನೀಡಲು ವಸತಿ ಸಮುಚ್ಚಯ ಮತ್ತು ಬಿಡಿ ಮನೆಗಳ ನಿರ್ಮಾಣಕ್ಕೆ ಇಲಾಖೆ ಮುಂದಾಗಿದೆ. ಯೋಜನೆಯ ಮೊದಲ ಹಂತವಾಗಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬೃಹತ್ ವಸತಿ ಸಮುಚ್ಚಯ ಉದ್ಘಾಟನೆಗೆ ಸಜ್ಜಾಗುತ್ತಿದೆ. ಸಮುಚ್ಚಯಗಳಲ್ಲಿ ಕಾರ್ಮಿಕರು ಕಾಮಗಾರಿ ಪೂರ್ಣಗೊಳ್ಳುವವರೆಗೂ ಜೀವನ ನಡೆಸಬಹುದು ಎಂದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ವಸತಿ ವ್ಯವಸ್ಥೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಏಕ ವ್ಯಕ್ತಿ ಸಮುಚ್ಚಯದಲ್ಲಿ ಸಾಮೂಹಿಕ ವಸತಿಗೆ ಅವಕಾಶವಿದೆ. ಏಕ ಹಾಸಿಗೆ ವ್ಯವಸ್ಥೆಯಡಿ 96 ಕಾರ್ಮಿಕರು ಮತ್ತು ದ್ವಿ ಹಾಸಿಗೆ ವ್ಯವಸ್ಥೆಯಡಿ 196 ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕುಟುಂಬದೊಂದಿಗೆ ಉಳಿದುಕೊಳ್ಳಲು ಬಯಸುವ ಕಾರ್ಮಿಕರಿಗೆ ಪ್ರತ್ಯೇಕ ಮನೆಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ಒಂದು ಕುಟುಂಬದಲ್ಲಿ ನಾಲ್ಕು ಮಂದಿ ಎಂಬಂತೆ 48 ಕಾರ್ಮಿಕ ಕುಟುಂಬಗಳಿಗೆ ಮೊದಲ ಹಂತದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಇಲಾಖೆ ಮುಂದಾಗಿದೆ. ರಾಜ್ಯದ ಹಲವೆಡೆ ಇರುವ ಕೈಗಾರಿಕಾ ಪ್ರದೇಶಗಳಲ್ಲೂ ಈ ಯೋಜನೆ ವಿಸ್ತರಣೆಯಾಗಲಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದೆ.
ವಸತಿ ಸಮುಚ್ಚಯಗಳಲ್ಲಿ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗಕ್ಕೆ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲ ಸೌಕರ್ಯಕ್ಕೂ ಆದ್ಯತೆ ನೀಡಲಾಗಿದೆ. ಈ ವಸತಿ ಸಮುಚ್ಚಯಗಳನ್ನು ಇಲಾಖೆಯೇ ನಿರ್ವಹಿಸಲಿದೆ. ದೊಡ್ಡಬಳ್ಳಾಪುರ ತಾಲೂಕಿನ ಕೈಗಾರಿಕಾ ವಲಯದ ಬದನಹಳ್ಳಿಯಲ್ಲಿ 19 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಏಕ ವಸತಿ ಮತ್ತು ಕುಟುಂಬ ವಸತಿಯ ಸಮುಚ್ಚಯ ನಿರ್ಮಾಣವಾಗಿದ್ದು ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ ಎಂದು ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.