ಶಾಲೆಯಲ್ಲಿ ವಿದ್ಯಾರ್ಥಿನಿಯರ ನಡುವೆ ಚಾಲೆಂಜ್ : 45 ಮಾತ್ರೆ ಸೇವಿಸಿದ ಬಾಲಕಿ!- ಮುಂದೇನಾಯ್ತು ಗೊತ್ತಾ?

ಶಾಲೆಯಲ್ಲಿ ವಿದ್ಯಾರ್ಥಿನಿಯರ ನಡುವೆ ಚಾಲೆಂಜ್ : 45 ಮಾತ್ರೆ ಸೇವಿಸಿದ ಬಾಲಕಿ!- ಮುಂದೇನಾಯ್ತು ಗೊತ್ತಾ?

ಕೊಯಮತ್ತೂರು: ಕಿರಿಯರಿಂದ ಹಿರಿಯರ ವರೆಗೂ ಎಲ್ಲರೂ ಬೆಟ್ಸ್ ಕಟ್ಟುತ್ತಾರೆ. ಕ್ರಿಕೆಟ್, ಕಬಡ್ಡಿ ಮ್ಯಾಚ್ ಇರೋವಾಗ ಕೆಲವರು 500 ರೂಪಾಯಿ, ಸಾವಿರ ರೂಪಾಯಿಗೆ ಬೆಟ್ ಕಟ್ಟುತ್ತಾರೆ. ಇನ್ನೂ ಸ್ಕೂಲ್ ಗಳಲ್ಲಿ ಕೂಡ ಮಕ್ಕಳು ಮಾತೆತ್ತಿದ್ರೆ ಸಾಕು ಬೆಟ್ಸಾ, ಚಾಲೆಂಜಾ ಅಂದ್ಬಿಡ್ತಾರೆ. ಬೆಟ್ಸ್ ನಲ್ಲಿ ಸೋತವರು ಗೆದ್ದವರ ಮಾತನ್ನು ಕೇಳಬೇಕು, ಗೆದ್ದವರಿಗೆ ಗಿಫ್ಟ್ ಕೊಡಬೇಕು ಅಂತಾ ಫಿಕ್ಸ್ ಮಾಡಿ ಆಟಾನೂ ಆಡ್ತಾರೆ. ಆದರೆ ಇಲ್ಲೊಬ್ಬಳು ಬಾಲಕಿ ಬೆಟ್ಸ್ ನಲ್ಲಿ ಗೆಲ್ಲೋಕೆ ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ.

ಇದನ್ನೂ ಓದಿ: ಮಹಾಮಾರಿ H3N2 ವೈರಸ್ ಗೆ ಕರ್ನಾಟಕದಲ್ಲಿ ಮೊದಲ ಬಲಿ

ತಮಿಳುನಾಡಿನ ಕೊಯಮತ್ತೂರಿನಲ್ಲಿ ಈ ಘಟನೆ ನಡೆದಿದೆ. ಊಟಿ ಪುರಸಭೆಯಿಂದ ನಡೆಸಲ್ಪಡುವ ಉರ್ದು ಮಾಧ್ಯಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರ ಕೋಣೆಯಲ್ಲಿ ಕಬ್ಬಿಣಾಂಶದ ಮಾತ್ರೆಗಳನ್ನು ಇಟ್ಟಿದ್ದರು. ಈ ಮಾತ್ರೆಯನ್ನು ನೋಡಿದ 8ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಯಾರು ಹೆಚ್ಚು ಮಾತ್ರೆಗಳನ್ನು ಸೇವಿಸುತ್ತಾರೆ ಅಂತಾ  ಬೆಟ್ಸ್ ಕಟ್ಟಿದ್ದಾರೆ. ಬೆಟ್ಸ್ ನಲ್ಲಿ ತಾನೇ ಗೆಲ್ಲಬೇಕು ಅಂತಾ ವಿದ್ಯಾರ್ಥಿನಿಯೊಬ್ಬಳು ಬರೋಬ್ಬರಿ 45 ಕಬ್ಬಿಣಾಂಶ  ಮಾತ್ರೆಗಳನ್ನು ಸೇವಿಸಿದ್ದಾಳೆ. ಇದರ ಪರಿಣಾಮ ಆಕೆ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಈಕೆಯೊಂದಿಗೆ ಮಾತ್ರೆಗಳನ್ನು ಸೇವಿಸಿದ ಉಳಿದ ಮೂವರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ 13 ವರ್ಷದ ಬಾಲಕಿಯ ಸ್ಥಿತಿ ಗಂಭೀರವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಚೆನ್ನೈನ ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ  ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.

ಕಬ್ಬಿಣಾಂಶ ಮತ್ತು ಫೋಲಿಕ್ ಆಸಿಡ್ ಮಾತ್ರೆಗಳ ಅತಿಯಾದ ಸೇವನೆಯಿಂದ ಉಂಟಾದ ಲಿವರ್ ವೈಫಲ್ಯದಿಂದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಮತ್ತೊಬ್ಬ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಕಬ್ಬಿಣದ ಮಾತ್ರೆ ಯಾವಾಗ ತಿನ್ನಬೇಕು?

ದೇಹದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾದರೆ ರಕ್ತಹೀನತೆಯ ಸಮಸ್ಯೆ ಎದುರಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಅನೀಮಿಯಾ ಸಮಸ್ಯೆ ಎಂದೂ ಕರೆಯಲಾಗುತ್ತದೆ. ಈ ಸಮಸ್ಯೆ ವಿಪರೀತ ಮಟ್ಟಕ್ಕೆ ಹೋದರೆ, ಅನಾರೋಗ್ಯ ಸಮಸ್ಯೆ ಕಾಡಲು ಶುರುವಾಗಬಹುದು. ಹೀಗಾಗಿ ಇಂಥಾ ಸಮಸ್ಯೆ ಕಾಡಬಾರದು ಅಂದ್ರೆ ಕೆಲವೊಂದು ಆರೋಗ್ಯಕಾರಿ ಆಹಾರಗಳನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಬೇಕು. ಅಥವಾ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಕಾಡಿದರೆ ಕಬ್ಬಿಣಾಂಶ ಮಾತ್ರೆಗಳನ್ನು ನುಂಗುವಂತೆ ಸಹ ವೈದ್ಯರು ಸಲಹೆ ನೀಡುತ್ತಾರೆ. ಅದಲ್ಲದೆ ನಿರ್ಧಿಷ್ಟ ಕಾರಣವಿಲ್ಲದೆ ಕಬ್ಬಿಣಾಂಶ ಮಾತ್ರೆ ಮಾತ್ರವಲ್ಲ ಇತರ ಯಾವುದೇ ಸಪ್ಲಿಮೆಂಟ್‌ನ್ನು ತೆಗೆದುಕೊಳ್ಳಬಾರದು. ಇಂಥಾ ಸಪ್ಲಿಮೆಂಟ್ಸ್‌ ತೆಗೆದುಕೊಳ್ಳುವ ಸಂದರ್ಭದಲ್ಲಿ ತಪ್ಪದೇ ವೈದ್ಯರ ಜೊತೆ ಸಮಾಲೋಚನೆ ನಡೆಸಬೇಕು.

suddiyaana