ಅಮ್ಮನಾದ ಗೊಂಬೆಯೂ ದೂರವಾಯ್ತಾ ಕಂದಮ್ಮ –ಪ್ರೀತಿ ಪಡೆಯಲು ಪಂಚ್ ಕೋತಿಗೆ ವಿಧಿ ಪರೀಕ್ಷೆ..!

ಒಂದು ಗೊಂಬೆ.. ನೋವಾದಾಗ ಅದೇ ಗೊಂಬೆ. ಖುಷಿಯಾದಾಗಲೂ ಅದೇ ಗೊಂಬೆ.. ನಿದ್ದೆ ಬಂದಾಗಲೂ ಅದೇ ಗೊಂಬೆ.. ಅಮ್ಮನ ನೆನಪಾದಾಗಲೆಲ್ಲಾ ಅದೇ ಗೊಂಬೆಯೇ.. ನಿಜ ಹೇಳಬೇಕೆಂದರೆ, ಎಲ್ಲಾ ಮಕ್ಕಳಿಗೂ ಅಮ್ಮನೇ ಪ್ರಪಂಚ. ತಾಯಿಯೇ ಮಕ್ಕಳ ಜಗತ್ತು. ಇದಕ್ಕೆ ಪ್ರಾಣಿಯಾದರೇನು, ಮನುಷ್ಯರಾದರೇನು.. ತಾಯಿಗೆ ಮಗುವೇ, ಮಗುವಿಗೆ ತಾಯಿಯೇ ಲೋಕ. ಆದರೆ, ಇಲ್ಲೊಂದು ಮುದ್ದು ಕೋತಿ ಮರಿಗೆ ಮಾತ್ರ ಗೊಂಬೆಯೇ ತಾಯಿಯಾಗಿತ್ತು. ಗೊಂಬೆಯೇ ಕೋತಿಯ ಜಗತ್ತಾಗಿತ್ತು. ಇದೀಗ ಈ ಗೊಂಬೆ ಕೂಡಾ ಪಂಚ್ ಕೋತಿಯಿಂದ ದೂರಾಗಿದೆ. ಅಲ್ಲಲ್ಲ.. ದೂರ ಮಾಡಲಾಗಿದೆ.
ಇದನ್ನೂ ಓದಿ:ಗೊಂಬೆಯಾದ್ರೂ ನೀನೇ ನನ್ನ ಅಮ್ಮ! – ಹೆತ್ತಮ್ಮ ದೂರ ಮಾಡಿದ್ದಕ್ಕೆ ಗೊಂಬೆಯನ್ನೇ ತಾಯಿ ಅಂದುಕೊಂಡಿರುವ ಕೋತಿ ಮರಿ!
ಜಪಾನ್ನ ಮೃಗಾಲಯದಲ್ಲಿರುವ ಪಂಚ್ ಕೋತಿಯ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಅಮ್ಮನ ಪ್ರೀತಿಯ ಮಹತ್ವವನ್ನು ಜಗತ್ತಿಗೆ ತನ್ನ ಮೂಕ ಭಾಷೆಯಲ್ಲೇ ಸಾರಿದ ಪಂಚ್ ಕೋತಿ ಎಲ್ಲರಿಗೂ ಚಿರಪರಿಚಿತ. ಪಂಚ್ ಕೋತಿ ಮತ್ತು ಗೊಂಬೆಯ ನಡುವಿನ ಸಂಬಂಧಕ್ಕೆ ಇಡೀ ಜಗತ್ತು ಭಾವುಕವಾಗಿತ್ತು. ಪ್ರತಿಯೊಂದು ಮಗುವಿಗೂ ಅಮ್ಮ ಎಷ್ಟು ಮುಖ್ಯ ಅನ್ನೋದನ್ನ ಮತ್ತೆ ಮತ್ತೆ ಅರಿವು ಮಾಡಿಕೊಟ್ಟಿತ್ತು ಪಂಚ್ ಕೋತಿ. ತಾಯಿಯಲ್ಲದ ಕಂದನಿಗೆ ಗೊಂಬೆಯೇ ತಾಯಿಯಾಗಿತ್ತು. ತನ್ನ ಮೇಲೆ ಉಳಿದ ಕೋತಿಗಳು ಎಗರಿ ಬಿದ್ದಾಗ ಅಮ್ಮನ ತೋಳೇ ಆಸರೆ ಅಂತಾ ಓಡೋಡಿ ಬರುವ ಪಂಚ್, ಗೊಂಬೆಯೊಳಗೆ ತನ್ನ ಮುಖವನ್ನಿಟ್ಟು ಮೌನವಾಗಿ ಕಣ್ಣೀರು ಸುರಿಸುತ್ತಿತ್ತು. ಅಮ್ಮನ ಅಪ್ಪುಗೆಯನ್ನ ಗೊಂಬೆಯಿಂದ ಬಯಸುತ್ತಿತ್ತು. ತನ್ನ ಅಸಹಾಯಕತೆಯನ್ನು ಗೊಂಬೆ ಬಳಿ ನಿವೇದನೆ ಮಾಡಿಕೊಳ್ಳುತ್ತಿತ್ತು. ಈ ವಿಡಿಯೋ ನೋಡಿ ಕಣ್ಣೀರಾಗದ ಮನಸುಗಳಿರಲಿಲ್ಲ.. ಅದೆಷ್ಟೋ ಮಂದಿ ಭಾವುಕರಾಗಿದ್ದರು. ಇದೀಗ ಪಂಚ್ ಕೋತಿ ಮತ್ತೊಮ್ಮೆ ಅನಾಥವಾಗಲಿದೆ. ಆದರೆ, ಇದು ಅನಿವಾರ್ಯ ಕೂಡಾ.
ಪಂಚ್ ಕೋತಿಗೆ ಗೊಂಬೆಯೇ ಅಮ್ಮ, ಅಪ್ಪ, ಸ್ನೇಹಿತ ಬಳಗವಾಗಿತ್ತು. ಅದರ ಮೇಲೆ ತಲೆಇಟ್ಟು ಮಲಗುವುದು, ತಿಂಡಿ ಮಾಡುವಾಗಲೂ, ಎಲ್ಲೇ ನಡೆದಾಡುವಾಗಲೂ ಆ ಗೊಂಬೆಯನ್ನೇ ಹೊತ್ತು ತಿರುಗುವ ಪಂಚ್ ಕೋತಿಯಿಂದಆ ಗೊಂಬೆಯನ್ನು ಬೇರೆ ಮಾಡಲಾಗಿದೆ ಎಂಬ ಸುದ್ದಿ ಹೊರಬಿದ್ದಿದೆ. ಒಂದೊಮ್ಮೆ ಆ ಗೊಂಬೆ ಅದರೊಟ್ಟಿಗಿದ್ದರೆ ಉಳಿದ ಕೋತಿಗಳ ಜತೆ ಸ್ನೇಹ ಬೆಳೆಸುವುದಿಲ್ಲ, ಕೊನೆಯವರೆಗೂ ಅದು ಒಂಟಿಯಾಗಿರುವ ಪ್ರಸಂಗ ಬಂದರೂ ಬರಬಹುದು ಈ ದೃಷ್ಟಿಯಿಂದ ಗೊಂಬೆಯನ್ನು ಹಿಂಪಡೆಯಲಾಗುತ್ತದೆ ಎನ್ನುವ ಮಾತು ಕೇಳಿಬರುತ್ತಿದೆ. ಆರು ತಿಂಗಳ ವಯಸ್ಸಿನಲ್ಲಿ ಈ ಕೋತಿಗಳು ಹಾಲು ಕುಡಿಯುವುದು ಬಿಡಬೇಕು ಹಾಗೂ ಸ್ವತಂತ್ರವಾಗಿರಬೇಕು ಇದೇ ನಿಯಮ. ಹಾಗಾಗಿ ಅದರ ಬಳಿ ಇರುವ ಆಟಿಕೆಯನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಜಪಾನ್ ಮೃಗಾಲಯದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಮಕ್ಕಳು ಚಿಕ್ಕವರಿದ್ದಾಗಲೇ ಯಾವುದೇ ಒಂದಕ್ಕೆ ಅಡಿಕ್ಟ್ ಆದರೆ ಅದನ್ನು ಬಿಡಿಸುವುದು ಕಷ್ಟ ಹಾಗೆಯೇ ಕೋತಿಗಳು ಕೂಡ. ಅವರ ಬೆಳವಣಿಗೆಗೆ ಈ ಗೊಂಬೆಗಳು ಅಡ್ಡಿಯಾಗಬಹುದು. ಪಂಚ್ಗೆ ಈಗ 8 ತಿಂಗಳಾಗಿದೆ. ಹೀಗಾಗಿ ಪಂಚ್ ಉಳಿದ ಕೋತಿಗಳ ಜೊತೆ ಬೆರೆಯಬೇಕು. ಉಳಿದ ಮಂಗಗಳ ಜೊತೆ ಸ್ನೇಹ ಬೆಳೆಸಬೇಕು ಎಂಬ ಉದ್ದೇಶದಿಂದ ಗೊಂಬೆಯನ್ನು ದೂರ ಮಾಡಬೇಕು ಎಂದು ಮೃಗಾಲಯದ ಸಿಬ್ಬಂದಿ ತಿಳಿಸಿದ್ದಾರೆ.

ನೋಡಿರಿ

