20 ವರ್ಷಗಳ ಕಾಲ ಬದುಕಿದ ಕೋಳಿ – ಜೀವಿತಾವಧಿಯ ಮೂಲಕ ಗಿನ್ನೆಸ್ ದಾಖಲೆ ಬರೆದ ‘ಪೀನಟ್’
ಒಂದು ಕೋಳಿ ಅಬ್ಬಬ್ಬಾ ಅಂದರೆ ಎಷ್ಟು ವರ್ಷ ಬದುಕಿರುತ್ತದೆ. ಸಾಮಾನ್ಯಾವಾಗಿ ಐದರಿಂದ 10 ವರ್ಷಗಳವರೆಗೂ ಕೋಳಿಗಳ ಜೀವಿತಾವಧಿ ಇರುತ್ತದೆ. ಕೆಲವೊಮ್ಮೆ ಕೋಳಿಯ ಜೀವಿತಾವಧಿಯು ಅದರ ತಳಿ, ಇತರ ಕೆಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಆದರೆ, ಇಲ್ಲೊಂದು ಕೋಳಿ ಇದೆ. ಈ ಕೋಳಿ ಎಷ್ಟು ವರ್ಷ ಬದುಕಿದೆ ಎಂದು ಗೊತ್ತಾದರೆ ನೀವು ನಿಜಕ್ಕೂ ಅಚ್ಚರಿ ಪಡದೇ ಇರುವುದಿಲ್ಲ.
ಇದನ್ನೂ ಓದಿ: ಬ್ರಿಟನ್ನಲ್ಲೂ ಅಮೆರಿಕನ್ XL ಬುಲ್ಲಿ ಜಾತಿಯ ಪಿಟ್ಬುಲ್ ಶ್ವಾನ ಬ್ಯಾನ್! – ಕಾರಣವೇನು ಗೊತ್ತಾ?
ಅಮೆರಿಕದಲ್ಲಿ ಕೋಳಿಯೊಂದು ತನ್ನ ಜೀವಿತಾವಧಿಯ ಮೂಲಕ ಗಿನ್ನೆಸ್ ದಾಖಲೆ ಬರೆದಿದೆ. ಅಮೆರಿಕದ ಮಿಚಿಗನ್ನ ದಂಪತಿ, ಕೋಳಿ ಸೇರಿದಂತೆ ಹಲವು ಪ್ರಾಣಿಗಳನ್ನು ತಮ್ಮ ಜಮೀನಿನಲ್ಲಿ ಸಾಕುತ್ತಿದ್ದಾರೆ. ಈ ಪೈಕಿ ಪೀನಟ್ ಎಂಬ ಹೆಸರಿನ ಕೋಳಿ ವಿಶ್ವದ ಅತ್ಯಂತ ಹಳೆಯ ಕೋಳಿ ಎಂಬ ಗಿನ್ನೆಸ್ ದಾಖಲೆಯನ್ನು ಹೊಂದಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಕೋಳಿಯ ಮಾಲೀಕ ಮಾರ್ಸಿ ಪಾರ್ಕರ್ ಡಾರ್ವಿನ್ ಮಾಹಿತಿ ನೀಡಿದ್ದಾರೆ. ಸಾಮಾನ್ಯವಾಗಿ ಕೋಳಿಗಳು ಐದರಿಂದ ಎಂಟು ವರ್ಷ ಬದುಕುತ್ತದೆ. ಆದರೆ ಈ ಕೋಳಿ ಸುಮಾರು 20 ವರ್ಷ 272 ದಿನಗಳ ನಂತರವೂ ಜೀವಂತವಾಗಿತ್ತು. ಈ ಕೋಳಿ ತುಂಬಾ ಬುದ್ಧಿವಂತ ಕೋಳಿಯಂತೆ. ಇದು ಚಿಕ್ಕ ಕೋಳಿಯಾಗಿದೆ. ಕೋಳಿಗೆ ಪ್ರತಿದಿನ ಮೊಸರು ನೀಡಲಾಗುತ್ತಿತ್ತು. ಪಾಪ.. ಈ ಕೋಳಿಯ ಜನ್ಮ ಕಥೆ ಕೇಳಿದರೆ ಬೇಜಾರಾಗುತ್ತದೆ ಎಂದು ಮಾಲೀಕ ಹೇಳುತ್ತಾರೆ. ಮೊಟ್ಟೆ ಇಟ್ಟು ಮರಿಯಾಗುವ ಮುನ್ನ ಅದರ ತಾಯಿ ಹೊರಟು ಹೋಗಿತ್ತು. ಮೊಟ್ಟೆ ಕೊಳೆತಿರಬಹುದು ಎಂದುಕೊಂಡು ಅದನ್ನು ಎಸೆಯಲು ನಿರ್ಧರಿಸಿದೆವು. ಅಷ್ಟರಲ್ಲಿ ಮೊಟ್ಟೆಯ ಒಳಗಿನಿಂದ ಸದ್ದು ಕೇಳಿಸಿತು. ಹೀಗಾಗಿ ಮೊಟ್ಟೆಯ ಚಿಪ್ಪನ್ನು ಸ್ವಲ್ಪ ಸ್ವಲ್ಪವಾಗಿ ಸುಲಿದು ಮರಿಯನ್ನು ಕೈಯಲ್ಲಿ ಹಿಡಿದು ತಕ್ಷಣ ತಾಯಿ ಕೋಳಿಯ ಬಳಿ ಬಿಟ್ಟಿದ್ದೇವು. ಆದರೆ ತಾಯಿ ಕೋಳಿ ತನ್ನ ಮರಿಯನ್ನು ಸ್ವೀಕರಿಸಲಿಲ್ಲ. ಹೀಗಾಗಿ ಈ ಮರಿಯನ್ನು ನಾವೇ ಸಾಕಲು ನಿರ್ಧರಿಸಿ ಅದಕ್ಕೆ ಪೀನಟ್ ಎಂದು ನಾಮಕರಣ ಮಾಡಿದ್ದೇವೆ. ಇದು ತುಂಬಾ ಚಿಕ್ಕದಾಗಿತ್ತು ಹೀಗಾಗಿ ಈ ಹೆಸರನ್ನು ನೀಡಲಾಗಿದೆ ಎಂದಿದ್ದಾರೆ. ಈ ಕೋಳಿಯನ್ನು ಮನೆಯ ಸದಸ್ಯರ ರೀತಿಯೇ ಸಾಕಿದ್ದಾರೆ ಮಾರ್ಸಿ ಪಾರ್ಕರ್ ಡಾರ್ವಿನ್. ಹೀಗಾಗಿಯೇ ಪೀನಟ್ ಹೆಸರಿನ ಕೋಳಿ ತನ್ನ ಜೀವಿತಾವಧಿಯ ವಿಚಾರವಾಗಿ ಗಿನ್ನೆಸ್ ದಾಖಲೆ ಮಾಡಿದೆ. ಬರೋಬ್ಬರಿ 20 ವರ್ಷಗಳ ಕಾಲ ಬದುಕುವ ಮೂಲಕ ತನ್ನನ್ನು ಚೆನ್ನಾಗಿ ಸಲಹಿದ ಮಾಲೀಕರಿಗೂ ಹೆಸರು ತಂದಿದೆ.