ಜ್ಯೂಸ್ ಅಂತಾ ಕೀಟನಾಶಕ ಕುಡಿದ ಮಗು – ಪೋಷಕರ ಬೇಜವಾಬ್ದಾರಿಯಿಂದ ಎರಡು ವರ್ಷದ ಬಾಲಕ ಸಾವು!
ಮನೆಯಲ್ಲಿ ಮಕ್ಕಳು ಇದ್ದರೆ ಮೈ ಎಲ್ಲಾ ಕಣ್ಣಾಗಿರಬೇಕು.. ಯಾಕೆಂದರೆ ಮಕ್ಕಳಿಗೆ ಏನೂ ಅರಿವಿರುವುದಿಲ್ಲ. ಹೀಗಾಗಿ ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಯಿಗೆ ಹಾಕಿಕೊಳ್ಳುತ್ತಾರೆ. ಹಾಗೂ ಕೈಗೆ ಸಿಕ್ಕ ವಸ್ತುಗಳನ್ನ ಹಿಡಿದು ಆಟವಾಡುತ್ತಾರೆ. ಒಂಚೂರು ಯಾಮಾರಿದರೂ ನಡೆಯಬಾರದ ದುರಂತ ನಡೆದು ಹೋಗುತ್ತದೆ. ಇಲ್ಲೊಂದು ಎರಡು ವರ್ಷದ ಮಗು ಜ್ಯೂಸ್ ಅಂತಾ ಭಾವಿಸಿ ಮನೆಯಲ್ಲಿ ಇಟ್ಟಿದ್ದ ಕೀಟನಾಶಕವನ್ನೇ ಕುಡಿದು ಸಾವನ್ನಪ್ಪಿದೆ.
ಇದನ್ನೂ ಓದಿ: ಮನೆಯಲ್ಲಿ ಸೊಳ್ಳೆ ನಿವಾರಕ ರಿಫಿಲ್ ಬಳಸುತ್ತಿದ್ದೀರಾ..? – ಸೊಳ್ಳೆ ನಿವಾರಕ ಲಿಕ್ವಿಡ್ ನಿಂದ ಬಾಲಕಿಯ ಪ್ರಾಣವೇ ಹೊಯ್ತು!
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹನುಮಂತು ಹಾಗೂ ಪುಷ್ಪ ದಂಪತಿಯ ಪುತ್ರ ಯಶ್ವಿಕ್(2) ಮೃತ ದುರ್ದೈವಿ. ಜಮೀನಿಗೆ ಸಿಂಪಡಿಸಲು ತಂದಿದ್ದ ಕೀಟನಾಶಕವನ್ನು ಮನೆಯಲ್ಲಿ ಇಟ್ಟಿದ್ದರು. ಭಾನುವಾರ ಮನೆಯಲ್ಲಿ ಮಗು ಆಟವಾಡುತ್ತಿತ್ತು. ಈ ವೇಳೆ ಮಗುವಿನ ಕೈಗೆ ಕೀಟನಾಶಕ ಸಿಕ್ಕಿದೆ. ಇದನ್ನೇ ಜ್ಯೂಸ್ ಅಂತಾ ಭಾವಿಸಿ ಬಾಟಲ್ ಓಪನ್ ಮಾಡಿ ಕುಡಿದಿದೆ. ಕ್ರಿಮಿನಾಶಕ ಸೇವನೆ ಬಳಿಕ ಹೊಟ್ಟೆ ನೋವಿನಿಂದ ಮಗು ಅಸ್ವಸ್ಥಗೊಂಡು ಬಿದ್ದಿದೆ. ಪೋಷಕರು ಬಾಯಿಯ ವಾಸನೆ ನೋಡಿದಾಗ ವಿಷ ಸೇವನೆ ಆಗಿರುವುದು ತಿಳಿದಿದೆ. ಕೂಡಲೇ ಮಗುವನ್ನ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಂಡ್ಯದ ಆಸ್ಪತ್ರೆಯಲ್ಲಿ ಒಂದು ದಿನಗಳ ಕಾಲ ನಿರಂತರವಾಗಿ ಚಿಕಿತ್ಸೆಯನ್ನು ನೀಡಲಾಗಿದೆ. ಆದರೆ, ಮಗುವಿನ ಸ್ಥಿತಿ ಮಾತ್ರ ಚೇತರಿಕೆ ಕಂಡುಬಂದಿಲ್ಲ. ಸೋಮವಾರ ಮಧ್ಯಾಹ್ನದ ವೇಳೆಗೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ. ಈ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯಲ್ಲಿ ನಿರ್ಲಕ್ಷ್ಯವಹಿಸಿ ಮಕ್ಕಳ ಕೈಗೆ ವಿಷದ ಬಾಟಲಿ ಸಿಗುವಂತೆ ಇಡುವ ಮೂಲಕ ಮಗುವಿನ ಸಾವಿಗೆ ಕಾರಣವಾದ ಬಗ್ಗೆ ಮಮ್ಮಲ ಮರುಗುತ್ತಿದ್ದಾರೆ. ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ಮಡುಗಟ್ಟಿದೆ. ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಭೇಟಿ ಮಾಡಲಿದ್ದಾರೆ.