ಬಿಎಂಟಿಸಿ ಬಸ್‌ಗೆ ಕಾರು ಡಿಕ್ಕಿ – ರಸ್ತೆಯಲ್ಲೇ ಹೊತ್ತಿಯುರಿದ ವಾಹನಗಳು, 30 ಪ್ರಯಾಣಿಕರು ಬಚಾವ್..!

ಬೆಂಗಳೂರಿನಲ್ಲಿ ಬೆಳಗ್ಗೆಯೇ ಭಾರೀ ಅವಘಡವೊಂದು ಬಿಎಂಟಿಸಿ ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದೆ. ಕಾರ್ ಬಿಎಂಟಿಸಿ ಬಸ್‌ಗೆ ರಭಸವಾಗಿ ಡಿಕ್ಕಿಹೊಡೆದಿತ್ತು. ಇದರ ಪರಿಣಾಮ ಬೆಂಕಿ ಧಗಧಗನೇ ಉರಿದಿತ್ತು. ಬಿಎಂಟಿಸಿ ಬಸ್ ಚಾಲಕ ತಕ್ಷಣವೇ ಅಲರ್ಟ್ ಆಗಿ, ಬಸ್‌ಲ್ಲಿರುವ 30ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಸಿದ್ದಾನೆ.
ಇದನ್ನೂ ಓದಿ: ಗರ್ಭಿಣಿಗೆ ಮಾತ್ರೆ ಕೊಟ್ಟು ಹೆರಿಗೆಯಂತೆಯೇ ಭ್ರೂಣ ಹೊರ ತೆಗೆಯುತ್ತಿದ್ದರು – ಆಲೆಮನೆ ಆಪರೇಷನ್ ಬಗ್ಗೆ ಕೇಳಿ ಅಧಿಕಾರಿಗಳೇ ಶಾಕ್
ನಿಂತಿದ್ದ ಬಿಎಂಟಿಸಿ ಬಸ್‌ಗೆ ಕಾರು ಡಿಕ್ಕಿಯಾಗಿ ಬೆಂಕಿ ಹೊತ್ತುಕೊಂಡಿದ್ದು, ನಾಯಂಡಹಳ್ಳಿ ಬಳಿಯ ರಿಂಗ್ ರಸ್ತೆಯಲ್ಲಿ ಘಟನೆ ನಡೆದಿದೆ. ಇದರ ಪರಿಣಾಮ ನಡುರಸ್ತೆಯಲ್ಲೇ ಬೆಂಕಿ ಹೊತ್ತಿಕೊಂಡಿದೆ. ಕಾರು ಸುಟ್ಟು ಕರಕಲಾಗಿದೆ. ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸಿದರು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಸ್ನ ಹಿಂದಿನ ಭಾಗ ಸ್ವಲ್ಪ ಬೆಂಕಿಗಾಹುತಿಯಾಗಿದೆ. ವೇಗವಾಗಿ ಕಾರು ಬಂದು ಡಿಕ್ಕಿ ಹೊಡೆದಿದ್ದರಿಂದ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಯಶವಂತಪುರ ಟು ಬನಶಂಕರಿ ಮಾರ್ಗದಲ್ಲಿ ಸಂಚರಿಸುವ ಬನಶಂಕರಿ ಡಿಪೋನ 26ರ ಮಾರ್ಗದ 401NY ಬಸ್ ಸಂಖ್ಯೆ F4968ರ ಬಸ್ ಇದಾಗಿದೆ. ಚಾಲಕ ಗೌರೀಶ್ ಬಿ, ನಿರ್ವಾಹಕ ಗಿರಿಧರ್ ಇಬ್ಬರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಚಂದ್ರಲೇಔಟ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಲು ಹಾಗೂ ಹತ್ತಿಸಲು ನಿಲ್ಲಿಸಿದ್ದ ವೇಳೆ ಕಾರು ವೇಗವಾಗಿ ಬಂದು ಬಸ್‌ಗೆ ಗುದ್ದಿದೆ. ಇನ್ನು ಬಿಎಂಟಿಸಿ ಬಸ್ ಚಾಲಕ ಪ್ರಯಾಣಿಕರ ರಕ್ಷಣೆ ಮಾಡುವುದರ ಜೊತೆಗೆ ಬಿಎಂಟಿಸಿ ಬಸ್ ರಕ್ಷಣೆ ಸಹ ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬೆಂಕಿ ಹೊತ್ತಿದ್ದ ಕಾರು ಹಾಗೂ ಬಸ್ ಪರಸ್ಪರ ಸಿಕ್ಕಿ ಹಾಕಿಕೊಂಡಿದ್ದು ಅದನ್ನು ಬಿಡಿಸಲು ಬಸ್ ಚಾಲಕ ಪ್ರಯತ್ನ ಮಾಡಿದ್ದಾರೆ. ನೂರು ಮೀಟರ್ ಬಸ್ ಚಲಾಯಿಸಿ ಕಾರ್ನಿಂದ ಬಸ್ ಅನ್ನು ಕಾಪಾಡಿದ್ದಾರೆ. ಹೀಗಾಗಿ ಬಸ್ ಬೆಂಕಿಗಾಹುತಿಯಾಗುವುದು ತಪ್ಪಿದೆ. ಇಲ್ಲವಾದಲ್ಲಿ ನಡುರಸ್ತೆಯಲ್ಲಿ ಬಿಎಂಟಿಸಿ ಬಸ್ ಕೂಡ ಸುಟ್ಟು ಬಸ್ಮವಾಗುತ್ತಿತ್ತು. ಹೊತ್ತಿ ಉರಿಯುತ್ತಿರುವ ಬೆಂಕಿಯ ನಡುವೆಯೂ ಬಸ್ ಏರಿ ಬಸ್ ಚಲಾಯಿಸಿದ್ದಾರೆ. ಸತತ ಒಂದೂವರೆ ನಿಮಿಷಗಳ ಹರಸಾಹಸದ ಬಳಿಕ ಡಿವೈಡರ್ ಹಾರಿಸಿ ಮತ್ತೊಂದು ರಸ್ತೆಗೆ ಚಲಾಯಿಸುವ ಮುಖಾಂತರ ಬಸನ್ನು ಕಾರಿನಿಂದ ಬಿಡಿಸುವಲ್ಲಿ ಚಾಲಕ ಗೌರೀಶ್ ಅವರು ಯಶಸ್ವಿಯಾಗಿದ್ದಾರೆ.
ಕಾರಿನಲ್ಲಿ ದಂಪತಿ ಮತ್ತು ಮಗು ಇದ್ದರು. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.