ಕೃಷ್ಣಾ ನದಿ ದಂಡೆಯಲ್ಲಿ ಮೊಸಳೆಗಳ ದಂಡು – ಹಿಂಡು ಹಿಂಡಾಗಿ ಬಂದು ಗ್ರಾಮದಲ್ಲಿ ಸವಾರಿ..!

ಕೃಷ್ಣಾ ನದಿ ದಂಡೆಯಲ್ಲಿ ಮೊಸಳೆಗಳ ದಂಡು – ಹಿಂಡು ಹಿಂಡಾಗಿ ಬಂದು ಗ್ರಾಮದಲ್ಲಿ ಸವಾರಿ..!

ರಾಯಚೂರಿನಲ್ಲಿ ಮಳೆ ಬಂದ ಮೇಲೆ ಬಿಸಿಲಿನಿಂದ ಕಂಗೆಟ್ಟಿದ್ದ ಜನ ಕೂಲ್ ಆಗಿದ್ದಂತೂ ಸತ್ಯ. ಜೊತೆಗೆ ಕೃಷ್ಣಾ ನದಿಯ ಒಡಲು ತುಂಬಿದ್ದು, ನೀರಿನ ಪ್ರಮಾಣ ಕೂಡಾ ಹೆಚ್ಚಾಗಿದೆ. ಇದು ಬಿಸಿಲನಗರಿಯ ರೈತರಿಗೆ ಖುಷಿ ಕೊಟ್ಟಿದೆ. ಆದರೆ ಕಳೆದೆರಡು ದಿನಗಳಿಂದ ಕೃಷ್ಣಾ ತೀರದ ಜನ ಜೀವಭಯದಲ್ಲೇ ಬದುಕುತ್ತಿದ್ದಾರೆ. ಯಾಕೆಂದರೆ, ಕೃಷ್ಣೆಯ ಮಡಿಲಲ್ಲಿ ಹಾಯಾಗಿದ್ದ ಮೊಸಳೆಗಳು ಈಗ ಟೂರ್‌ಗೆ ಹೊರಟಂತೆ ದಂಡು ದಂಡಾಗಿ ನದಿ ದಂಡೆಯತ್ತ ಬರುತ್ತಿವೆ. ಹೀಗೆ ಬಂದು ನದಿ ದಂಡೆಯಲ್ಲಿಯೇ ಬೀಡು ಬಿಟ್ಟಿದ್ದರೆ ಒಳ್ಳೆಯದಿತ್ತು. ಆದರೆ, 20ರಿಂದ 30 ಮೊಸಳೆಗಳಿಗೆ ಊರೇ ಇಷ್ಟವಾಗಿ ಬಿಟ್ಟಿದೆ. ನದಿಯಿಂದ ಊರಿಗೆ, ಊರಿಂದ ನದಿಗೆ ಮೊಸಳೆಗಳ ಹಿಂಡು ತಿರುಗಾಡುತ್ತಿವೆ.

ಇದನ್ನೂ ಓದಿ:  ತೆಲಂಗಾಣದಲ್ಲಿ ಭಾರಿ ಮಳೆ.. ಪ್ರವಾಹ – ಜೀವ ಉಳಿಸಿಕೊಳ್ಳಲು ಮರವೇರಿ ಕುಳಿತ ವ್ಯಕ್ತಿ!

ಮಾಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಹೆಚ್ಚಾಗಿರೋದ್ರಿಂದ ಬಾಗಲಕೋಟೆಯ ಆಲಮಟ್ಟಿ ಜಲಾಶಯಕ್ಕೆ ನೀರು ಹರಿಬಿಡಲಾಗಿತ್ತು. ಇದರ ಬೆನ್ನಲ್ಲೇ ಈಗ ಅಲ್ಲಿಂದ ಯಾದಗಿರಿಯ ಬಸವಸಾಗರ ಜಲಾಶಯಕ್ಕೆ ನೀರು ಬಿಡಲಾಗಿದೆ. ಈಗ ಬಸವಸಾಗರ ಜಲಾಶಯದಿಂದ ಹೆಚ್ಚುವರಿ ನೀರನ್ನು ಬಿಡಲಾಗಿದ್ದು ರಾಯಚೂರು ಜಿಲ್ಲೆಯ ಕೃಷ್ಣಾ ನದಿ ತಿರದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಸಿಲು ಸೂಚಿಸಲಾಗಿದೆ. ಈ ಮಧ್ಯೆ ರಾಯಚೂರು ತಾಲ್ಲೂಕಿನ ಆತ್ಕೂರು ಗ್ರಾಮದ ಕೃಷ್ಣಾ ನದಿ ತೀರದಲ್ಲಿ 20 ಕ್ಕೂ ಹೆಚ್ಚು ಮೊಸಳೆಗಳ ದಂಡು ಊರತ್ತ ದಾಂಗುಡಿಯಿಟ್ಟಿವೆ. ಕೃಷ್ಣಾ ನದಿ ತೀರದಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಮೊಸಳೆಗಳು ಆಹಾರಕ್ಕಾಗಿ ನದಿ ದಡದತ್ತ ಬರುತ್ತಿವೆ. ಇನ್ನು ಈ ಭಾಗದಲ್ಲಿ ನದಿ ತೀರದಲ್ಲಿ ಜಮೀನು ಹೊಂದಿರೊ ರೈತರು ವ್ಯವಸಾಯಕ್ಕಾಗಿ ಇದೇ ಕೃಷ್ಣಾ ನದಿ ತೀರಕ್ಕೆ ಬರಬೇಕು. ಇನ್ನು ನದಿ ದಾಟಲು ತೆಪ್ಪವೇ ಬೇಕು. ಹೀಗೆ ರಾಶಿ ರಾಶಿ ಮೊಸಳೆಗಳನ್ನು ಕಂಡ ಮೇಲೆ ಜನ ಹೆದರಿ ಹೋಗಿದ್ದಾರೆ. ನದಿ ತೀರಕ್ಕೆ ಬಿಡಿ, ಮನೆಯಿಂದ ಹೊರಗೆ ಬರಲು ಕೂಡಾ ಮೊಸಳೆಗಳ ಭಯ ಗ್ರಾಮಸ್ಥರನ್ನು ಕಾಡುತ್ತಿದೆ.

suddiyaana