ಕಿರುತೆರೆ ಇತಿಹಾಸದಲ್ಲೇ ಹೊಸ ಸಾಹಸ – ಇಬ್ಭಾಗವಾಯ್ತು ‘ಭಾಗ್ಯಲಕ್ಷ್ಮೀ’ ಧಾರಾವಾಹಿ..!
ಅಮ್ಮನಿಲ್ಲದ ತಂಗಿಗೆ ನಾನೇ ಅಮ್ಮ ಎನ್ನುವಂತಿರೋ ಅಕ್ಕ. ಅಕ್ಕ ಏನೇ ಮಾಡಿದ್ರೂ ನನ್ನ ಒಳ್ಳೇದಕ್ಕೆ ಮಾಡುತ್ತಾಳೆ ಎನ್ನುವ ತಂಗಿ. ಅಕ್ಕ ತಂಗಿಯ ಬಾಂಧವ್ಯವನ್ನ ಕಣ್ಣಿಗೆ ಕಟ್ಟಿಕೊಡುವಂತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಭಾಗ್ಯಲಕ್ಷ್ಮೀ ಧಾರಾವಾಹಿ ಪ್ರಸಾರವಾಗುತ್ತಿದೆ. ಈಗಾಗ್ಲೇ ಸಾಕಷ್ಟು ಜನಪ್ರಿಯತೆ ಗಳಿಸಿರೋ ಈ ಸೀರಿಯಲ್ ಈಗ ಮಹತ್ವದ ಘಟ್ಟಕ್ಕೆ ತಲುಪಿದೆ. ಲಕ್ಷ್ಮೀ ಮದುವೆ ಸಂಭ್ರಮದ ನಡುವೆ ಹತ್ತಾರು ಟ್ವಿಸ್ಟ್ ಪಡೆಯುತ್ತಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಶುರುವಾಗಿ ಕೆಲವೇ ದಿನಗಳಲ್ಲಿ ಸಾಕಷ್ಟು ಫೇಮಸ್ ಆಗಿದೆ. ಅಕ್ಕ ತಂಗಿಯ ಕಥಾಹಂದರವುಳ್ಳ ಈ ಸೀರಿಯಲ್ ಇತರೆ ಧಾರಾವಾಹಿಗಳಿಗಿಂತ ಭಿನ್ನವಾಗಿದೆ. ಆದ್ರೆ ಇದೇ ಧಾರಾವಾಹಿ ಇನ್ಮುಂದೆ ಎರಡು ಭಾಗಗಳಾಗಿ ಪ್ರಸಾರವಾಗುತ್ತೆ ಅನ್ನೋದೇ ಕುತೂಹಲ ಮೂಡಿಸಿದೆ. ಹೌದು ಭಾರತೀಯ ಧಾರಾವಾಹಿಗಳ ಇತಿಹಾಸದಲ್ಲೇ ಕಲರ್ಸ್ ಕನ್ನಡ ವಾಹಿನಿಯು ಒಂದು ಕತೆಯನ್ನು ಎರಡು ಧಾರಾವಾಹಿಗಳಾಗಿ ಹೇಳುವ ಹೊಸ ಸಾಹಸಕ್ಕೆ ಕೈಹಾಕಿದೆ.
ಇದನ್ನೂ ಓದಿ : ‘ಕಾಲುಂಗುರ ಲಡ್ಡು ಕಾಲಿಗೆ.. ತಾಳಿ ಕೀರ್ತಿ ಕೊರಳಿಗೆ’ – ‘ಭಾಗ್ಯಲಕ್ಷ್ಮೀ’ಯ ವೈಷ್ಣವ್ ಮದುವೆಯಾಗಿದ್ದು ಯಾರನ್ನ?
ಧಾರಾವಾಹಿ ಈಗ ಪ್ರಮುಖ ಘಟ್ಟ ತಲುಪಿರುವ ಟೈಮಲ್ಲೇ ಅದನ್ನು ಎರಡು ಧಾರಾವಾಹಿಗಳಾಗಿ ಪ್ರಸಾರ ಮಾಡಲು ನಿರ್ಧಾರ ಮಾಡಲಾಗಿದೆ. ಅಂದರೆ ಕನ್ನಡತಿ ಸೀರಿಯಲ್ ಮುಕ್ತಾಯವಾದ ಬಳಿಕ ಭಾಗ್ಯಲಕ್ಷ್ಮೀ ಧಾರಾವಾಹಿಯನ್ನ ಮಹಾಸಂಚಿಕೆ ಹೆಸರಿನಲ್ಲಿ 7 ಗಂಟೆಯಿಂದ 8 ಗಂಟೆಯವರೆಗೆ ಅಂದ್ರೆ 1 ಗಂಟೆಗಳ ಕಾಲ ಪ್ರಸಾರ ಮಾಡಲಾಗಿತ್ತಿದೆ. ಆದರೆ ಇನ್ಮುಂದೆ ಸಂಜೆ ಏಳು ಗಂಟೆಗೆ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ಯ ಜೊತೆಗೆ 7.30ರಿಂದ ‘ಲಕ್ಷ್ಮೀ ಬಾರಮ್ಮ’ ಎಂಬ ಹೆಸರಿನಲ್ಲಿ ಅದೇ ಧಾರಾವಾಹಿ ಕಂಟಿನ್ಯೂ ಆಗಲಿದೆ. ಅಂದರೆ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಅಕ್ಕ ಭಾಗ್ಯಳ ಕತೆ ಮುಂದುವರಿದರೆ ಅದರ ಬೆನ್ನಿಗೇ ಪ್ರಸಾರವಾಗಲಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಮದುವೆಯಾಗಿ ಗಂಡನ ಮನೆಗೆ ತೆರಳುವ ತಂಗಿ ಲಕ್ಷ್ಮೀಯ ಬದುಕು ತೆರೆದುಕೊಳ್ಳುತ್ತದೆ.
ಅಕ್ಕತಂಗಿಯರ ಬಾಂಧವ್ಯ ಮತ್ತು ಪ್ರೀತಿಯ ಬಗ್ಗೆ ಈಗಾಗ್ಲೇ ಜನರಿಗೆ ತಿಳಿದಿದೆ. ಧಾರಾವಾಹಿಗಳು ಎರಡು ಭಾಗಗಳಾಗಿ ಪ್ರಸಾರವಾದರೂ ಅವಳಿ ಕತೆಗಳಾಗಿ ಬೆಳೆಯಲಿವೆ. ಹೀಗೆ ಪಾತ್ರಗಳನ್ನು ಹಂಚಿಕೊಂಡ ಎರಡು ಪ್ರತ್ಯೇಕ ಧಾರಾವಾಹಿಗಳು ಒಂದರ ಬೆನ್ನಿಗೆ ಇನ್ನೊಂದರಂತೆ ಪ್ರಸಾರವಾಗುತ್ತಿರುವುದು ನಿಜಕ್ಕೂ ಹೊಸತು. ವೀಕ್ಷಕರ ಪಾಲಿಗೆ ಇದು ಪ್ರತಿದಿನ ಒಂದು ಗಂಟೆಯ ಡಬಲ್ ಮನರಂಜನೆಯಾಗಲಿದೆ. ಪದ್ಮಜಾ ರಾವ್, ಸುಷ್ಮಾ ರಾವ್, ಸುದರ್ಶನ್ ರಂಗರಾಜು ಮತ್ತು ಗೌತಮಿ ಗೌಡ ಪ್ರಮುಖ ಪಾತ್ರದಲ್ಲಿರುವ ಭಾಗ್ಯಲಕ್ಷ್ಮೀ ಧಾರಾವಾಹಿಯನ್ನು ಮುನ್ನೆಡೆಸಿದರೆ, ಶಮಂತ್, ಭೂಮಿಕಾ, ಸುಷ್ಮಾ ನಾಣಯ್ಯ, ತನ್ವಿರಾವ್ ಮುಂತಾದವರು ಹೊಸದಾಗಿ ಶುರುವಾಗಲಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್ ಮುನ್ನಡೆಸಲಿದ್ದಾರೆ.
ಭಾಗ್ಯ ಈಗಷ್ಟೇ ಹರಸಾಹಸ ಮಾಡಿ ತಂಗಿ ಲಕ್ಷ್ಮೀಯ ಮದುವೆ ಮಾಡಿ ಮುಗಿಸಿದ್ದಾಳೆ. ಅಕ್ಕ ತಂಗಿ ಇನ್ನು ಮುಂದೆ ಎರಡು ಮನೆಗಳಲ್ಲಿ ಮಾತ್ರವಲ್ಲ, ಎರಡು ಬೇರೆ ಬೇರೆ ಧಾರಾವಾಹಿಗಳಲ್ಲಿ ಬದುಕಬೇಕಾಗಿದೆ. ಎರಡೂ ಧಾರಾವಾಹಿಗಳನ್ನು ನಿರ್ಮಿಸುತ್ತಿರುವುದು ಶ್ರೀ ಜೈ ಮಾತಾ ಕಂಬೈನ್ಸ್. ಇಂಥದೊಂದು ಹೊಸ ಸಾಹಸದ ಬಗ್ಗೆ ನಮಗೂ ಕುತೂಹಲವಿದೆ ಎಂದಿರುವ ಕಲರ್ಸ್ ಕನ್ನಡ ವಾಹಿನಿಯ ವಕ್ತಾರರು, ಜನ ಈ ಪ್ರಯೋಗವನ್ನು ಸ್ವೀಕರಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.