ಓಟದಲ್ಲಿ ಮುಂದಿದ್ದೇನೆ ಎಂದು ವಿಶ್ರಾಂತಿಗೆ ಕುಳಿತು ನಿದ್ರೆಗೆ ಜಾರಿದವನು ಎದ್ದಾಗ ಆಗಿದ್ದೇನು?

ಓಟದಲ್ಲಿ ಮುಂದಿದ್ದೇನೆ ಎಂದು ವಿಶ್ರಾಂತಿಗೆ ಕುಳಿತು ನಿದ್ರೆಗೆ ಜಾರಿದವನು ಎದ್ದಾಗ ಆಗಿದ್ದೇನು?

ಆಮೆ ಮತ್ತು ಮೊಲದ ನೀತಿ ಕಥೆಯನ್ನು ನಾವು ಪಠ್ಯ ಪುಸ್ತಕದಲ್ಲಿ ಓದಿರುತ್ತೇವೆ. ಓಟದ ಸ್ಪರ್ಧೆಯಲ್ಲಿ ಶರವೇಗದಿಂದ ಓಡಿಬಂದ ಮೊಲ ಆಮೆ ತನ್ನನ್ನ ಹಿಂದಿಕ್ಕಲು ಇನ್ನೂ ತುಂಬಾ ಸಮಯ ತೆಗೆದುಕೊಳ್ಳುತ್ತೆ ಅಂತಾ ಮಾರ್ಗ ಮಧ್ಯೆಯೇ ನಿದ್ರೆಗೆ ಜಾರುತ್ತೆ. ಕೊನೆಗೆ ನಿಧಾನಗತಿಯಲ್ಲಿ ಓಡಿದ ಆಮೆಯೇ ಮೊದಲು ಗುರಿ ತಲುಪುತ್ತದೆ. ಇದೆ ರೀತಿಯ ಕುತೂಹಲಕಾರಿ ಘಟನೆಯೊಂದು ಅರಣ್ಯ ರಕ್ಷಕರ ನೇಮಕಾತಿ ವೇಳೆ ನಡೆದಿದೆ.

ಇದನ್ನೂ ಓದಿ: ಸಾಶಾ ಸಾವಿನ ಬೆನ್ನಲ್ಲೇ ಕುನೋ ಉದ್ಯಾನವನದಲ್ಲಿ 4 ಮರಿಗಳಿಗೆ ಜನ್ಮ ನೀಡಿದ ಚೀತಾ

ಮಧ್ಯಪದೇಶದ ಖಾಂಡ್ವಾದಲ್ಲಿ ಅರಣ್ಯ ರಕ್ಷಕರ ನೇಮಕಾತಿ ಪರೀಕ್ಷೆಯ ವೇಳೆ ಈ ಘಟನೆ ನಡೆದಿದ್ದು, ಸ್ಪರ್ಧಿಗಳು ಓಟದಲ್ಲಿ ಭಾಗವಹಿಸಲು ಆಗಮಿಸಿದ್ದರು. ಇದು ನೇಮಕಾತಿಯ ಮೊದಲ ದೈಹಿಕ ಪರೀಕ್ಷೆಯಾಗಿತ್ತು. ಅಭ್ಯರ್ಥಿಗಳಲ್ಲಿಒಬ್ಬನಾದ ಗ್ವಾಲಿಯರ್‌ನ ದಾಬ್ರಾದ ಯುವಕ ಪಹಾದ್ ಸಿಂಗ್ 24 ಕಿಲೋಮೀಟರ್ ಓಟದಲ್ಲಿ ಆರಂಭಿಕವಾಗಿ ಮುನ್ನಡೆ ಸಾಧಿಸಿದ್ದ . ಹೇಗೂ ನಾನು ಮುಂದಿದ್ದೇನೆ ಎಂದು ಅತ್ಯುತ್ಸಾಹದಿಂದ ವಿಶ್ರಾಂತಿಗೆಂದು ಕುಳಿತು ನಿದ್ದೆಗೆ ಜಾರಿದ್ದಾನೆ. ಸ್ಪರ್ಧೆ ಮುಗಿದ ಬಳಿಕವೇ ಎಚ್ಚರಗೊಂಡಿದ್ದಾನೆ..!.

ಖಾಂಡ್ವಾದ ಅರಣ್ಯ ಅಧಿಕಾರಿ ಜೆಪಿ ಮಿಶ್ರಾ ಅವರ ಪ್ರಕಾರ, ಅರಣ್ಯದ ಅಂಚಿನಲ್ಲಿರುವ ಸಮುದಾಯಗಳಿಗೆ 38 ಅರಣ್ಯ ರಕ್ಷಕ ಹುದ್ದೆಗಳಿಗೆ ನೇಮಕಾತಿ ಅಭಿಯಾನವನ್ನು ಆಯೋಜಿಸಲಾಗಿತ್ತು. ಪರೀಕ್ಷೆಗೆ ಒಟ್ಟು 114 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. 24 ಕಿಲೋಮೀಟರ್ ಓಟವನ್ನು ನಾಲ್ಕು ಗಂಟೆಗಳಲ್ಲಿ ಪೂರ್ಣಗೊಳಿಸುವುದು ಪ್ರಾಥಮಿಕ ಗುರಿಯಾಗಿತ್ತು. ಪರೀಕ್ಷೆಯು ಮಾರ್ಚ್ 28 ರಂದು ಬೆಳಗ್ಗೆ 6.30 ಕ್ಕೆ ಪ್ರಾರಂಭವಾಯಿತು, ಒಂಬತ್ತು ಮಹಿಳೆಯರು ಮತ್ತು 52 ಪುರುಷರು ಸೇರಿದಂತೆ 61 ಅಭ್ಯರ್ಥಿಗಳು ಭಾಗವಹಿಸಿದ್ದರು.

ಸ್ಪರ್ಧೆಯು ಬೆಳಿಗ್ಗೆ 10.30 ಕ್ಕೆ ಕೊನೆಗೊಂಡಾಗ, 60 ಸ್ಪರ್ಧಿಗಳು ಅಂತಿಮ ಗುರಿಯನ್ನು ಮುಟ್ಟಿದರು.ಆದರೆ ಪಹರ್ ಸಿಂಗ್ ಕಾಣೆಯಾಗಿದ್ದ. ತಂಡವೊಂದು ಆತನನ್ನು ಪತ್ತೆ ಹಚ್ಚಲು ಹೋದಾಗ, ಕೊನೆಯ ಚೆಕ್ ಪಾಯಿಂಟ್‌ನ ಮೊದಲ ಟ್ರ್ಯಾಕ್ ಬಳಿ ಮಲಗಿರುವುದು ಕಂಡುಬಂದಿದೆ.

ಎಚ್ಚರಗೊಂಡ ನಂತರ, ಪಹಾರ್ ಸಿಂಗ್ ತನ್ನ ಪಾದಗಳಲ್ಲಿ ಗುಳ್ಳೆಗಳಿಂದಾಗಿ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯಲು ಕುಳಿತಿದ್ದೇನೆ ಮತ್ತು ಯಾವಾಗ ಗಾಢವಾದ ನಿದ್ರೆಗೆ ಜಾರಿದೆ ಎಂದು ತಿಳಿದಿಲ್ಲ ಎಂದು ಅಧಿಕಾರಿಗಳಿಗೆ ಹೇಳಿದ್ದಾನೆ.

suddiyaana