ಮನೆಯಲ್ಲಿ ಕಂತೆ ಕಂತೆ ಹಣದ ಜೊತೆ ಸೆಲ್ಫಿ – ಪತ್ನಿ, ಮಕ್ಕಳ ಫೋಟೋದಿಂದಾಗಿ ಪೇಚಿಗೆ ಸಿಲುಕಿದ ಪೊಲೀಸ್ ಅಧಿಕಾರಿ
ಸರ್ಕಾರಿ ಕೆಲಸ ಅನ್ನುವುದು ಇತ್ತೀಚೆಗೆ ಸಂಪತ್ತಿನ ಕೆಲಸ ಆದಂತಾಗಿದೆ. ಬುಧವಾರವಷ್ಟೇ ಬೆಂಗಳೂರಿನ ಕೆ.ಆರ್ ಪುರಂ ತಹಶೀಲ್ದಾರ್ ಅಜಿತ್ ರೈ ಮನೆ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಸಾವಿರ ಕೋಟಿಯ ಅಕ್ರಮ ಸಂಪತ್ತನ್ನ ಬಯಲಿಗೆಳೆದಿದ್ದಾರೆ. ಇದೀಗ ಉತ್ತರ ಪ್ರದೇಶದ ಉನ್ನಾವೋದಲ್ಲಿ ಪೊಲೀಸ್ ಅಧಿಕಾರಿ ಸೆಲ್ಫಿಯಿಂದಾಗಿ ಸಿಕ್ಕಿಬಿದ್ದಿದ್ದಾರೆ. ಪೊಲೀಸ್ ಅಧಿಕಾರಿಯ ಕುಟುಂಬಸ್ಥರು ಕಂತೆ ಕಂತೆ ನೋಟಿನೊಂದಿಗೆ ಫ್ಯಾಮಿಲಿ ಸೆಲ್ಫಿ ತೆಗೆದುಕೊಂಡಿದ್ದರು. ಪೊಲೀಸ್ ಅಧಿಕಾರಿಯ ಪತ್ನಿ ಹಾಗೂ ಮಕ್ಕಳು ಅಂದಾಜು 14 ಲಕ್ಷ ರೂಪಾಯಿ ಮೌಲ್ಯದ ಹಣದ ಬೆಡ್‌ನ ಮುಂದೆ ಸೆಲ್ಫಿ ತೆಗೆದುಕೊಂಡಿದ್ದರು.
ಇದನ್ನೂ ಓದಿ : ಶಾಸ್ತ್ರ ಹೇಳುತ್ತಿದ್ದವನ ಮನೆಯಲ್ಲಿತ್ತು 30 ಲಕ್ಷ ರೂಪಾಯಿ – ಸಾವಿನ ಬಳಿಕ ಪತ್ತೆಯಾಯ್ತು ಸಂಪತ್ತು!
ಉತ್ತರ ಪ್ರದೇಶದ ಉನ್ನಾವೋದಲ್ಲಿ ಪೊಲೀಸ್ ಅಧಿಕಾರಿಯ ಪಾಲಿಗೆ ಸೆಲ್ಫಿ ಸಂಕಷ್ಟ ತಂದೊಡ್ಡಿದೆ. ಹೆಂಡತಿ, ಮಕ್ಕಳು ತೆಗೆದ ಸೆಲ್ಫಿಯಿಂದ ಪೊಲೀಸ್ ಅಧಿಕಾರಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉನ್ನಾವೋದ ಬೆಹ್ತಾ ಮುಜಾವರ್ ಪೊಲೀಸ್ ಸ್ಟೇಷನ್‌ನ ಎಸ್‌ಹೆಚ್‌ಓ ಆಗಿರುವ ರಮೇಶ್ ಚಂದ್ರ ಸಹಾನಿ ಅವರ ಇಬ್ಬರು ಮಕ್ಕಳು ಹಾಗೂ ಅವರ ಪತ್ನಿ 500 ರೂಪಾಯಿ ನೋಟುಗಳಿರುವ 27 ಬಂಡಲ್ ಹಣದೊಂದಿಗೆ ಫೋಟೋಗೆ ಪೋಸ್ ನೀಡಿದ್ದರು. ಫೋಟೋ ವೈರಲ್ ಆಗುತ್ತಿದ್ದ ಹಾಗೆ ಅಧಿಕಾರಿ ರಮೇಶ್ ಚಂದ್ರ ಸಹಾನಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೆಲ್ಫಿ ಗಮನಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣ ತನಿಖೆಗೆ ಆದೇಶ ನೀಡಿದ್ದಾರೆ. ಈ ವೇಳೆ ಎಸ್‌ಹೆಚ್‌ಓ ರಮೇಶ್ ಚಂದ್ರ ಸಹಾನಿ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಇದು 2021ರ ನವೆಂಬರ್ 14ರಂದು ತೆಗೆದಿದ್ದ ಚಿತ್ರ. ಕುಟುಂಬದ ಆಸ್ತಿಯನ್ನು ಮಾರಾಟ ಮಾಡಿದಾಗಿನ ಸೆಲ್ಫಿ ಎಂದು ಅಧಿಕಾರಿ ಹೇಳಿದ್ದಾರೆ.