ಕಾಡು ಹಂದಿ ಬೇಟೆಗೆ ಇಟ್ಟ ನಾಡಬಾ*ಬ್ ಸ್ಫೋ*ಟ – ರೈತನಿಗೆ ಗಾಯ, ಬೆಚ್ಚಿ ಬಿದ್ದ ಗ್ರಾಮ

ಕಾಡು ಹಂದಿ ಬೇಟೆಗೆ ಅಕ್ರಮವಾಗಿ ಇಟ್ಟಿದ್ದ ಸಿಡಿಮದ್ದು ಸ್ಫೋಟಗೊಂಡು ರೈತರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಮಧುಗಿರಿ ತಾಲೂಕಿನ ವೀರನಾಗೇನಹಳ್ಳಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ರೈತ ಗೋಪಾಲಪ್ಪ (66) ಗಾಯಾಳು. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವಘಡ ನಡೆದಿದೆ. ಸಿಡಿಮದ್ದು ಸ್ಫೋಟದಿಂದ ಗೋಪಾಲಪ್ಪಗೆ ಗಂಭೀರ ಗಾಯಗಳಾಗಿವೆ. ಸ್ಫೋಟದ ಶಬ್ದಕ್ಕೆ ಆತಂಕಗೊಂಡ ಗ್ರಾಮಸ್ಥರು ಸ್ಥಳಕ್ಕೆ ಓಡಿ ಬಂದಾಗ ಸಿಡಿಮದ್ದು ಸ್ಫೋಟವಾಗಿರುವುದು ಗೊತ್ತಾಗಿದೆ. ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಗೋಪಾಲಪ್ಪ ಅವರನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ, ಕೊಡಿಸಲಾಗಿದೆ.
ಇದನ್ನೂ ಓದಿ: ಹಾಸನದಲ್ಲಿ ಮಹಿಳೆ ಮೇಲೆ ಕಾಡಾನೆ ಅಟ್ಯಾಕ್ – ಅಮ್ಮ ಸೇಫ್ ಮಗಳು ಬ*ಲಿ!
ಜಮೀನಿನಲ್ಲಿ ಕಾಡು ಹಂದಿ ಹಾಗೂ ಇತರೆ ಪ್ರಾಣಿಗಳ ಬೇಟೆಗೆ ಕೆಲ ಕಿಡಿಗೇಡಿಗಳು ಅಕ್ರಮವಾಗಿ ಸಿಡಿಮದ್ದುಗಳನ್ನು ಇಡುತ್ತಿರುವುದು ರೈತರ ಜೀವಕ್ಕೆ ಕುತ್ತು ತರುತ್ತಿದೆ. ಇಂತಹ ಅನಾಹುತಗಳು ಮರುಕಳಿಸಿದರೆ ನಮ್ಮ ಕುಟುಂಬಗಳ ಭವಿಷ್ಯವೇನು ಎಂದು ಗಾಯಗೊಂಡ ರೈತನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಹಾಗೂ ಗಾಯಗೊಂಡ ರೈತ ಗೋಪಾಲಪ್ಪ ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ತಾಲೂಕು ಕರವೇ ಅಧ್ಯಕ್ಷ ಎ. ಶಿವಕುಮಾರ್ ಅವರು ಗಾಯಾಳುವನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ದೊರಕಿಸಲು ಸಹಕಾರ ನೀಡಿದ್ದಾರೆ. ಅರಣ್ಯ ಇಲಾಖೆಯಿಂದ ತಕ್ಷಣ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ನೋಡಿರಿ

