ಜೀವ ಉಳಿಸಿಕೊಳ್ಳಲು ಸತತ 48 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿದ ಮೀನುಗಾರ – ಮೃತ್ಯುವನ್ನು ಗೆದ್ದು ಬಂದ ಅದೃಷ್ಟವಂತ

ಜೀವ ಉಳಿಸಿಕೊಳ್ಳಲು ಸತತ 48 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿದ ಮೀನುಗಾರ – ಮೃತ್ಯುವನ್ನು ಗೆದ್ದು ಬಂದ ಅದೃಷ್ಟವಂತ

ಅವನೊಬ್ಬ ಮೀನುಗಾರ. ಸಮುದ್ರವೇ ಅವನ ಬದುಕು. ನಂಬಿದ ಸಮುದ್ರ ಕೂಡಾ ಅವನ ಕೈಬಿಡಲಿಲ್ಲ. ತನ್ನನ್ನೇ ನಂಬಿ ಹಗಲಿರುಳು ದುಡಿಯುತ್ತಿದ್ದ ಮೀನುಗಾರನ ಪ್ರಾಣವನ್ನು ಬಹುಶಃ ಸಮುದ್ರವೇ ಕಾಪಾಡಿರಬೇಕು. ಇಲ್ಲದಿದ್ದರೆ ಎರಡು ದಿನ, ಹಗಲು ರಾತ್ರಿ, 48 ಗಂಟೆಗಳ ಕಾಲ ಸಮುದ್ರಕ್ಕೆ ಬಿದ್ದವನು ಈಜುತ್ತಲೇ ಇರುವುದು ಅಂದರೆ ಅಂದಾಜಿಸಲು ಕೂಡಾ ಸಾಧ್ಯವಿಲ್ಲ. ಎರಡು ದಿನಗಳವರೆಗೂ ಈಜುತ್ತಲೇ ತನ್ನ ಪ್ರಾಣವನ್ನು ಉಳಿಸಿಕೊಂಡ ಯುವಕ ನಿಜಕ್ಕೂ ಅದೃಷ್ಟವಂತನೇ.

ಇದನ್ನೂ ಓದಿ: ತಾನು ಮುಳುಗಿದರೂ ಭಕ್ತನನ್ನು ಉಳಿಸಿದ ಗಣೇಶ! – ಸಮುದ್ರದಲ್ಲಿ ಕಣ್ಮರೆಯಾಗಿದ್ದ ಬಾಲಕ 36 ಗಂಟೆಗಳ ಬಳಿಕ ಪ್ರತ್ಯಕ್ಷ!

ತಮಿಳುನಾಡಿನ 8 ಜನರ ತಂಡ ಆಳ ಸಮುದ್ರ ಮೀನುಗಾರಿಕೆಗೆ ಅರಬ್ಬಿ ಸಮುದ್ರಕ್ಕೆ ಇಳಿದಿದ್ದರು. ಈ ತಂಡದಲ್ಲಿ ಇದ್ದ 25 ವರ್ಷದ ಮುರುಘನ್ ಎಂಬ ಮೀನುಗಾರ ಶನಿವಾರ ರಾತ್ರಿ ಮೂತ್ರ ವಿಸರ್ಜನೆಗೆ ಬೋಟ್‌ನ ಅಂಚಿಗೆ ಹೋಗುತ್ತಾನೆ. ಈ ವೇಳೆ ಜೋರಾದ ಗಾಳಿಗೆ ಮುರುಘನ್ ಆಯತಪ್ಪಿ ಸಮುದ್ರಕ್ಕೆ ಬೀಳುತ್ತಾನೆ. ಮುರುಘನ್ ಸಮುದ್ರದಲ್ಲಿ ಬಿದ್ದಿರುವುದು ಉಳಿದ ಮೀನುಗಾರರಿಗೆ ತಿಳಿದಿರುವುದಿಲ್ಲ. ಎಷ್ಟು ಹೊತ್ತಾದರೂ ಮುರುಘನ್ ಒಳಗಡೆ ಬಾರದಿದ್ದರಿಂದ ಅನುಮಾನಗೊಂಡ ಉಳಿದ ಮೀನುಗಾರರು ಸಮುದ್ರದಲ್ಲಿ ಮುರುಘನನ್ನು ಹುಡುಕಲು ಆರಂಭಿಸುತ್ತಾರೆ. ಆದರೆ ಎರಡು ದಿನ ಕಳೆದರೂ ಮುರುಘನ್ ಪತ್ತೆಯಾಗಲಿಲ್ಲ. ಕೊನೆಗೆ ತಮಿಳುನಾಡು ಮೀನುಗಾರರು ಮುರುಘನ್ ಮೃತಪಟ್ಟಿದ್ದಾನೆ ಎಂದು ಮಾಲಿಕನಿಗೆ ತಿಳಿಸುತ್ತಾರೆ. ಆದರೆ ಮುರುಘನ್ ಜೀವ ಉಳಿಸಿಕೊಳ್ಳಲು ಸಮುದ್ರದಲ್ಲೇ ಈಜುತ್ತಿರುತ್ತಾನೆ. ಇತ್ತ ಮುರುಘನ್ ಪ್ರಾಣ ಉಳಿಸಲು ದೇವರ ರೂಪದಲ್ಲಿ ಬಂದವರೇ ಗಂಗೊಳ್ಳಿ ಮೂಲದ ಮೀನುಗಾರರು.

ಗಂಗೊಳ್ಳಿ ಮೂಲದ ಸಾಗರ್ ಬೋಟ್‌ನ ಮೀನುಗಾರು, ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯುತ್ತಾರೆ. ಗಂಗೊಳ್ಳಿಯಿಂದ ಸುಮಾರು 14 ನಾಟಿಕಲ್ ಮೈಲ್ ದೂರ ಹೋದಾಗ ಮುರುಘನ್ ಇವರಿಗೆ ಕಾಣುತ್ತಾನೆ. ಗಂಗೊಳ್ಳಿ ಮೀನುಗಾರರು ಮುರುಘನ್‌ನ್ನು ರಕ್ಷಣೆ ಮಾಡುತ್ತಾರೆ. ಜೀವ ಉಳಿಸಿಕೊಳ್ಳಲು ಸತತ 43 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿ ಮುರುಘನ್ ನಿತ್ರಾಣಗೊಂಡಿದ್ದನು. ಸರಿಸುಮಾರು ಎರಡು ದಿನಗಳ ಕಾಲ ನಿರಂತರವಾಗಿ ಈಜಿ ಬಸವಳಿದಿದ್ದ ಮೀನುಗಾರ ಮುರುಘನ್‌ನ್ನು ರಕ್ಷಣೆ ಮಾಡಲಾಗಿದೆ. ಮುರುಘನ್‌ಗೆ ಗಂಗೊಳ್ಳಿ ಮೀನುಗಾರರು ಪ್ರಥಮ ಚಿಕಿತ್ಸೆ ನೀಡುತ್ತಾರೆ. ಸಮುದ್ರಕ್ಕೆ ಬಿದ್ದು ಮುರುಘನ್ ಮೃತಪಟ್ಟಿದ್ದಾನೆ ಎಂದು ಶವ ಹುಡುಕುತ್ತಿದ್ದ ತಮಿಳುನಾಡಿನ ಮೀನುಗಾರರ ತಂಡಕ್ಕೆ ಈತ ಬದುಕಿದ್ದನ್ನು ಕಂಡು ಆಶ್ಚರ್ಯವಾಗುತ್ತದೆ. ಬಳಿಕ ಗಂಗೊಳ್ಳಿ ಮೀನುಗಾರರು ಮುರುಘನ್‌ ನ್ನು ತಮಿಳುನಾಡು ಮೀನುಗಾರರಿಗೆ ಒಪ್ಪಿಸುತ್ತಾರೆ.

Sulekha