ನಿನ್ನನ್ನೇ ಮದುವೆಯಾಗುವೆ ಎಂದ ದೈವ ನರ್ತಕ – ಎರಡೇ ದಿನದಲ್ಲಿ ಅದೇ ಮಹಿಳೆ ಜೊತೆ ಪಾತ್ರಿ ಪರಾರಿ!
ಪಂಚೆ ಉಟ್ಟು ಮೈ ಮೇಲೆಲ್ಲಾ ಅರಿಶಿನ ಚೆಲ್ಲಿಕೊಳ್ಳೋದೇನು. ಕಾಂತಾರ ಸಿನಿಮಾ ಸ್ಟೈಲ್‌ನಲ್ಲಿ ಓ…. ಎಂದು ಕೂಗೋದೇನು. ನಿಂತಲ್ಲೇ ಅಲುಗಾಡುತ್ತಾ ತನ್ನ ಮುಂದೆ ನಿಂತಿದ್ದ ಭಕ್ತೆ ಕಡೆ ಕೈತೋರಿಸಿ ನಿನ್ನನ್ನೇ ಮದುವೆಯಾಗೋದಾಗಿ ಎಲ್ಲರ ಮುಂದೆಯೇ ವಾಗ್ದಾನ ಕೊಟ್ಟಿದ್ದೇನು. ಆವತ್ತು ದೈವನರ್ತಕ ನುಡಿದಿದ್ದ ಇದೇ ಮಾತು ಭಾರೀ ವಿವಾದ ಸೃಷ್ಟಿಸಿತ್ತು. ಅಚ್ಚರಿ ಅಂದ್ರೆ ಈಗ ಆ ಪಾತ್ರಿಯೂ ಇಲ್ಲ. ಭಕ್ತೆಯೂ ಕಾಣ್ತಿಲ್ಲ. ಇಬ್ಬರೂ ಜೂಟ್ ಆಗಿದ್ದಾರಂತೆ.
ಇದನ್ನೂ ಓದಿ: ಸಾಲ ಮಾಡದಿದ್ದರೂ ಕಾರು ಹರಾಜು! ಮಾಲೀಕರು ಮಾಡಿದ ತಪ್ಪಾದ್ರೂ ಏನು ಗೊತ್ತಾ?
ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಅಂಬಾರಕೊಡ್ಲದಲ್ಲಿ ದೈವನರ್ತಕ ಚಂದ್ರಹಾಸ ವಿವಾಹಿತ ಮಹಿಳೆಗೆ ದೈವದ ಹೆಸರಿನಲ್ಲಿ ಮದುವೆಯಾಗುವ ಅಭಯ ನೀಡಿ ವಿವಾದಕ್ಕೆ ಕಾರಣವಾಗಿದ್ದರು. ಪಂಚೆಯನ್ನುಟ್ಟು ಮೈ ಮೇಲೆ ಅರಿಶಿನ ಚೆಲ್ಲಿಕೊಳ್ಳುತ್ತಾ ಕಾಂತಾರ ಸ್ಟೈಲ್‌ನಲ್ಲಿ ಓ… ಎಂದು ಕೂಗುತ್ತಾ ‘ಈ ಬಾಲಕಿಯನ್ನ ಈ ಬಾಲಕ ಮದುವೆಯಾಗುತ್ತಾನೆ. ಇವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿಯಾಗಿ, ಅರ್ಧನಾರೇಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ. ಇಂದು ಅಥವಾ ನಾಳೆ ಧರ್ಮಸ್ಥಳ, ಮಂತ್ರಾಲಯ, ಇದೇ ಸ್ಥಳದಲ್ಲಿ ಈ ಬಾಲಕಿ ಕೊರಳಿಗೆ ಈ ಬಾಲಕನ ಕೈಯಿಂದ ತಾಳಿ ಬೀಳುತ್ತೆ. ಇದು ಸತ್ಯ ಸತ್ಯ’ ಎಂದು ಪಾತ್ರಿ ನುಡಿದಿದ್ದ. ಪಾತ್ರಿಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಪಾತ್ರಿಯ ಈ ವರ್ತನೆ ವಿರುದ್ಧ ಜನ ಆಕ್ರೋಶಗೊಂಡಿದ್ದರು. ಇದು ದೈವ ನುಡಿದಿದ್ದಲ್ಲ, ದೈವನರ್ತಕನ ಮಾತು ಅಂತಾ ಕೆರಳಿ ಕೆಂಡವಾಗಿದ್ದರು. ಅಡಿಕೆ ಹಿಂಗಾರದಿಂದ ಬಡಿದುಕೊಳ್ಳುತ್ತ ಡಮರು, ಡಕ್ಕೆ, ತಾಳದ ಲಯಕ್ಕೆ ನರ್ತನ ಮಾಡುತ್ತ ಪಾತ್ರಿ ವರ್ತಿಸಿದ್ದಾರೆ. ವಿವಾಹಿತ ಮಹಿಳೆಯನ್ನ ಮದುವೆಯಾಗುವ ದೃಷ್ಟಿಯಿಂದ ದೈವದ ಹೆಸರನ್ನ ಬಳಿಸಿಕೊಂಡಿದ್ದಾನೆ ಎಂದು ಪಾತ್ರಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದರು. ವಿಷಯ ಅಂದ್ರೆ ನರ್ತಕ ಪಾತ್ರಿಗೂ ಮದುವೆಯಾಗಿ ಹೆಂಡತಿ, ಮಗಳಿದ್ದು ಇಬ್ಬರೂ ಕೂಡ ದೂರವಾಗಿದ್ದಾರೆ. ಇತ್ತ ದೈವ ನರ್ತಕನಿಂದ ಅಭಯ ಪಡೆದ ಬೆಳಗಾವಿಯ ವಿವಾಹಿತ ಮಹಿಳೆ ಸಹ ನಾಪತ್ತೆಯಾಗಿದ್ದಾಳೆ.
ದೈವನರ್ತಕ ಚಂದ್ರಹಾಸ ಮತ್ತು ಬೆಳಗಾವಿ ಮೂಲದ ಮಹಿಳೆಗೆ ಮೊದಲೇ ಪರಿಚಯ ಇತ್ತು ಎನ್ನಲಾಗ್ತಿದೆ. ಆದ್ರೆ ದೈವದರ್ಶನಕ್ಕೆ ಬಂದಿದ್ದ ವೇಳೆ ಮಹಿಳೆ ಚಂದ್ರಹಾಸ ಗೊತ್ತಿಲ್ಲದಂತೆಯೇ ವರ್ತಿಸಿದ್ದರು. ಎಲ್ಲರ ಮುಂದೆಯೇ ಮದುವೆ ಬಗ್ಗೆ ನುಡಿದಾಗಲೂ ಶಾಕ್ ಗೆ ಒಳಗಾದವರಂತೆ ಕಂಡಿದ್ದರು. ಸದ್ಯ ಮದುವೆ ವಾಗ್ದಾನದ ವಿಡಿಯೋ ವೈರಲ್ ಆದ ಬಳಿಕ ಅಂಕೋಲದ ಅಂಬಾರಕೊಡ್ಲನಲ್ಲಿನ ತನ್ನ ನಿವಾಸದಿಂದ ದೈವ ನರ್ತಕ ಚಂದ್ರಹಾಸ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾನೆ. ಅಲ್ಲದೇ ಈತ ಬೆಳಗಾವಿ ಮೂಲದ ಅದೇ ಮಹಿಳೆಯನ್ನು ವಿವಾಹವಾಗಿದ್ದಾನೆ ಎಂಬ ಸುದ್ದಿಯೂ ಹರಡುತ್ತಿದೆ. ವಿವಾದದ ಬಗ್ಗೆ ಅವರ ಕುಟುಂಬದವರು ಸ್ಪಷ್ಟನೆ ನೀಡಲು ಸಿದ್ಧರಿಲ್ಲ. ಇನ್ನು ದೈವನರ್ತಕನ ವಿರುದ್ಧ ಜನಶಕ್ತಿ ವೇದಿಕೆ ವಂಚನೆ ಪ್ರಕರಣ ದಾಖಲಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.