ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಭರ್ಜರಿ ಶತಕ – ಯಶಸ್ವಿ ಜೈಸ್ವಾಲ್ ಈಗ ಹಲವು ದಾಖಲೆಗಳ ಸರದಾರ

ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಭರ್ಜರಿ ಶತಕ – ಯಶಸ್ವಿ ಜೈಸ್ವಾಲ್ ಈಗ ಹಲವು ದಾಖಲೆಗಳ ಸರದಾರ

ಪ್ರಪಥಮ ಟೆಸ್ಟ್ ಪಂದ್ಯದಲ್ಲೇ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿ ಹಲವು ದಾಖಲೆಗಳ ಸರದಾರನಾಗಿ ಮೆರೆದಿದ್ದಾರೆ. ಟೀಂ ಇಂಡಿಯಾದಲ್ಲಿ ಅಂತರಾಷ್ಟ್ರೀಯ ವೃತ್ತಿ ಜೀವನ ಆರಂಭಿಸುತ್ತಿರುವ ಯಶಸ್ವಿ ಜೈಸ್ವಾಲ್ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲೇ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಕೆರಿಬಿಯನ್ ನಾಡಲ್ಲಿ 52 ವರ್ಷಗಳ ಹಿಂದೆ ಸುನಿಲ್ ಗವಾಸ್ಕರ್ ಮಾಡಲು ಸಾಧ್ಯವಾಗದ, 12 ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ಮಾಡಲು ಸಾಧ್ಯವಾಗದ ಸಾಧನೆಯನ್ನು 21 ವರ್ಷದ ಯಶಸ್ವಿ ಜೈಸ್ವಾಲ್ ಮಾಡಿ ತೋರಿದ್ದಾರೆ.

ಇದನ್ನೂ ಓದಿ: ಪಾನಿಪೂರಿ ಮಾರುತ್ತಿದ್ದ ಹುಡುಗ ಈಗ ಕ್ರಿಕೆಟ್ ಜಗತ್ತಿನ ಹೀರೋ – ಜೈಸ್ವಾಲ್ ಯಶಸ್ಸಿನ ಹಿಂದಿದೆ ರೋಚಕ ಕಥೆ..!

ಡೊಮಿನಿಕಾದಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್‌ ಎರಡನೇ ದಿನದಂದು ಯಶಸ್ವಿ ಜೈಸ್ವಾಲ್ ದಾಖಲೆಯ ಶತಕ ಸಿಡಿಸಿದ್ದಾರೆ. ಮೊದಲ ದಿನದಾಟದಂತ್ಯಕ್ಕೆ 40 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದ ಯಶಸ್ವಿ, ಎರಡನೇ ದಿನದಾಟದಲ್ಲಿ ತಮ್ಮ ಇನ್ನಿಂಗ್ಸ್ ಮುಂದುವರೆಸಿ ಸೆಂಚುರಿ ಸರದಾರನಾಗಿ ಮೆರೆದರು. ಈ ಶತಕದೊಂದಿಗೆ ಯಶಸ್ವಿ ಜೈಸ್ವಾಲ್ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯನ್ನೂ ಬರೆದರು. ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಭಾರತದ 17 ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಜೊತೆಗೆ ವೆಸ್ಟ್ ಇಂಡೀಸ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆ ಬರೆದರು.

1971 ರಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಚೊಚ್ಚಲ ಪಂದ್ಯವನ್ನಾಡಿದ್ದ ಸುನಿಲ್ ಗವಾಸ್ಕರ್‌ಗೆ ಮೊದಲ ಪಂದ್ಯದಲ್ಲಿ ಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. ಅದೇ ಸಮಯದಲ್ಲಿ, 2011 ರಲ್ಲಿ ವಿಂಡೀಸ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕಿಂಗ್ ಕೊಹ್ಲಿಗೂ ಕೂಡ ಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಇಬ್ಬರು ದಿಗ್ಗಜರು ಮಾಡಲಾಗದ್ದನ್ನು, ಯುವ ಬ್ಯಾಟರ್ ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ಯಶಸ್ವಿ ಅವರ ಈ ಶತಕ ವಿಶೇಷವಷ್ಟೇ ಅಲ್ಲ, ಇನ್ನು ಕೆಲವು ಸಾಧನೆಗಳೂ ಅವರ ಖಾತೆ ಸೇರಿವೆ. ಈ ಚೊಚ್ಚಲ ಶತಕದೊಂದಿಗೆ ವಿದೇಶಿ ನೆಲದಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿ ಶತಕ ಬಾರಿಸಿದ ಭಾರತದ ಮೊದಲ ಆರಂಭಿಕ ಬ್ಯಾಟರ್ ಎಂಬ ದಾಖಲೆಯೂ ಇವರ ಹೆಸರಿಗೆ ಸೇರಿದೆ.

suddiyaana