ವಿಷಕಾರಿಯಾಯ್ತು ಉಸಿರಾಡುವ ಗಾಳಿ! – ರಾಷ್ಟ್ರ ರಾಜಧಾನಿ ವಾಯುಮಾಲಿನ್ಯಕ್ಕೆ ಕೊಡಗಿನ ಉದ್ಯಮಿ ಬಲಿ!

ವಿಷಕಾರಿಯಾಯ್ತು ಉಸಿರಾಡುವ ಗಾಳಿ! – ರಾಷ್ಟ್ರ ರಾಜಧಾನಿ ವಾಯುಮಾಲಿನ್ಯಕ್ಕೆ ಕೊಡಗಿನ ಉದ್ಯಮಿ ಬಲಿ!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ತೀರಾ ಕೆಳಮಟ್ಟಕ್ಕೆ ಇಳಿದಿದೆ. ಉಸಿರಾಡುವ ಗಾಳಿಯೇ ವಿಷವಾಗಿ ಮಾರ್ಪಟ್ಟಿದ್ದು, ಅಲ್ಲಿನ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಸಿರಾಟದ ತೊಂದರೆಯಿಂದಾಗಿ ನಿತ್ಯ ನೂರಾರು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದೀಗ ದೆಹಲಿಯ ವಾಯುಮಾಲಿನ್ಯಕ್ಕೆ ಕೊಡಗಿನ ಉದ್ಯಮಿಯೊಬ್ಬರು ಬಲಿಯಾಗಿದ್ದಾರೆ.

ಇದನ್ನೂ ಓದಿ: ಮತ್ತೊಂದು ಅಪಖ್ಯಾತಿ ಪಡೆದ ರಾಷ್ಟ್ರ ರಾಜಧಾನಿ! – ವಿಶ್ವದಲ್ಲೇ  ನಂ.1 ಮಲಿನ ನಗರ ದೆಹಲಿ!

ಹೌದು, ದೆಹಲಿ ವಾಯು ಮಾಲಿನ್ಯಕ್ಕೆ ಕೊಡಗು ಜಿಲ್ಲೆಯ ಕುಶಾಲನಗರದ ಕಾಫಿ ಉದ್ಯಮಿ ನರೇಂದ್ರ ಹೆಬ್ಬಾರ್ (56) ಎಂಬುವವರು ಮೃತಪಟ್ಟಿದ್ದಾರೆ. ಮೂಲತಃ ಸಿದ್ದಾಪುರದ ಗುಹ್ಯ ಗ್ರಾಮದ ನಿವಾಸಿ, ಕುಶಾಲನಗರದಲ್ಲಿ ಕಾಫಿ ಉದ್ಯಮ ನಡೆಸುತ್ತಿದ್ದರು. ದೆಹಲಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಕಾಫಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳಿದ್ದ ನರೇಂದ್ರ ಅಲ್ಲಿನ ವಾಯುಮಾಲಿನ್ಯಕ್ಕೆ ತುತ್ತಾಗಿ ಅಸ್ವಸ್ಥಗೊಂಡಿದ್ದರು. ಹೀಗಾಗಿ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಅವರು ಮಾರನೇ ದಿನ ಬೆಂಗಳೂರಿಗೆ ಹಿಂತಿರುಗಿದ್ದಾರೆ. ಬೆಂಗಳೂರಿನಲ್ಲಿ ಮತ್ತೆ ಅವರು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾರೆ.

ನರೇಂದ್ರ ಅವರು ಕುಶಾಲನಗರದಲ್ಲಿ ಎರಡು ದಶಕಗಳ ಕಾಲ ಕಾಫಿ ಉದ್ಯಮಿಯಾಗಿ ಕೆಲಸ ಮಾಡಿದ್ದರು. ಕಳೆದ ಕೆಲ ವರ್ಷಗಳಿಂದ ಸಮೀಪದ ಕೊಪ್ಪ ಗ್ರಾಮದಲ್ಲಿ ಕೆಫೆ ಕಾಫಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಬೆಂಗಳೂರಿನಲ್ಲಿ ನಡೆಯಿತು.

Shwetha M