ಕೊರಗಜ್ಜನ ನುಡಿಯಿಂದ ನಡೆಯಿತು ಪವಾಡ – 8 ದಿನಗಳ ನಂತರ ಕಾಣೆಯಾದ ಮಗ ಅಚ್ಚರಿಯೆಂಬಂತೆ ಪ್ರತ್ಯಕ್ಷ..!

ಕೊರಗಜ್ಜನ ನುಡಿಯಿಂದ ನಡೆಯಿತು ಪವಾಡ – 8 ದಿನಗಳ ನಂತರ ಕಾಣೆಯಾದ ಮಗ ಅಚ್ಚರಿಯೆಂಬಂತೆ ಪ್ರತ್ಯಕ್ಷ..!

ಕಾಂತಾರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿರುವ ಚಿತ್ರ. ಕರಾವಳಿಯ ದೈವ ಪರಂಪರೆಯನ್ನು ವಿಶ್ವಕ್ಕೆ ಗೊತ್ತಾಗುವಂತೆ ಮಾಡಿರುವ ಕಾಂತಾರ ಸಿನಿಮಾ ನೋಡಿದವರು ದೈವದ ಶಕ್ತಿಯನ್ನು ಅರಿತಿದ್ದರು. ಇದೀಗ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮಪಂಚಾಯತ್‌ ವ್ಯಾಪ್ತಿಯಲ್ಲಿ ಒಂದು ಘಟನೆ ಈ ಚಿತ್ರದ ಕಥೆಯನ್ನು ನೆನಪಿಸುವಂತೆ ಮಾಡಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ. ಅಷ್ಟೇ ಅಲ್ಲ ಕರಾವಳಿಯ ಕಾರಣಿಕ ದೈವ ಕೊರಗಜ್ಜನ ಪವಾಡ ನೋಡಿ ಜನ ಬೆರಗಾಗಿದ್ದಾರೆ.

ಇದನ್ನೂ ಓದಿ:ವಿಶ್ವದ ಅತ್ಯಂತ ದೊಡ್ಡ ಹಿಂದೂ ದೇವಾಲಯ ಅಮೆರಿಕದಲ್ಲಿ ನಿರ್ಮಾಣ – 183 ಎಕರೆಯಲ್ಲಿ ತಲೆ ಎತ್ತಿದೆ ಸ್ವಾಮಿ ನಾರಾಯಣ ದೇಗುಲ

ತೊಂಬಟ್ಟು ಇರ್ಕಿಗದ್ದೆ ನಿವಾಸಿ ಶೀನ ನಾಯ್ಕ್ ಅವರ ಪುತ್ರ 28 ವರ್ಷದ ವಿವೇಕಾನಂದ ಸೆಪ್ಟೆಂಬರ್ 16ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಜತೆಗೆ ಮನೆಯ ಸಾಕು ನಾಯಿ ಕೂಡ ಕಣ್ಮರೆಯಾಗಿತ್ತು. ಈ ಭಾಗದಲ್ಲಿ ಚಿರತೆ ಕಾಟ ವಿಪರೀತ ಇದ್ದಿದ್ದರಿಂದ ಗ್ರಾಮಸ್ಥರು ಭಯಗೊಂಡಿದ್ದರು. ಇಲ್ಲಿ ಯಾವುದೇ ಜಾನುವಾರು ಕಣ್ಮರೆಯಾದರೂ ಗುಂಪುಗೂಡಿ ಹುಡುಕುವುದು ರೂಢಿ. ವಿವೇಕಾನಂದ ನಾಪತ್ತೆಯಾದಾಗಲೂ ಎಲ್ಲರೂ ಗುಂಪುಗೂಡಿ ಹುಡುಕಾಡಿದ್ದಾರೆ. ದಟ್ಟ ಅರಣ್ಯದಲ್ಲಿ ಎಷ್ಟೇ ಹುಡುಕಾಡಿದರೂ ವಿವೇಕಾನಂದ ಮತ್ತು ಸಾಕು ನಾಯಿಯ ಸುಳಿವೇ ಸಿಕ್ಕಿರಲಿಲ್ಲ.  ಈ ಭಾಗದಲ್ಲಿ ಜನ-ಜಾನುವಾರು ನಾಪತ್ತೆಯಾದರೆ ಸಾಮಾನ್ಯವಾಗಿ ದೈವದೇವರು, ಜ್ಯೋತಿಷ್ಯ ಅಥವಾ ನಿಮಿತ್ತದ ಮೊರೆ ಹೋಗುವುದು ವಾಡಿಕೆ. ಮನೆಯವರು ದೈವದ ಮೊರೆ ಹೋಗಿದ್ದಾರೆ. ದೈವ ವಿವೇಕಾನಂದ ಬದುಕಿದ್ದಾನೆ ಎಂದು ನುಡಿ ಕೊಟ್ಟಿದೆ. ವಿವೇಕಾನಂದ ಬದುಕಿದ್ದಾನೆ ಎಂದು ದೃಢವಾಣಿ ಸಿಕ್ಕಿದ್ದು ಹೆಬ್ರಿ ಸಮೀಪದ ಗುಡಿಯೊಂದರ ಕೊರಗಜ್ಜ ದೈವದಿಂದ. ಹೀಗಾಗಿ ಮನೆಯವರು ವಿವೇಕಾನಂದನ ಹುಡುಕಾಟ ಮುಂದುವರೆಸಿದ್ದರು.

ದೈವ ನೀಡಿದ ಭರವಸೆಯಿಂದ ಪೊಲೀಸರು, ಎಎನ್ಎಫ್ ಪಡೆಯೊಂದಿಗೆ ಗ್ರಾಮಸ್ಥರು ಹಗಲು ರಾತ್ರಿಯೆನ್ನದೆ ಅರಣ್ಯ ಪ್ರದೇಶ ಶೋಧಿಸಿದ್ದಾರೆ. ಆದರೆ ಎಲ್ಲಿಯೂ ಸುಳಿವು ಇಲ್ಲ. ಡ್ರೋನ್ ಬಳಸಿದರೂ ಪ್ರಯೋಜನ ಸಿಕ್ಕಿಲ್ಲ. ಆದರೆ ಎಂಟು ದಿನಗಳ ಬಳಿಕ ವಿವೇಕಾನಂದ ಪತ್ತೆಯಾಗಿದ್ದರು. ವಿವೇಕಾನಂದನನ್ನು ಕರೆದುಕೊಂಡು ಬಂದಿದ್ದು ಅವರ ಸಾಕು ನಾಯಿ. ಎಲ್ಲಿ ಹೋಗಿದ್ದೆ ಅನ್ನುವುದು ಅವನಿಗೆ ಗೊತ್ತಿಲ್ಲ. ಹಾಗಿದ್ದರೆ ಮರಳಿ ಬಂದಿದ್ದಾದರೂ ಹೇಗೆ ಎಂಬುದಕ್ಕೆ ಗ್ರಾಮಸ್ಥರು ಹೇಳುವುದು ಅವನನ್ನು ದೈವವೇ ಕರೆದುಕೊಂಡು ಬಂದಿದೆ ಎಂದು.

8 ದಿನಗಳ ಬಳಿಕ ವಿವೇಕಾನಂದ ತನ್ನ ಮನೆಯಿಂದ 7-8 ಕಿ.ಮೀ. ದೂರದ ಕಬ್ಬಿನಾಲೆ ಸಮೀಪ ನಾಯಿಯೊಂದಿಗೆ ಬಂದಿದ್ದಾನೆ. ಕಬ್ಬಿನಾಲೆಯ ಮನೆಯವರು ಈತನ ಮನೆಯವರಿಗೆ ಮಾಹಿತಿ ನೀಡಿದ್ದು, ಮನೆಯವರು ಅಲ್ಲಿಗೆ ಹೋಗಿ ಕರೆ ತಂದಿದ್ದಾರೆ. ಕೇವಲ ನೀರು ಕುಡಿದು 8 ದಿನ ಕಳೆದಿದ್ದ ವಿವೇಕಾನಂದ ನಿತ್ರಾಣಗೊಂಡಿದ್ದರು. ಮಗ ಮರಳಿ ಮನೆ ಸೇರಿದ ಸಂತಸ ಹೆತ್ತವರಲ್ಲಿ ಕಾಣಿಸಿದರೆ, ದೈವರ ಬಗೆಗಿನ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ. ಕಾಂತಾರ ಸಿನಿಮಾದಲ್ಲಿದೈವ ನರ್ತಕರು ಕಾಡಿನಲ್ಲಿ ಮಾಯವಾಗುವ ದೃಶ್ಯವಿದೆ. ಅದು ನಿಜನಾ ಅಥವಾ ಕಲ್ಪನೆಯಾ ಎಂಬ ಚರ್ಚೆ ಹುಟ್ಟು ಹಾಕಿತ್ತು. ಇಲ್ಲಿಯೂ ಇದೇ ನಡೆದಿದೆ. ಮಗ ಕಾಣೆಯಾದಾಗ ಕೊರಗಜ್ಜನ ಸನ್ನಿಧಿಯಲ್ಲಿ ಕೇಳಿದಾಗ ಆತ ಬದುಕಿದ್ದಾನೆ ಎಂಬ ಉತ್ತರ ದೊರಕಿತ್ತು. ವಾರ ಕಳೆದರೂ ಪತ್ತೆಯಾಗದಿದ್ದಾಗ ಜ್ಯೋತಿಷ್ಯದ ಮೊರೆ ಹೋದಾಗ ಮತ್ತೆ ಆತ ಬದುಕಿದ್ದಾನೆ ಎಂಬ ಉತ್ತರ. ಆತ ಕಾಣೆಯಾಗಲು ಮನೆಯ ಗದ್ದೆಯಲ್ಲಿರುವ ದೈವೀಶಕ್ತಿಯ ಕಲ್ಲನ್ನು ಕಿತ್ತಿದ್ದು ಕಾರಣ. ಆ ಕಲ್ಲನ್ನು ಪತ್ತೆ ಹಚ್ಚಿ ಪೂಜೆ ಮಾಡಿ ಪ್ರಾರ್ಥಿಸಿದರೆ ಮರಳಿ ಬರುತ್ತಾನೆ ಎಂಬ ಉತ್ತರ ಸಿಗುತ್ತದೆ. ಅಚ್ಚರಿ ಎಂಬಂತೆ ಮನೆಯವರು ಅದೇ ರೀತಿ ಮಾಡಿದಾಗ ಆತ ಮರಳಿ ಬಂದಿದ್ದಾನೆ. ಇದರ ಜೊತೆಗೆ ಕೊರಗಜ್ಜನ ಅಭಯ. ಮನೆಯವರು ಕೊರಗಜ್ಜನಿಗೆ ವಿಶೇಷ ಸೇವೆ ನೀಡಲು ತೀರ್ಮಾನಿಸಿದ್ದಾರೆ. ಇನ್ನೊಂದೆಡೆ ಈತನ ಜೀವ ಉಳಿಸಿದ ಸಾಕು ನಾಯಿ ಅಚ್ಚರಿ ಮೂಡಿಸಿದೆ. ನಾಯಿ ವಿಶ್ವಾಸಾರ್ಹ ಜೀವಿ ಅನ್ನುವುದು ಈ ಘಟನೆಯ ಮೂಲಕ ಸಾಬೀತಾಗಿದೆ.

Sulekha