ವಿದ್ಯಾರ್ಥಿಗಳ ಮೇಲೆ ಹರಿದ ಖಾಸಗಿ ಬಸ್ – ನಾಲ್ಕು ವಿದ್ಯಾರ್ಥಿಗಳಿಗೆ ಗಂಭೀರ ಗಾಯ, ಬದುಕಿ ಬರಲಿಲ್ಲ ತುಳಸಿ..!

ವಿದ್ಯಾರ್ಥಿಗಳ ಮೇಲೆ ಹರಿದ ಖಾಸಗಿ ಬಸ್ – ನಾಲ್ಕು ವಿದ್ಯಾರ್ಥಿಗಳಿಗೆ ಗಂಭೀರ ಗಾಯ, ಬದುಕಿ ಬರಲಿಲ್ಲ ತುಳಸಿ..!

ಶಾಲೆಗೆ ಹೋಗಲು ಬಸ್ಸು ಕಾಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಆ ವಿಧಿಯ ವಕ್ರದೃಷ್ಟಿ ಈ ರೀತಿ ಬೀಳುತ್ತದೆ ಅಂತಾ ಯಾರಿಗೆ ಗೊತ್ತು. ಶಾಲೆಗೆ ಹೋಗುವ ಖುಷಿಯಲ್ಲಿ ಬಸ್ಸಿಗಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದರು. ಸ್ನೇಹಿತರೆಲ್ಲಾ ಜೊತೆಯಲ್ಲೇ ಸೇರಿ ನಗು ನಗುತ್ತಾ ಮಾತಾಡಿಕೊಂಡಿದ್ದರು. ಅದೆಲ್ಲಿತ್ತೋ ಯಮಸ್ವರೂಪಿ ಖಾಸಗಿ ಬಸ್. ಏಕಾಏಕಿ ಬಂದು ವಿದ್ಯಾರ್ಥಿಗಳ ಮೇಲೆಯೇ ಹರಿದಿತ್ತು. ಪರಿಣಾಮ 8ನೇ ಕ್ಲಾಸ್ ವಿದ್ಯಾರ್ಥಿನಿಯ ಜೀವ ಬಲಿಪಡೆದೇ ಬಿಟ್ಟಿತ್ತು. ಇನ್ನೂ ಮೂವರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ:  ಪಕ್ಕದ ಮನೆ ನಾಯಿ ಕಚ್ಚಿದ್ದ ವಿಚಾರ ಮುಚ್ಚಿಟ್ಟ –  ಒಂದು ತಿಂಗಳ ಬಳಿಕ ರೇಬಿಸ್‌ನಿಂದ ಮೃತಪಟ್ಟ ಬಾಲಕ!

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕಾವಲ್ ದುಗ್ಲಾಪುರ ಗೇಟ್‌ನಲ್ಲಿ ಈ ಭೀಕರ ದುರಂತ ನಡೆದಿದೆ. ಶಾಲೆಗೆ ತೆರಳಲು ಬಸ್ಸಿಗಾಗಿ ವಿದ್ಯಾರ್ಥಿಗಳು ಅಂಗಡಿ ಬಳಿ ಕಾಯುತ್ತಿದ್ದರು. ಈ ವೇಳೆ ತರೀಕೆರೆಯಿಂದ ಲಿಂಗದಹಳ್ಳಿಗೆ ಕಡೆಗೆ ವೇಗವಾಗಿ ಬಂದ ಖಾಸಗಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ವಿದ್ಯಾರ್ಥಿಗಳು ನಿಂತಿದ್ದ ಸಮೀಪದ ಅಂಗಡಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಐವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ತುಳಸಿ ಸಾವನ್ನಪ್ಪಿದ್ದಾಳೆ. 14 ವರ್ಷದ ವಿದ್ಯಾರ್ಥಿನಿ ತುಳಸಿ ಕಾಲಿನ ಮೇಲೆಯೇ ಬಸ್ ಹರಿದಿತ್ತು. ಕಾಲು ಕಟ್ ಆಗಿ ತುಳಸಿ ನರಳಾಡಿದ್ದಳು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಕೂಡಾ ತುಳಸಿ ಬದುಕುಳಿಯಲೇ ಇಲ್ಲ.

ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಲಕನ ವೇಗದ ಚಾಲನೆಯೇ ದುರ್ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ.

ಅಧಿಕ ವೇಗದ ಖಾಸಗಿ ಬಸ್‌ಗಳ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಸ್ಸಿನ ಮೇಲೆ ಕಲ್ಲು ತೂರಾಟ ಮಾಡಿ ಬಸ್‌ನ ಗಾಜು ಪುಡಿ ಪುಡಿ ಮಾಡಿದ್ದಾರೆ. ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

suddiyaana