ಮದುವೆಯಾಗಲು ಇಟಲಿಗೆ ಹೋದ ವಧು.. ಮನೆಯಲ್ಲೇ ಬಾಕಿಯಾದ ವರ! – ವಿವಾಹಕ್ಕೆ ಸಾಕು ನಾಯಿಯೇ ಅಡ್ಡಿ!

ಮದುವೆಯಾಗಲು ಇಟಲಿಗೆ ಹೋದ ವಧು.. ಮನೆಯಲ್ಲೇ ಬಾಕಿಯಾದ ವರ! – ವಿವಾಹಕ್ಕೆ ಸಾಕು ನಾಯಿಯೇ ಅಡ್ಡಿ!

ಮದುವೆ ಎಂಬುವುದು ಪ್ರತಿಯೊಬ್ಬರ ಜೀವನದಲ್ಲಿ ಒಮ್ಮೆ ನಡೆಯುವ ಅವಿಸ್ಮರಣೀಯ ಕ್ಷಣ. ಈ ಮದುರ ಕ್ಷಣವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ಹೊಸ ಹೊಸ ಪ್ಲಾನ್‌ ಗಳನ್ನು ಮಾಡುತ್ತಾರೆ. ತಮ್ಮ ಬಜೆಟ್‌ಗೆ ತಕ್ಕಂತೆ ಮದುವೆ ಸಮಾರಂಭ ಆಯೋಜನೆ ಮಾಡುತ್ತಾರೆ. ಹೀಗೆ ಮದುವೆಯಾಗಲು ಹೊರಟ ಜೋಡಿ ತಮ್ಮ ಮದುವೆ ಇಟಲಿಯಲ್ಲಿರಬೇಕೆಂದು ಬಯಸಿದ್ದರು. ಇದಕ್ಕಾಗಿ ಇಟಲಿಯಲ್ಲಿ ಮಂಟಪ, ಉಳಿದುಕೊಳ್ಳಲು ಕೊಠಡಿ, ಎಲ್ಲಾ ತಯಾರಿ ಮಾಡಿದ್ದಾರೆ. ಮದುವೆ ಕೆಲವೇ ಕೆಲವು ದಿನಗಳು ಬಾಕಿ ಉಳಿದಿದ್ದು, ವಧು ಹಾಗೂ ಆಕೆಯ ಮನೆಯವರು ಇಟಲಿಗೆ ತೆರಳಿದ್ದಾರೆ. ಆದರೆ ವರ ಮಾತ್ರ ಬಾಕಿಯಾಗಿದ್ದಾನೆ. ಆತನ ಮದುವೆಗೆ ತಾನು ಸಾಕಿದ್ದ ನಾಯಿಯೇ ಅಡ್ಡಿಯಾಗಿದೆ.

ಅನೇಕರು ತಮ್ಮ ಮನೆಯಲ್ಲಿ ನಾಯಿ ಸಾಕುತ್ತಾರೆ. ಕೆಲವೊಂದು ನಾಯಿಗಳು ಮನೆ ಮಾಲೀಕ ಹೇಳಿದ ಮಾತು ಕೇಳಲ್ಲ. ತುಂಬಾ ಉಪದ್ರ ಕೊಡುತ್ತವೆ. ಏನಾದರೂ ಕಿತಾಪತಿ ಮಾಡುತ್ತಿರುತ್ತವೆ. ಇಲ್ಲೊಂದು ನಾಯಿಯ ಕಿತಾಪತಿಯಿಂದಾಗಿ ಮದುವೆಯಾಗಲು ಇಟಲಿಗೆ ತೆರಳಬೇಕಾಗಿದ್ದ ವರ ಮನೆಯಲ್ಲಿಯೇ ಬಾಕಿಯಾಗಿದ್ದಾನೆ.

ಇಂಗ್ಲೆಂಡ್‌ನ ಬಾಸ್ಟನ್ ನಗರದ ನಿವಾಸಿ ಡೋನಾಟೋ ಫ್ರಾಟ್ಟಾರೋಲಿ ತನ್ನ ಬಹುಕಾಲದ ಗೆಳತಿಯನ್ನು ವರಿಸಲು ಸಜ್ಜಾಗಿದ್ದಾನೆ. ಆಗಸ್ಟ್‌ 31 ರಂದು ಮದುವೆ ನಿಗಧಿಮಾಡಲಾಗಿತ್ತು. ಎರಡು ಕುಟುಂಬದಲ್ಲಿ ಸಂಭ್ರಮ ಮನೆಮಾಡಿತ್ತು. ಮದುವೆಯನ್ನು ಮತ್ತಷ್ಟು ಸ್ಮರಣೀಯವಾಗಿಸಲು ಇಟಲಿ ಪ್ರಖ್ಯಾತ ಸ್ಥಳದಲ್ಲಿ ಹೊಸ ಬದುಕಿಗೆ ಕಾಲಿಡಲು ಬಯಸಿದ್ದಾರೆ. ಇದಕ್ಕಾಗಿ ಮದುವೆ ಮಂಟಪ ಸೇರಿದಂತೆ ಎಲ್ಲಾ ಬುಕಿಂಗ್ ಮಾಡಲಾಗಿತ್ತು.

ಇದನ್ನೂ ಓದಿ: ಕೊಲೆ ಕೇಸ್​ನಲ್ಲಿ ಪತಿ, ಮಗ ಜೈಲು.. ಪತ್ನಿ ನೇಣಿಗೆ ಶರಣು – ಸಾವಿನ ಸುದ್ದಿ ಕೇಳಿ ಜೈಲಿನಲ್ಲೇ ಗಂಡನಿಗೆ ಹೃದಯಾಘಾತ

ವರ ಬೋಸ್ಟನ್ ನಗರದ ನಿವಾಸಿಯಾಗಿದ್ದರೆ, ವಧು ಅಮೆರಿಕಾ ಪ್ರಜೆ. ಬೋಸ್ಟನ್ ಸಿಟಿ ಹಾಲ್‌ಗೆ ತೆರಳಿದ ವರ ಹಾಗೂ ವಧು, ಮದುವೆಯ ಕೆಲ ಕಾನೂನು ಪ್ರಕ್ರಿಯೆ ಮುಗಿಸಬೇಕಿತ್ತು. ಅರ್ಜಿ ಭರ್ತಿ, ಫೋಟೋ, ದಾಖಲೆಗಳ ಪ್ರತಿ ಸೇರದಂತೆ ಹಲವು ಕೆಲಸಗಳನ್ನು ಮುಗಿಸಿದ್ದಾರೆ. ಆದರೆ ಸರ್ಕಾರಿ ಕೆಲಸವಾಗಿದ್ದ ಕಾರಣ ದಿನವಿಡಿ ಕಳೆಯಬೇಕಾಗಿ ಬಂದಿದೆ. ಇತ್ತ ವರನ ಮನೆಯಲ್ಲಿದ್ದ ಮುದ್ದಿನ ಸಾಕು ನಾಯಿಗೆ ಆಕ್ರೋಶಗೊಂಡಿದೆ.

ಬೆಳಗ್ಗೆಯಿಂದ ಸಂಜೆವರೆಗೆ ಮನೆಯಲ್ಲಿ ಯಾರೂ ಇಲ್ಲ. ಮನೆಯೊಳಗೆ ಬಂಧಿಯಾಗಿದ್ದ ನಾಯಿ ಸಿಟ್ಟು ಹೆಚ್ಚಾಗಿದೆ. ಹೀಗಾಗಿ ವರನ ಟೇಬಲ್ ಮೇಲಿದ್ದ ಪಾಸ್‌ಪೋರ್ಟ್ ಸೇರಿದಂತೆ ಇತರ ಕೆಲ ಫೈಲ್‌ಗಳನ್ನು ಕಚ್ಚಿ ತೆಗೆದು ಆಕ್ರೋಶ ಹೊರಹಾಕಿದೆ. ಇದರಲ್ಲಿ ವರನ ಪಾಸ್‌ಪೋರ್ಟ್ ಕೂಡ ಇತ್ತು. ನಾಯಿ ಈ ಪಾಸ್‌ಪೋರ್ಟ್ ಜಗಿದು ಬಹುತೇಕ ಬಾಗಿ ನುಂಗಿದೆ. ಕೆಲವು ಚೂರುಗಳನ್ನು ಮಾತ್ರ ಬಿಟ್ಟಿದೆ.

ಮದುವೆ ಅರ್ಜಿ ಭರ್ತಿ ಸೇರಿದಂತೆ ಇತರ ಕೆಲಸ ಮುಗಿಸಿ ಮನೆಗೆ ಬಂದ ವರನಿಗೆ ಶಾಕ್ ಆಗಿದೆ. ಕಾರಣ ತನ್ನ ಪಾಸ್‌ಪೋರ್ಟ್ ನಾಯಿ ಕಚ್ಚಿ ತಿಂದಿದೆ. ಒಂದು ಕ್ಷಣ ವರನಿಗೆ ದಿಕ್ಕೇ ತೋಚದಂತಾಗಿದೆ. ತಕ್ಷಣ ವಧುವಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ಇರದಿಂದಾಗಿ ಆಕೆಯೂ ಕೂಡ ಆತಂಕಗೊಂಡಿದ್ದಾಳೆ. ಚೂರು ಚೂರಾದ ಪಾಸ್‌‌ಪೋರ್ಟ್ ಹಿಡಿದು ಪಾಸ್‌ಪೋರ್ಟ್ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.

ಮರುದಿನ ಬೆಳಗ್ಗೆ ಪಾಸ್‌ಪೋರ್ಟ್ ಕಚೇರಿಗೆ ತೆರಳಿದ ವರ ನಡೆದ ಘಟನೆ ವಿವರಿಸಿ ಅತೀ ಶೀಘ್ರದಲ್ಲಿ ಪಾಸ್‌ಪೋರ್ಟ್ ನವೀಕರಿಸುವಂತೆ ಮನವಿ ಮಾಡಿದ್ದಾನೆ. ಇದಕ್ಕೆ ತಕ್ಷಣವೇ ಸ್ಪಂದಿಸಿರುವ ಪಾಸ್‌ಪೋರ್ಟ್ ವಿಭಾದ ಅಧಿಕಾರಿಗಳು ಪ್ರಕ್ರಿಯೆ ಆರಂಭಿಸಿದ್ದಾರೆ. ಆದರೆ ಕೆಲ ಕಾನೂನು ಪ್ರಕ್ರಿಯೆ ಕಾರಣ ಪಾಸ್‌ಪೋರ್ಟ್ ಕೈಸೇರಲು ಕೆಲ ದಿನಗಳು ಹಿಡಿಯುವ ಸಾಧ್ಯತೆ ಇದೆ.

ಆಗಸ್ಟ್ 29ರೊಳಗೆ ಪಾಸ್‌ಪೋರ್ಟ್ ಕೈಸೇರುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಭರವಸೆ ಮೇರೆಗೆ ವಧು ಹಾಗೂ ಆಕೆ ಕುಟುಂಬಸ್ಥರಿಗೆ ಇಟಲಿಗೆ ತೆರಳಲು ವರ ಸೂಚಿಸಿದ್ದಾನೆ. ತಾನು ಪಾಸ್‌ಪೋರ್ಟ್ ಕೈಸಿಕ್ಕ ಬೆನ್ನಲ್ಲೇ ಇಟಲಿಗೆ ಬರುವುದಾಗಿ ಹೇಳಿದ್ದಾನೆ. ಒಂದು ವೇಳೆ ಪಾಸ್‌ಪೋರ್ಟ್ ಕೈಸೇರದಿದ್ದರೆ ವಧುವಿನ ತವರು ಅಮೆರಿಕದಲ್ಲಿ ಆಯೋಜಿಸಿರುವ ಆರತಕ್ಷತೆಯನ್ನೇ ಮದುವೆಯಾಗಿ ಪರಿವರ್ತಿಸುವ ಪ್ಲಾನ್ ಮಾಡಿದ್ದಾನೆ.

suddiyaana