ನಂದಿಬೆಟ್ಟದಲ್ಲಿ ಹೊಸ ಜೇಡ ಪ್ರಬೇಧ ಪತ್ತೆ – “ಅರ್ಕಾವತಿ” ಎಂದು ನಾಮಕರಣ

ನಂದಿಬೆಟ್ಟದಲ್ಲಿ ಹೊಸ ಜೇಡ ಪ್ರಬೇಧ ಪತ್ತೆ – “ಅರ್ಕಾವತಿ” ಎಂದು ನಾಮಕರಣ

ಬೆಂಗಳೂರು:  ನಂದಿಬೆಟ್ಟದ ತಪ್ಪಲಿನಲ್ಲಿ ಹೊಸ ಜೇಡ ಪ್ರಬೇಧವೊಂದನ್ನು ಪತ್ತೆಯಾಗಿದೆ. ಈ ಪ್ರಬೇಧಕ್ಕೆ “ಅರ್ಕಾವತಿ” ಎಂದು ನದಿಯ ಹೆಸರಿಡಲಾಗಿದೆ. ಜಗತ್ತಿನ 50 ಸಾವಿರ ಜೇಡ ಪ್ರಬೇಧಗಳ ಪಟ್ಟಿಗೆ ಹೊಸದೊಂದು ಪ್ರಬೇಧ ಸೇರ್ಪಡೆಯಾದಂತಾಗಿದೆ.

ನಂದಿಬೆಟ್ಟದ ತಪ್ಪಲಿನಲ್ಲಿ ಹೊಸ ಜೇಡದ ಪ್ರಬೇಧವನ್ನು ಮೊದಲ ಬಾರಿಗೆ ಪರಿಸರಾಸಕ್ತ ಲೋಹಿತ್‌ ವೈ.ಟಿ ಕಂಡಿದ್ದಾರೆ. ನಂತರ ಲೋಹಿತ್‌ ವೈ.ಟಿ, ಚಿನ್ಮಯ್‌.ಸಿ ಮಳಿಯೆ, ಆಶಾ ಎಸ್‌, ಜನಾರ್ಧನ ಆರ್‌, ಚೇತನ್‌ ಜೆ, ಹರಿಚರಣ್‌, ನವೀನ್‌ ಐಯ್ಯರ್‌, ಸಾಕ್ಷಿ.ಕೆ ಮತ್ತು ಅಕ್ಷಯ್‌ ದೇಶಪಾಂಡೆ ತಂಡ ಜೇಡ ಹುಡುಕಾಟ ನಡೆಸಿ, ಮಾದರಿ ಸಂಗ್ರಹಣೆಯಲ್ಲಿ ತೊಡಗಿಸಿಕೊಂಡಿದ್ದರು.

ಇದನ್ನೂ ಓದಿ: ಮಂಗಳನ ಅಂಗಳದಲ್ಲಿ ಸುಳಿಗಾಳಿ – ಗಾಳಿಯ ಶಬ್ದ ಹೇಗಿದೆ ಗೊತ್ತಾ?

ಜೇಡದ ಹೊಸ ಪ್ರಬೇಧದ ಬಗ್ಗೆ ಅನ್ವೇಷಣೆ ಮಾಡಿದ ತಂಡ ವೈಜ್ಞಾನಿಕ ಸಂಶೋಧನೆಗೆ ಸಂಬಂಧಿಸಿದ ಲೇಖನವನ್ನು ರಷ್ಯಾ ಮೂಲದ ಅಂತಾರಾಷ್ಟ್ರೀಯ ಜರ್ನಲ್‌ ಆರ್ಥೋಪೊಡ ಸೆಲೆಕ್ಟಾ ಪತ್ರಿಕೆಯಲ್ಲಿ ಪ್ರಕಟಿಸಿದೆ. ಈ ವೈಜ್ಞಾನಿಕ ಲೇಖನದ ಪ್ರಕಾರ ಜೇಡದ ಪಂಗಡ ಕೂಡ ಅಪರೂಪದ್ದಾಗಿದ್ದು ಭಾರತ, ಚೀನಾ, ಶ್ರೀಲಂಕಾ ಮತ್ತು ವಿಯಟ್ನಾಮ್‌ ಸೇರಿ ಜಗತ್ತಿನ 4 ದೇಶಗಳಲ್ಲಿ ಮಾತ್ರ ಕಾಣಬಹುದಾಗಿದೆ. ಈಗ ಸಿಕ್ಕಿರುವ ಈ ಹೊಸ ಪ್ರಬೇಧವು ಇನ್ನೂ ಅಪರೂಪವೆಂದು ಲೇಖನದಲ್ಲಿ ಉಲ್ಲೇಖವಾಗಿದೆ.

ಸಾಲ್ಟಿಸಿಡೆ ಕುಟುಂಬಕ್ಕೆ ಈ ಜೇಡ ಸೇರಿದ್ದು, ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಎಗರುವ ಜೇಡಗಳ ಕುಟುಂಬಕ್ಕೆ ಸೇರಿದೆ. ಅರ್ಧ ಸೆಂಟಿ ಮೀಟರ್‌ಗೂ ಸ್ವಲ್ಪ ಕಡಿಮೆ ಅಳತೆಯ ಈ ಜೇಡ ಬಹಳ ಚುರುಕಾಗಿ ಎಗರಿ ಕ್ಷಣಾರ್ಧದಲ್ಲಿ ಮಾಯವಾಗಬಲ್ಲದು. ಗಂಡು ಜೇಡ, ಹೆಣ್ಣು ಜೇಡ ಮತ್ತು ಮರಿಜೇಡಗಳನ್ನು ತಂಡ ಪತ್ತೆ ಹಚ್ಚಿದೆ. ಈ ಜೇಡವನ್ನು ಸಾಮಾನ್ಯವಾಗಿ ಎಲ್ಲಾ ಪ್ರದೇಶದಲ್ಲೂ ನೋಡಲು ಸಾಧ್ಯವಿಲ್ಲ. ಈ ಪ್ರಭೇದದ ಸಂಖ್ಯೆ ಬಹಳ ವಿರಳವಾಗಿದೆ ಎಂದು ತಿಳಿದು ಬಂದಿದೆ.

ತರಗೆಲೆ, ಬಂಡೆಯಿರುವ ನೆಲ ಮತ್ತು ಸುತ್ತ ಸ್ವಲ್ಪ ಕುರುಚಲು ಮತ್ತು ಒಣ ಹುಲ್ಲು ಇರುವ ಪ್ರದೇಶದಲ್ಲಿ ಜೇಡ ಕಂಡುಬಂದಿದೆ. ಆದರೆ ಜೇಡವು ಗಿಡ ಮರಗಳ ಮೇಲೆ ಕಾಣಿಸಿಲ್ಲ. ಕಾಡು ಮಲ್ಲಿಗೆ ಮತ್ತು ನೀಲಗಿರಿಯ ಸುರಳಿಸುತ್ತಿದ ಎಲೆಗಳಲ್ಲಿ ಸಣ್ಣ ಗೂಡು ನಿರ್ಮಿಸಿ ರಾತ್ರಿ ವಿಶ್ರಮಿಸುತ್ತದೆ. ಇದು ಹಗಲು ಚಟುವಟಿಕೆಯಿಂದ ಕೂಡಿರುತ್ತದೆ. ಸುರಳಿಸುತ್ತಿರುವ ಒಣ ಎಲೆಗಳಲ್ಲಿ ಹೆಣ್ಣು ಜೇಡ ಬಲೆಯ ಗೂಡು ನಿರ್ಮಿಸಿ ಮೊಟ್ಟೆಯಿಟ್ಟು ಮರಿಗಳು ಆಗುವವರೆಗೂ ಕಾಯುತ್ತದೆ.

ನಂದಿ ಬೆಟ್ಟದ ತಪ್ಪಲಿನ ನದಿಗಳು ಮೂಲ ಸ್ವರೂಪ ಕಳೆದುಕೊಂಡು ಹಾಳಾಗುತ್ತಿರುವ ಮತ್ತು ಜನರ ಮನಸ್ಸಿನಿಂದ ದೂರವಾಗುತ್ತಿರುವ ಈ ಸಂದರ್ಭದಲ್ಲಿ, ನಂದಿಬೆಟ್ಟದಲ್ಲಿ ಹುಟ್ಟುವ ನದಿಯ ನೆನಪಿಗಾಗಿ ಮತ್ತು ಸಂರಕ್ಷಣೆಗಾಗಿ ಈ ಹೊಸ ಜೇಡ ಪ್ರಬೇಧಕ್ಕೆ “ಅರ್ಕಾವತಿ’ ಎಂದು ನದಿಯ ಹೆಸರಿಡಲಾಗಿದೆ.

ನಮ್ಮ ದೇಶದಲ್ಲಿ 2 ಸಾವಿರ ಜೇಡ ಪ್ರಬೇಧಗಳಿದ್ದು, ಕರ್ನಾಟಕದಲ್ಲಿ ಸುಮಾರು 500 ಪ್ರಬೇಧಗಳಿವೆ. ಇನ್ನೂ ಹೆಚ್ಚಿನ ಅಧ್ಯಯನಗಳಾದರೆ, ಜೇಡದ ಬಗ್ಗೆ ವಿಜ್ಞಾನಿಗಳಲ್ಲದ ಸಾಮಾನ್ಯರು ಜೇಡಗಳನ್ನು ಗುರುತಿಸುವಂತಾದರೆ ಇನ್ನೂ ಹೆಚ್ಚು ಪ್ರಬೇಧಗಳನ್ನು ಸಂಶೋಧಿಸಬಹುದು, ಜಗತ್ತಿಗೆ ಪರಿಚಯಿಸಬಹುದು ಮತ್ತು ಅದು ವಿಜ್ಞಾನಲೋಕಕ್ಕೆ ಜನ ಸಾಮಾನ್ಯರ ಕೊಡುಗೆಯಾಗುತ್ತದೆ. ಮುಂದಿನ ದಿನಗಳಲ್ಲಿ ಈ ಹೊಸ ಜೇಡದ ಕುರಿತಾದ ಇನ್ನೂ ಹೆಚ್ಚು ಸಂಶೋಧನೆಗಳು ಮಾಡುವ ಅವಶ್ಯಕತೆ ಇದೆ ಮತ್ತು ನಮ್ಮ ತಂಡ ಇದರಲ್ಲಿ ಉತ್ಸುಕವಾಗಿದೆ  ಎಂದು ಪರಿಸರ ಪ್ರೇಮಿ ಲೋಹಿತ್‌ ಹೇಳಿದ್ದಾರೆ.

suddiyaana