ಮೈಸೂರು ಅರಮನೆಯ ಜಯರಾಮ-ಬಲರಾಮ ದ್ವಾರದ ಗೋಡೆಯಲ್ಲಿ ದೊಡ್ಡ ಬಿರುಕು  

ಮೈಸೂರು ಅರಮನೆಯ ಜಯರಾಮ-ಬಲರಾಮ ದ್ವಾರದ ಗೋಡೆಯಲ್ಲಿ ದೊಡ್ಡ ಬಿರುಕು   

ವಿಶ್ವ ವಿಖ್ಯಾತ ಮೈಸೂರು ಅರಮನೆ ಶತಮಾನಗಳ ಇತಿಹಾಸವಿದೆ. ಆದ್ರೀಗ ಕಳಪೆ ನಿರ್ವಹಣೆಯಿಂದಾಗಿ ಅರಮನೆ ಕುಸಿದು ಬೀಳುವ ಹಂತಕ್ಕೆ ತಲುಪಿದ್ದು, ಒಂದಾದ ಮೇಲೊಂದು ದುರ್ಘಟನೆಗೆ ಸಾಕ್ಷಿಯಾಗುತ್ತದೆ. ಇದೀಗ ಮೈಸೂರು ಅರಮನೆಯ ಜಯರಾಮ-ಬಲರಾಮ ದ್ವಾರದ ಗೋಡೆಯಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿದೆ.

ಇದನ್ನೂ ಓದಿ: ಯುವ ರೈತರನ್ನು ಮದುವೆಯಾಗೋ ಯುವತಿಯರಿಗೆ 5 ಲಕ್ಷ ರೂ. ಪರಿಹಾರ ಕೊಡಿ! – ಸರ್ಕಾರಕ್ಕೆ ಬ್ಯಾಚುಲರ್ಸ್‌ ಹೊಸ ಡಿಮ್ಯಾಂಡ್!‌

ಮಳೆಗಾಲದಲ್ಲಿ ಅರಮನೆ ದರ್ಬಾರ್ ಹಾಲ್ ಸೋರಿಕೆಯಾಗುತ್ತಿದೆ ಎಂದು ವರದಿಯಾಗಿತ್ತು. ಇತ್ತೀಚೆಗಷ್ಟೇ ಅರಮನೆಯ ವರಹಾ ದ್ವಾರದಲ್ಲಿ ಕಟ್ಟಡ ಮೇಲ್ಛಾವಣಿ ಕುಸಿದಿತ್ತು. ಇದೀಗ ಜಯರಾಮ-ಬಲರಾಮ ದ್ವಾರದ ಗೋಡೆಯಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿದೆ.  ಅಲ್ಲದೇ ಜಯರಾಮ ದ್ವಾರಕ್ಕೆ ಹೊಂದಿಕೊಂಡಿರುವ ಒಂಟೆರಾಮಾಚಾರ್ಯ ಆಂಜನೇಯ ದೇವಸ್ಥಾನದ ಕಟ್ಟಡ ಬಿರುಕು ಬಿಟ್ಟಿದೆ. ಬಿರುಕಿನ ಜಾಗದಲ್ಲಿ 20ಕ್ಕೂ ಹೆಚ್ಚು ಇಟ್ಟಿಗೆಗಳು ಕೆಳಗೆ ಬಿದ್ದಿದ್ದು ಕಟ್ಟಡ ಬಿರುಕಿನಿಂದ ಕಿಟಕಿಗೆಗೆ ಹಾನಿಯಾಗಿದೆ. ಯಾವುದೇ ಕ್ಷಣದಲ್ಲಿ ಗೋಡೆ ಕುಸಿದು ಬೀಳುವ ಪರಿಸ್ಥಿತಿಯಲ್ಲಿ ಇದೆ.

ಇದೇ ಕಟ್ಟಡದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ನಡೆಯುತ್ತಿತ್ತು. ಕಟ್ಟಡ ಶಿಥಿಲವಾದ ಹಿನ್ನೆಲೆ ಕಚೇರಿ ಸ್ಥಳಾಂತರ ಗೊಂಡಿದೆ. ನಿತ್ಯ ಸಾವಿರಾರು ಪ್ರವಾಸಿಗರು ಮೈಸೂರು ಅರಮನೆ ನೋಡಲು ಬರುತ್ತಾರೆ. ಆದಾಯ ಮಾತ್ರ ನೋಡುವ ಅಧಿಕಾರಿಗಳು, ನಿರ್ವಹಣೆ ಮಾಡದಿರುವುದೇ ವಿಪರ್ಯಾಸ.

ಮೈಸೂರು ರಾಜವಂಶಸ್ಥರು-ಸರ್ಕಾರದ ನಡುವಿನ ತಿಕ್ಕಾಟ ಒಂದ್ಕಡೆಯಾದ್ರೆ, ಮತ್ತೊಂದ್ಕಡೆ  ರಾಜವಂಶಸ್ಥ ಯದುವೀರ್ ಮಾಡಿದ್ದ ಗುದ್ದಲಿ ಪೂಜೆಯ ಪ್ರಾಜೆಕ್ಟ್‌ಗೆ ಸ್ವತಃ ರಾಜವಂಶಸ್ಥೆ ಪ್ರಮೋದಾ ದೇವಿ ಸ್ಟೇ ತಂದಿದ್ದಾರೆ. ಸರ್ಕಾರ- ರಾಜಮನೆತನದ ಬಹಿರಂಗ ಯುದ್ಧಕ್ಕೆ ಇದೀಗ ಅಂತರ್ ಯುದ್ಧವೂ ಸೇರ್ಪಡೆಯಾಗಿದೆ. ಇವೆಲ್ಲದ್ರ ನಡುವೆ ಅರಮನೆ ಕಳಪೆ ನಿರ್ವಹಣೆಗೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ.

Shwetha M