ಮದುವೆಯಂದು ಅಂದವಾಗಿ ಕಾಣಲು   ‘ಗ್ಯಾಸ್ಟ್ರಿಕ್ ಬಲೂನ್’ ಸರ್ಜರಿ  – ಹಸೆಮಣೆ ಏರಲು ಹೊರಟವಳು ಮಸಣ ಸೇರಿದಳು!

ಮದುವೆಯಂದು ಅಂದವಾಗಿ ಕಾಣಲು   ‘ಗ್ಯಾಸ್ಟ್ರಿಕ್ ಬಲೂನ್’ ಸರ್ಜರಿ  – ಹಸೆಮಣೆ ಏರಲು ಹೊರಟವಳು ಮಸಣ ಸೇರಿದಳು!

ಈಗಿನ ಕಾಲದ ಅನೇಕ ಯುವಕ ಯುವತಿಯರಿಗೆ ತಾನು ದಪ್ಪ ಇದ್ದೇನೆ ಅನ್ನೋ ಕೊರಗು.. ಹೀಗಾಗಿ ಸ್ಲಿಮ್‌ ಆಗಿ ಸುಂದರವಾಗಿರಲು ಬಯಸುತ್ತಾರೆ. ಸಣ್ಣ ಆಗಲು ಏನೇನೋ ಸರ್ಕಸ್‌ ಮಾಡುತ್ತಿರುತ್ತಾರೆ. ಏನೇನೋ ಚಿಕಿತ್ಸೆಗಳನ್ನು ಪಡೆದು ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಘಟನೆ ನಡೆದಿದೆ. ಇದೀಗ ಇಲ್ಲೊಬ್ಬಳು ಯುವತಿ ತನಗೆ ಮದುವೆ ಇರುವ ಹಿನ್ನೆಲೆ ಸಣ್ಣಗಾಗಲು ಮುಂದಾಗಿದ್ದಾಳೆ. ಮದುವೆ ದಿನ ರಾಣಿಯಂತೆ ಪಲ್ಲಕ್ಕಿಯಲ್ಲಿ ಕೂರಲು ಬಯಸಿದ್ದವಳು ಶವ ಪೆಟ್ಟಿಗೆಯಲ್ಲಿ ಮಲಗಿದ್ದಾಳೆ.

ಇದನ್ನೂ ಓದಿ: ಸೂಪರ್‌ಸ್ಟಾರ್ ರಜನಿಕಾಂತ್ ದುಬೈ ಪ್ರಜೆ ಆಗ್ತಾರಾ? – ತಲೈವಾಗೆ ಗೋಲ್ಡನ್ ವೀಸಾ ನೀಡಿದ UAE ಸರ್ಕಾರ

ಅಷ್ಟಕ್ಕೂ ಆಗಿದ್ದೇನು?

ಬ್ರೆಜಿಲ್​ನಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಯುವತಿಯೊಬ್ಬಳು ತನ್ನ ಮದುವೆಯ ದಿನ ಗೌನ್​​ನಲ್ಲಿ ಗೊಂಬೆಯಂತೆ ಕಾಣಲು ತೂಕ ಇಳಿಸಿಕೊಳ್ಳಲು ಮುಂದಾಗಿದ್ದಾಳೆ. ಆದರೆ ತೂಕ ಇಳಿಕೆಯ ಡಯೆಟ್​​ ಆಕೆಯ ಪ್ರಾಣಕ್ಕೆ ಸಂಚಕಾರ ತಂದಿದೆ. ಡಯೆಟ್‌ಗೆ ಒಳಗಾದವಳು ಈಗ ಮಸಣ ಸೇರಿದ್ದಾಳೆ.

ಮೃತ ಯುವತಿ ಲಾರಾ ಫೆರ್ನಾಂಡಿಸ್ ಕೋಸ್ಟಾ(31) ಎಂದು ಗುರುತಿಸಲಾಗಿದೆ. ಲಾರಾ ತನ್ನ ಬಹುಕಾಲದ ಪ್ರಿಯಕರ ಮ್ಯಾಥ್ಯೂಸ್ ನೊಂದಿಗೆ ವಿವಾಹವಾಗಲು ಸೆಪ್ಟೆಂಬರ್ 7ರಂದು ದಿನ ನಿಗದಿಯಾಗಿತ್ತು. ಇನ್ನೇನು ಮದುವೆಗೆ ತಿಂಗಳುಗಳು ಬಾಕಿ ಇರುವಾಗ ತೂಕ ಇಳಿಸಿಕೊಳ್ಳಲು ಬಯಸಿದ್ದಾಳೆ. ಹೀಗಾಗಿ ಸುಮಾರು 8ಕೆಜಿ ತೂಕ ಕಳೆದುಕೊಳ್ಳಲು ಬಯಸಿದ್ದು, ಇದಕ್ಕಾಗಿ ಏಪ್ರಿಲ್ 26 ರಂದು ಬ್ರೆಜಿಲ್‌ನ ಬೆಲೊ ಹಾರಿಜಾಂಟೆಯ ಕ್ಲಿನಿಕ್‌ನಲ್ಲಿ ಹೊಟ್ಟೆಯೊಳಗೆ ‘ಗ್ಯಾಸ್ಟ್ರಿಕ್ ಬಲೂನ್’ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಆದರೆ ಸರ್ಜರಿಯಾದ ಕೆಲ ದಿನಗಳ ಬಳಿಕ ಆರೋಗ್ಯದಲ್ಲಿ ಏರುಪೇರಾಗಿದ್ದು, ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯರು ಆಕೆಯನ್ನು ಪರೀಕ್ಷಿಸಿ ಆಕೆಯ ಹೊಟ್ಟೆಯೊಳಗಿದ್ದ ಗ್ಯಾಸ್ಟ್ರಿಕ್ ಬಲೂನ್ ಹೊರ ತೆಗೆದಿದ್ದಾರೆ. ಬಳಿಕ ಆಕೆಯ ಹೊಟ್ಟೆಯಲ್ಲಿ ರಂಧ್ರ ಉಂಟಾಗಿದ್ದು, ಅದು ಹೊಟ್ಟೆಯ ಸುತ್ತಲೂ ಸೋಂಕನ್ನು ಉಂಟುಮಾಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ತೀವ್ರ ನಿಗಾ ಘಟಕದಲ್ಲಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ  ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಏನಿದುಗ್ಯಾಸ್ಟ್ರಿಕ್ ಬಲೂನ್ಸರ್ಜರಿ?

ಗ್ಯಾಸ್ಟ್ರಿಕ್ ಬಲೂನ್ ಅನ್ನು ಇಂಟ್ರಾಗ್ಯಾಸ್ಟ್ರಿಕ್ ಬಲೂನ್ ( IGB ) ಅಥವಾ ಹೊಟ್ಟೆಯ ಬಲೂನ್ ಎಂದೂ ಕರೆಯುತ್ತಾರೆ. ಗಾಳಿ ತುಂಬಿದ ಬಲೂನ್ ಅನ್ನು ಟ್ಯೂಬ್ ಮೂಲಕ ಮೌಖಿಕವಾಗಿ ನಿಮ್ಮ ಹೊಟ್ಟೆಯೊಳಗೆ ಇರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಲವಣಯುಕ್ತ ತುಂಬಿದ ಸಿಲಿಕೋನ್ ಚೀಲ ಹೊಟ್ಟೆಯೊಳಗೆ ಪೂರ್ಣತೆಯ ಭಾವನೆಯನ್ನು ಉಂಟುಮಾಡುತ್ತದೆ. ಹೀಗಾಗಿ ಹೆಚ್ಚು ತಿನ್ನುವುದನ್ನು ತಡೆಯುತ್ತದೆ. ಹೀಗಾಗಿ ವೇಗವಾಗಿ ತೂಕ ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

Shwetha M