ಈ ನಗರಗಳಿಂದ ಅಯೋಧ್ಯೆಗೆ ಸಿಗಲಿದೆ ನೇರ ವಿಮಾನ! – ಜ. 22ರಂದು ಅಯೋಧ್ಯೆಗೆ ಎಷ್ಟು ವಿಮಾನ ಬರಲಿದೆ ಗೊತ್ತಾ?

ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಬಾಲ ರಾಮನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯನ್ನು ಇಡೀ ದೇಶವೇ ಎದುರು ನೋಡುತ್ತಿದೆ. ಶ್ರದ್ಧೆ-ಭಕ್ತಿಯಿಂದ ಪ್ರಭು ಶ್ರೀರಾಮನ ದೇಗುಲ ಲೋಕಾರ್ಪಣೆಯಾಗುವುದನ್ನು ಕಣ್ತುಂಬಿಕೊಳ್ಳೋದಕ್ಕೆ ದೇಶಾದ್ಯಂತ ಜನರು ಕಾಯ್ತಿದ್ದಾರೆ. ಇದರ ನಡುವೆ ಅಯೋಧ್ಯೆಗೆ ದೇಶದ ಮೂರು ನಗರಗಳಿಂದ ನೇರವಾಗಿ ವಿಮಾನಯಾನ ಆರಂಭವಾಗುತ್ತಿದೆ.. ಅಲ್ಲದೆ ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮನಹಬ್ಬದಲ್ಲಿ ಭಾಗಿಯಾಗುವ ಭಕ್ತರಿಗೆ ಶಾಕ್ ಕೊಡುವ ರೀತಿಯಲ್ಲಿ ಟಿಕೆಟ್ ದರ ಏರಿಕೆಯಾಗಿದೆ.
ಜನವರಿ 22 ಯಾವಾಗ ಬರುತ್ತೆ. ಯಾವಾಗ ಬಾಲ ರಾಮನ ಮೂರ್ತಿಯ ಪ್ರತಿಷ್ಠಾಪನೆ ರಾಮಜನ್ಮಭೂಮಿಯಲ್ಲಿ ಆಗುತ್ತದೆ ಎನ್ನುವುದನ್ನು ಎದುರು ನೋಡುತ್ತಿದ್ದಾರೆ. ಯಾಕಂದ್ರೆ ಇದು ಕೋಟಿ ಕೋಟಿ ಭಾರತೀಯರ ಕನಸು ನನಸಾಗುವ ಕ್ಷಣ. ಇದರ ನಡುವೆಯೇ ಅಯೋಧ್ಯೆಗೆ ದೇಶದ ಮೂರು ಪ್ರಮುಖ ನಗರಗಳಿಂದ ವಿಮಾನ ಯಾನ ಆರಂಭಿಸಲು ಸ್ಪೈಸ್ ಜೆಟ್ ಮುಂದಾಗಿದೆ.. ಬೆಂಗಳೂರು, ಚೆನ್ನೈ ಹಾಗೂ ಮುಂಬೈ ನಗರಗಳಿಂದ ಅಯೋಧ್ಯೆಗೆ ನಾನ್ಸ್ಟಾಪ್ ಸಂಪರ್ಕ ಕಲ್ಪಿಸಲು ಸ್ಪೈಸ್ ಜೆಟ್ ಮುಂದಾಗಿದೆ.
ಇದನ್ನೂ ಓದಿ : ಅಯೋಧ್ಯೆಯಲ್ಲಿ 108 ಅಡಿ ಉದ್ದದ ಅಗರಬತ್ತಿಗೆ ಅಗ್ನಿಸ್ಪರ್ಶ – ಒಂದೂವರೆ ತಿಂಗಳು ನಿರಂತರ ಉರಿಯಲಿದೆ ಈ ಅಗರಬತ್ತಿ!
ಫೆಬ್ರವರಿ ತಿಂಗಳಿಂದ ಈ ವಿಮಾನ ಸೇವೆ ಆರಂಭವಾಗಿಲಿದ್ದು, ಇದರಿಂದಾಗಿ ರಾಮಜನ್ಮಭೂಮಿಯಲ್ಲಿ ರಾಮನ ದರ್ಶನ ಪಡೆಯುವ ಭಕ್ತರಿಗೆ ಹಣದ ಜೊತೆಗೆ ಸಮಯದ ಉಳಿತಾಯ ಕೂಡ ಆಗಲಿದೆ.. ಜನವರಿ 22ರಂದು ಪ್ರಾಣಪ್ರತಿಷ್ಠಾಪನೆಯ ನಂತರ ಫೆಬ್ರವರಿ ತಿಂಗಳಿಂದ ಅಯೋಧ್ಯೆಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುವ ನಿರೀಕ್ಷೆಯಿದ್ದು, ಇದೇ ಕಾರಣಕ್ಕಾಗಿ ದೇಶದ ಮೂರು ಪ್ರಮುಖ ನಗರಗಳಿಂದ ಸ್ಪೈಸ್ ಜೆಟ್ ವಿಮಾನ ಸೇವೆ ಆರಂಭಿಸಲು ನಿರ್ಧರಿಸಿದೆ..
189 ಸೀಟುಗಳಿರುವ ಬೋಯಿಂಗ್ 737 ವಿಮಾನಗಳ ಕಾರ್ಯಾಚರಣೆಗೆ ಸ್ಪೈಸ್ ಜೆಟ್ ನಿರ್ಧರಿಸಿದೆ. ಇದರ ನಡುವೆ ಜನವರಿ 15ರಿಂದ ದೆಹಲಿ ಟು ಅಯೋಧ್ಯೆ ನೇರ ಸಂಪರ್ಕ ಕಲ್ಪಿಸಲು ಇಂಡಿಗೋ ವಿಮಾನಯಾನ ಆರಂಭವಾಗಿದೆ. ಆದರೆ ದೇಶದ ಎಲ್ಲೆಡೆಯಿಂದ ಅಯೋಧ್ಯೆಗೆ ವಿಮಾನದಲ್ಲಿ ಹೋಗುವ ಪ್ರಯಾಣಿಕರಿಗೆ ಟಿಕೆಟ್ ದರದ ಏರಿಕೆಯ ಬಿಸಿ ಜೋರಾಗಿಯೇ ತಟ್ಟಲಿದೆ. ರಾಮನ ದರ್ಶನ ಪಡೆಯಲು ಹೋಗುತ್ತಿರುವ ಭಕ್ತರಿಗೆ ವಿಮಾನಯಾನ ಕಂಪನಿಗಳು ಸರಿಯಾಗಿಯೇ ಬರೆ ಎಳೆಯಲು ಸಜ್ಜಾಗಿವೆ. ಟಿಕೆಟ್ ದರದಲ್ಲಿ 30ರಿಂದ 70 ಪರ್ಸೆಂಟ್ನಷ್ಟು ಏರಿಕೆಯಾಗಿದೆ. ಅದರಲ್ಲೂ ಜನವರಿ 21 ಹಾಗೂ 22ರ ವೇಳೆಗೆ 20 ಸಾವಿರದಿಂದ 30 ಸಾವಿರದಷ್ಟು ಟಿಕೆಟ್ ದರದಲ್ಲಿ ಏರಿಕೆ ಮಾಡಿದ್ದಾರೆ. ಇದರಿಂದಾಗಿ ವಿಮಾನದ ಮೂಲಕ ಪ್ರಯಾಣ ಬೆಳೆಸುವ ವಿಐಪಿ-ವಿವಿಐಪಿ ಭಕ್ತರು ಈಗ ಹೆಚ್ಚಿನ ದರ ಪಾವತಿಸಿಯೇ ಹೋಗಬೇಕಿದೆ.
ಡಿಸೆಂಬರ್ 30ರಂದು ಪ್ರಧಾನಿ ಮೋದಿ ಮಹರ್ಷಿ ವಾಲ್ಮೀಕಿ ಇಂಟರ್ ನ್ಯಾಷನಲ್ ಏರ್ಪೋರ್ಟ್ ಉದ್ಘಾಟನೆ ಮಾಡಿದ ನಂತರ ಅಯೋಧ್ಯೆಯಲ್ಲಿ ರಾಮನ ದರ್ಶನ ಪಡೆಯುವ ಭಕ್ತರಿಗೆ ಹೆಚ್ಚಿನ ಅನುಕೂಲವಾಗಿದೆ. ಇನ್ನು ಜನವರಿ 21 ಹಾಗೂ 22ರಂದು ನೂರಕ್ಕೂ ಹೆಚ್ಚು ವಿಶೇಷ ವಿಮಾನಗಳು, ಚಾರ್ಟರ್ಡ್ ಫ್ಲ್ಟೈಟ್ಗಳ ಮೂಲಕ ಭಕ್ತರು ಅಯೋಧ್ಯೆಗೆ ಬರುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಅಲ್ಲಿಗೆ ರಾಮಜನ್ಮಭೂಮಿಯಲ್ಲಿ ವಿಮಾನಗಳ ಹಾರಾಟ ಮತ್ತು ಆರ್ಭಟ ಜೋರಾಗುವುದು ನಿಶ್ಚಿತ.. ಆದ್ರೆ ಫೆಬ್ರವರಿ ತಿಂಗಳಿನಿಂದ ಸಾಮಾನ್ಯ ದರದಲ್ಲೇ ಭಕ್ತರು ಅಯೋಧ್ಯೆಗೆ ವಿಮಾನದ ಮೂಲಕ ಹೋಗಿ ಬರಬಹುದು.