ಗೂಳಿ ಕಾಳಗ ಬಿಡಿಸಲು ಹೋದ ಕುಡುಕ- ಹೀರೋ ಆಗಲು ಹೋಗಿ ಝೀರೋ ಆದ
ಕೆಲ ವ್ಯಕ್ತಿಗಳು ತಮಗೆ ಭಂಡ ಧೈರ್ಯವಿದೆ ಎಂದು ತೋರಿಸಿಕೊಳ್ಳಲು ಏನೇನೋ ಕಿತಾಪತಿ ಮಾಡುತ್ತಿರುತ್ತಾರೆ. ಇನ್ನೂ ಪಾನಮತ್ತರಾದವರ ಬಗ್ಗೆ ಕೇಳಬೇಕೆ? ತಾವು ಆಡಿದ್ದೇ ಆಟ, ಹೋಗಿದ್ದೇ ರೋಡು ಅಂತ ನಶೆಯಲ್ಲಿ ತೇಲಾಡುತ್ತಿರುತ್ತಾರೆ. ತಾವೇನು ಮಾಡುತ್ತಿದ್ದೇವೆ ಎಂದು ಅವರಿಗೆ ಗೋಚರವೇ ಇರುವುದಿಲ್ಲ. ಯಾರೇ ಸಿಕ್ಕರೂ ಅವರೊಂದಿಗೆ ಜಗಳವಾಡುತ್ತಾರೆ. ಮತ್ತೆ ಅವರೇ ಜಗಳ ಬಿಡಿಸುತ್ತಾರೆ. ಇಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಸಿಗುತ್ತದೆ. ಈಗ ಇಂತಹದ್ದೇ ವಿಡಿಯೋವೊಂದು ವೈರಲ್ ಆಗುತ್ತಿದ್ದು, ವ್ಯಕ್ತಿಯೊಬ್ಬ ಗೂಳಿ ಕಾಳಗ ಬಿಡಿಸಲು ಹೋಗಿ ಪೇಚಿಗೆ ಸಿಲುಕಿದ್ದಾನೆ.
ಇದನ್ನೂ ಓದಿ: ಮದುವೆ ಆಗಿ, ಇಲ್ಲಾ ಅಂದ್ರೆ ಮನೆ ಖಾಲಿ ಮಾಡಿ – ಮನೆ ಮಾಲಕರದ್ದು ಇದೆಂತ ಕಂಡೀಷನ್?
ವೈರಲ್ ಆದ ವಿಡಿಯೋದಲ್ಲಿ, ರಸ್ತೆ ಬದಿಯಲ್ಲಿ ಗೂಳಿ ಕಾಳಗ ನಡೆಯುತ್ತಿರುತ್ತದೆ. ಇದನ್ನು ಜನರು ಪಕ್ಕದಲ್ಲೇ ನಿಂತು ನೋಡುತ್ತಿರುತ್ತಾರೆ. ಈ ವೇಳೆ ವ್ಯಕ್ತಿಯೊಬ್ಬ ಮುಂದೆ ಬರುತ್ತಾನೆ. ಆತನನ್ನು ಇನ್ನೊಬ್ಬ ತಡೆಯಲು ಯತ್ನಿಸುತ್ತಾನೆ. ಆದರೂ ಆತ ಮುಂದೆ ಬಂದು ಗೂಳಿ ಕಾಳಗವನ್ನು ನಿಲ್ಲಿಸಲು ಪ್ರಯತ್ನಿಸುತ್ತಾನೆ. ಒಂದು ಕ್ಷಣ ಗೂಳಿಗಳು ಸುಮ್ಮನೆ ನಿಂತಿವೆ. ಬಳಿಕ ಕೋಪ ಗೊಂಡ ಗೂಳಿಯೊಂದು ಕುಡುಕನನ್ನು ತನ್ನ ಕೊಂಬಿನಿಂದ ಎತ್ತಿ ಬೀಳಿಸಿದೆ. ಎಣ್ಣೆ ಏಟಲ್ಲಿ ಹೀರೋ ಆಗಲು ಹೋದಾತ, ಝೀರೋ ಆಗಿ ಬಂದ ಆತನ ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.
Hasna Zaroori jai ಎಂಬ ಟ್ವಿಟರ್ ಖಾತೆಯಲ್ಲಿಈ ವಿಡಿಯೋ ಪೋಸ್ಟ್ ಮಾಡಿದ್ದು, ಕುಡುಕನ ಪಾಡನ್ನು ಜನ ನಕ್ಕು ನಕ್ಕು ಸುಸ್ತಾಗಿದ್ದಾರೆ. ‘ಜಗತ್ತಿನಲ್ಲಿ ನಾಗರಿಕತೆ ಮುಗಿದಿದೆ ಎಂದು ಯಾರು ಹೇಳುತ್ತಾರೆ. ಇನ್ನೂ ಕೆಲವು ನಾಗರಿಕರು ಹೋರಾಡಲು ಬಯಸುವುದಿಲ್ಲ’ ಎಂದು ವೀಡಿಯೊಗೆ ಶೀರ್ಷಿಕೆ ನೀಡಲಾಗಿದೆ. ಒಬ್ಬ ಬಳಕೆದಾರನು ತಮಾಷೆಯಾಗಿ, ‘ಅಷ್ಟು ಸಭ್ಯನಾಗಿರಬೇಡ’ ಎಂದು ಬರೆದರೆ, ಮತ್ತೊಬ್ಬರು “ಶಾಂತಿ ಮಾಡಲು ಹೋಗಿ ಏನಾಯ್ತು ನೋಡಿ , ಅಯ್ಯಯ್ಯೋ ” ಎಂದು ಬರೆದಿದ್ದಾರೆ.