ಕಲ್ಲಾಗಿ ಬದಲಾದ ಏಡಿ! – ಪ್ರಕೃತಿ ವಿಸ್ಮಯಕ್ಕೆ ವಿಜ್ಞಾನಿಗಳೇ ಬೆರಗು!

ಕಲ್ಲಾಗಿ ಬದಲಾದ ಏಡಿ! – ಪ್ರಕೃತಿ ವಿಸ್ಮಯಕ್ಕೆ ವಿಜ್ಞಾನಿಗಳೇ ಬೆರಗು!

ಪ್ರಪಂಚದ ವಿಸ್ಮಯಕ್ಕೆ ಮಿತಿ ಉಂಟೇ? ಪ್ರಕೃತಿಯಲ್ಲಿ ಸಾಕಷ್ಟು ವಿದ್ಯಮಾನ ನಡೆಯುತ್ತಲೇ ಇರುತ್ತವೆ. ಕಲ್ಪನೆಗೂ ಮೀರಿದ ವಿಸ್ಮಯಗಳು ಕಂಡುಬರುತ್ತವೆ. ಇಂತಹ ವಿದ್ಯಮಾನಗಳು ಮನುಷ್ಯ ಕುಲವನ್ನು ಅಚ್ಚರಿಗೆ ದೂಡುತ್ತವೆ. ಇದೀಗ ಇಂತಹದ್ದೇ ವಿಸ್ಮಯಕಾರಿ ಘಟನೆಯೊಂದು ನಡೆದಿದೆ. ಇಲ್ಲೊಂದು ಏಡಿ ಕಲ್ಲಾಗಿ ಹೋಗಿದೆ. ಅಚ್ಚರಿಯಾದ್ರೂ ಸತ್ಯ.

ಹಳ್ಳ, ನದಿಯಲ್ಲಿ, ಸಮುದ್ರಗಳಲ್ಲಿ ಏಡಿಗಳು ನೋಡ ಸಿಗುತ್ತವೆ. ಅವುಗಳು ಸತ್ತ ನಂತರ ಏಡಿ ಚಿಪ್ಪುಗಳು ಕೆಲ ಸಮಯದ ನಂತರ ಪುಡಿ ಪುಡಿಯಾಗಿ ಪ್ರಕೃತಿ ಮಡಿಲಿಗೆ ಸೇರುತ್ತವೆ. ಹೆಚ್ಚಂದ್ರೆ ಅವುಗಳ ಪಳೆಯುಳಿಕೆಗಳು ಒಂದು ತಿಂಗಳು ಒಂದು ವರ್ಷ ಇರಬಹುದು. ಆದ್ರೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ನುಸಿಕೋಟೆ ಎಂಬಲ್ಲಿ ಏಡಿಯೊಂದರ ಪಳೆಯುಳಿಕೆ ಕಲ್ಲಾಗಿ ಮಾರ್ಪಟ್ಟಿದೆ. ಈ ವಿದ್ಯಮಾನ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ: ಮಲ್ಪೆ ಬೀಚ್‌ನಲ್ಲಿ ವಿಸ್ಮಯ ದೃಶ್ಯ – ಕಡಲ ಕಿನಾರೆಯಲ್ಲಿ ರಾಶಿ ರಾಶಿ ಗಂಗಾದೇವಿ ಕೂದಲು?

ಹೌದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ನುಸಿಕೋಟೆ ಬಳಿ ಮೀನುಗಾರರೊಬ್ಬರಿಗೆ ಕಲ್ಲಾಗಿ ರೂಪುಗೊಂಡ ಏಡಿಯ ಪಳೆಯುಳಿಕೆ ಸಿಕ್ಕಿದೆ. ಈ ಕಲ್ಲಾದ ಏಡಿ ನೂರಾರು ವರ್ಷಗಳ ಹಳೆಯ ಪಳೆಯುಳಿಕೆ ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.

ಅಘನಾಶಿನಿ ನದಿಯಲ್ಲಿ ಮೀನುಗಾರಿಕೆ ನಡೆಸುತಿದ್ದ ವೇಳೆ ಮೀನುಗಾರ ಈಶ್ವರ ಹರಿಕಂತ್ರ ಎಂಬುವವರಿಗೆ ಏಡಿ ಕಲ್ಲು ಸಿಕ್ಕಿದೆ. ಮೊದಲು ಇದು ಏಡಿ ಎಂದು ಕೈಯಲ್ಲಿ ಹಿಡಿದಾಗ ಸಾಮಾನ್ಯ ಏಡಿಯಂತೆ ಇರದೇ ಕಲ್ಲಿನಂತೆ ಸ್ಪರ್ಷ ಅನುಭವ ಆಗಿದೆ. ಹೀಗಾಗಿ ಈ ಏಡಿಯಲ್ಲಿ ವಿಶೇಷ ಏನೋ ಇದೆ ಎಂದು ಕಾರವಾರದ ಮೀನುಗಾರ ವಿನಾಯಕ ಹರಿಕಂತ್ರ ಎಂಬವರಿಗೆ ಅದನ್ನು ಕಳುಹಿಸಿ ಕೊಟ್ಟಿದ್ದಾರೆ. ಅವರು ಕಾರವಾರದ ಕಡಲ ಜೀವಶಾಸ್ತ್ರಜ್ಞರ ಗಮನಕ್ಕೆ ತಂದು ಹಸ್ತಾಂತರಿಸಿದ್ದಾರೆ. ಆಗಲೇ ತಿಳಿದಿದ್ದು ಈ ಏಡಿ ನದಿಯಲ್ಲಿ ನೂರಾರು ವರ್ಷಗಳು ಸವೆಸಿ ಕಲ್ಲಿನ ರೂಪ ಪಡೆದಿದೆ ಎಂದು.

ಏಡಿ ಕಲ್ಲುಗಳು ಸಮಾನ್ಯವಾಗಿ ಬಂಡೆಕಲ್ಲುಗಳಿರುವ ಕಡಲ ತೀರದಲ್ಲಿ ಪತ್ತೆಯಾಗುತ್ತವೆ. ಆದರೆ ಸಿಹಿ ನೀರಿನ ಅಘನಾಶಿನಿ ನದಿಯಲ್ಲಿ ಕಾಣಸಿಕ್ಕಿದ್ದು ಅಪರೂಪವೆನ್ನುತ್ತಾರೆ ಕಡಲ ಜೀವಶಾಸ್ತ್ರಜ್ಞ ವಿಎನ್ ನಾಯಕ್.

ಏಡಿ ಕಲ್ಲು ಏಡಿಯ ಪಳಿಯುಳಿಕೆಯಾಗಿದೆ. ಇದು ನೂರು ವರ್ಷಗಳದ್ದು ಇರಬಹುದು. ಆದರೆ ಕಾರ್ಬನ್ ಡೇಟಿಂಗ್‌ಗೆ ಒಳಪಡಿಸದೇ, ಅದರ ನಿಖರ ಆಯಸ್ಸು ಎಷ್ಟು ಎಂದು ಹೇಳಲು ಆಗುವುದಿಲ್ಲ. ಹೀಗಾಗಿ ಕಡಲ ಜೀವಶಾಸ್ತ್ರಜ್ಞರ ಜೊತೆ ಇದೀಗ ಪುರಾತತ್ವ ಸಂಶೋಧಕರು ಸಹ ಈ ಏಡಿ ಹಿಂದೆ ಬಿದ್ದಿದ್ದು ಇದರ ನಿಜವಾದ ಆಯುಷ್ಯವನ್ನು ಹುಡುಕುವತ್ತ ಗಮನ ಹರಿಸಿದ್ದಾರೆ. ಒಟ್ಟಿನಲ್ಲಿ ಅಪರೂಪದ ಕಲ್ಲಾಗಿ ಪರಿವರ್ತನೆಗೊಂಡ ಏಡಿ ಪಳಯುಳಿಕೆ ಇದೀಗ ಸಂಶೋಧಕರಿಗೆ ಅಧ್ಯಯನದ ವಸ್ತುವಾಗಿರುವುದಂತೂ ಸತ್ಯ.

Shwetha M