ಬಿಡಿಗಾಸಿನ ಆಸೆಗೆ ಹೆತ್ತ ಮಗಳನ್ನೇ ಮಾರಿದ ತಾಯಿ – ಮದುವೆಯಾದ ವ್ಯಕ್ತಿಯಿಂದ ಅನೈತಿಕ ಚಟುವಟಿಕೆಗೆ ಒತ್ತಾಯ
ತಾಯಿ ಅಂದ್ರೆ ಅದೊಂದು ಬೆಚ್ಚನೆಯ ಅನುಭವ. ಕರುಣೆಯ ಸಾಗರ. ಅಪರಿಮಿತ ಪ್ರೀತಿಯ ಮೂಲ ತಾಯಿ.. ಅದೆಂಥದ್ದೇ ನೋವಿದ್ರೂ ಅಮ್ಮನ ಮಡಿಲಿನಲ್ಲಿ ನೆಮ್ಮದಿ, ಶಾಂತಿ ಸಿಗುತ್ತೆ.. ತಾಯಿಗೆ ಪ್ರತ್ಯಕ್ಷ ದೈವ ಅಂತಾನೂ ಕರೀತಾರೆ. ಆದ್ರೆ ಈಕೆ ಮಾತ್ರ ಇದರ ತದ್ವಿರುದ್ಧ. ತಾನು ಹೆತ್ತ ಮಗಳನ್ನು ಸುಖವಾಗಿ ನೋಡಿಕೊಳ್ಳುವ ಬದಲು ಬಿಡಿಗಾಸಿನ ಆಸೆಗಾಗಿ ನೀಚನಿಗೆ ಮಾರಾಟ ಮಾಡಿದ್ದಾಳೆ.
ಅಷ್ಟಕ್ಕೂ ಆಗಿದ್ದೇನು?
ತಾಯಿಯೇ ದೇವರು ಅಂತಾ ಹೇಳಲಾಗುತ್ತದೆ. ಅವಳನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸಲಾಗುತ್ತದೆ. ಆದ್ರೆ ಈಕೆ ಮಾಡಿರುವ ಕೃತ್ಯ ಕೇಳಿದ್ರೆ ಇಡೀ ಮನುಕುಲವೇ ತಲೆ ತಗ್ಗಿಸುವಂತೆ ಮಾಡುತ್ತೆ. ಈಕೆ ತಾನು ಹೆತ್ತ ಮಗಳನ್ನೇ ಹಣದ ಆಸೆಗಾಗಿ ಮಾರಾಟ ಮಾಡಿದ್ದಾಳೆ. 4 ಲಕ್ಷ ರೂ.ಗೆ ಮಗಳನ್ನು ನೀಚನಿಗೆ ಮಾರಾಟ ಮಾಡಿದ್ದಾಳೆ. ಈ ಘಟನೆ ಉತ್ತರಪ್ರದೇಶದ ಗೋರಖ್‍ಪುರದ ಮಹೇಸ್ರಾ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ: ತಾಳಿ ಕಟ್ಟುವ ವೇಳೆ ಶಾಕ್ ಕೊಟ್ಟ ವಧು! – ನಾನಿನ್ನೂ ಓದ್ಬೇಕು.. ಮದುವೆ ಬೇಡ ಅಂದ ಮದುಮಗಳು..!
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ತನ್ನ ತಾಯಿ ಹಣ ಪಡೆದು ಬಲವಂತದಿಂದ ಮದುವೆ ಮಾಡಿಸಿಕೊಟ್ಟಿದ್ದಾಳೆ. ಈಗ ತನ್ನ ಗಂಡ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವಂತೆ ಬಲವಂತಪಡಿಸಿ ನಿರಂತರ ಕಿರುಕುಳ ನೀಡುತ್ತಿದ್ದಾನೆ ಎಂದು ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ದೂರಿನಲ್ಲಿ ಏನಿದೆ?
ಯುವತಿ ತನಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಿ ಅಂತಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಚಿಲುತಾಲ್ ಠಾಣೆಯಲ್ಲಿ ಆಕೆ ದೂರು ದಾಖಲಿಸಿದ್ದು, ದೂರಿನಲ್ಲಿ ಹರಿಯಾಣ ಮೂಲದ ವ್ಯಕ್ತಿಯಿಂದ ತನ್ನ ತಾಯಿ ಹಣ ಪಡೆದು ನ.23 ರಂದು ಬಲವಂತದಿಂದ ಮದುವೆ ಮಾಡಿದ್ದಾರೆ. ಈಗ ಅಕ್ರಮ ಚಟುವಟಿಕೆಯಲ್ಲಿ ತೊಡಗುವಂತೆ ನಿರಂತರವಾಗಿ ಆತ ಹಲ್ಲೆ ನಡೆಸುತ್ತಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.
ಯುವತಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತದೆ. ಈಗಾಗಲೇ ಪೊಲೀಸರು ಆಕೆಯ ಕುಟುಂಬಸ್ಥರ ಬಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸ್ ಅಧೀಕ್ಷಕ ಮನೋಜ್ ಅವಸ್ತಿ ತಿಳಿಸಿದ್ದಾರೆ.
ಮಹಿಳೆಯ ಇಬ್ಬರು ಹಿರಿಯ ಸಹೋದರಿಯರು ಸಹ ಹರಿಯಾಣದಲ್ಲಿ ಮದುವೆಯಾಗಿದ್ದಾರೆ. ಆಕೆಯ ತಾಯಿ ಮತ್ತು ಇತರ ಕುಟುಂಬ ಸದಸ್ಯರು ಯುವತಿಯ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ಚಿಲುತಾಲ್ ಪೊಲೀಸ್ ಠಾಣೆ ಎಸ್‍ಎಚ್‍ಒ ಸಂಜಯ್ ಮಿಶ್ರಾ ಹೇಳಿದ್ದಾರೆ.