ರಸ್ತೆಯಲ್ಲಿ ಬಿದ್ದಿದ್ದ 10 ರೂಪಾಯಿ ನೋಟಿನ ಆಸೆಗೆ ಲಕ್ಷ ಕಳೆದುಕೊಂಡ ವ್ಯಕ್ತಿ! –ಯಾಮಾರಿಸಿದ ಖತರ್ನಾಕ್‌ ಕಳ್ಳ!

ರಸ್ತೆಯಲ್ಲಿ ಬಿದ್ದಿದ್ದ 10 ರೂಪಾಯಿ ನೋಟಿನ ಆಸೆಗೆ ಲಕ್ಷ ಕಳೆದುಕೊಂಡ ವ್ಯಕ್ತಿ! –ಯಾಮಾರಿಸಿದ ಖತರ್ನಾಕ್‌ ಕಳ್ಳ!

ತಮ್ಮ ಕೈಯಲ್ಲಿ ಎಷ್ಟೇ ಹಣವಿದ್ದರೂ ಕೆಲವರು ರೋಡಿನಲ್ಲಿ ಬಿದ್ದಿದ್ದ 10 ರೂಪಾಯಿಗಾಗಿ ಆಸೆ ಪಡುತ್ತಾರೆ. ಬಂದಿದ್ದು, ಬರಲಿ ಅಂತಾ ರಸ್ತೆಯಲ್ಲಿ ಬಿದ್ದಿದ್ದ ಬಿಡಿಗಾಸು ಹೆಕ್ಕಲು ಹೋಗುತ್ತಾರೆ. ಇದೀಗ ಇಲ್ಲೊಬ್ಬರು ರಸ್ತೆಯಲ್ಲಿ ಬಿದ್ದಿದ್ದ 10 ರೂಪಾಯಿ ನೋಟು ಹೆಕ್ಕಲು ಹೋಗಿ ಬರೋಬ್ಬರಿ 1 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ  ನಡೆದಿದೆ.

ಏನಿದು ಘಟನೆ?

ಮಂಗಳವಾರಪೇಟೆ ನಿವಾಸಿ ರಾಘವೇಂದ್ರ ಎಂಬುವವರು ಚೆನ್ನಪಟ್ಟಣದ ಕೆನರಾ ಬ್ಯಾಂಕ್​  ಹಣ ಡ್ರಾ ಮಾಡಲು ಹೋಗಿದ್ದಾರೆ. ಇದನ್ನು ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ನೋಡಿದ್ದಾನೆ. ರಾಘವೇಂದ್ರ ಅವರು ಹಣ ಡ್ರಾ ಮಾಡಿ ಬ್ಯಾಂಕ್‌ನಿಂದ ಹೊರ ಬರುತ್ತಿರುವುದನ್ನೇ ಕಾಯುತ್ತಿದ್ದ ಆತ, ಅವರು ಬರುತ್ತಿದ್ದಂತೆ ರಸ್ತೆಯಲ್ಲಿ 10 ರೂಪಾಯಿ ನೋಟು ಎಸೆದಿದ್ದಾನೆ. ಬಳಿಕ ನಿಮ್ಮ ಹಣ ಕೆಳಗೆ ಬಿದ್ದಿದೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಜೋಶ್‌ನಲ್ಲಿ ಡಿಜೆ ಸಾಂಗ್‌ಗೆ ಸ್ಟೆಪ್‌ ಹಾಕಿದ.. – ನೋಡ ನೋಡುತ್ತಿದ್ದಂತೆ ಯುವಕನ ಪ್ರಾಣ ಪಕ್ಷಿ ಹಾರಿ ಹೋಯ್ತು!

ಈ ಹಣ ತಮ್ಮದೇ ಆಗಿರಬಹುದು ಎಂದು ರಸ್ತೆಯಲ್ಲಿ ಬಿದ್ದಿದ್ದ ಹಣವನ್ನು ಹೆಕ್ಕಲು ರಾಘವೇಂದ್ರ ಅವರು ಮುಂದಾಗಿದ್ದಾರೆ. ಅವರು 1 ಲಕ್ಷ ರೂ. ಹಣವಿದ್ದ ಕವರ್​​ ಅನ್ನು​ ಬೈಕ್ ಮೇಲೆ ಇಟ್ಟು 10 ರೂ. ಎತ್ತಿಕೊಳ್ಳಲು ಹೋಗಿದ್ದಾರೆ. ಈ ವೇಳೆ ಆರೋಪಿ ಕ್ಷಣಾರ್ಧದಲ್ಲೇ 1 ಲಕ್ಷ ರೂ. ಹಣವಿದ್ದ ಕವರ್ ಎಗರಿಸಿ ಪರಾರಿಯಾಗಿದ್ದಾನೆ.

ಆರೋಪಿ ಹಣ ತೆಗೆದುಕೊಂಡು ಹೋಗುತ್ತಿರುವುದನ್ನು ಮಹಿಳೆಯೊಬ್ಬರು ಕಂಡು ಕೈಸನ್ನೆ ಮಾಡಿ “ಯಾರೋ ನಿನ್ನ ಬ್ಯಾಗ್ ಎತ್ತಿಕೊಂಡು ಹೋಗುತ್ತಿದ್ದಾರೆ ನೋಡಿ ಎಂದು” ರಾಘವೇಂದ್ರ ಅವರಿಗೆ ಎಚ್ಚರಿಸಲು ಪ್ರಯತ್ನ ಪಟ್ಟಿದ್ದಾರೆ. ಆದರೆ ರಾಘವೇಂದ್ರ ಅವರಿಗೆ ಮಹಿಳೆಯ ಕೈಸನ್ನೆ ಭಾಷೆ ಅರ್ಥವಾಗಿಲ್ಲ. ಆರೋಪಿ ಕೈಚಳಕ ರಾಘವೇಂದ್ರ ಅವರಿಗೆ ಗೊತ್ತಾಗುವ ವೇಳೆಗಾಗಲೇ ಕದೀಮ ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ.

ಖತರ್ನಾಕ್ ಕಳ್ಳನ ಕೈಚಳಕ ಬ್ಯಾಂಕ್ ಮುಂದಿನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಘಟನೆ ಚನ್ನಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ದೂರು ದಾಖಲಾಗಿದೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Shwetha M