ರಣ ಬಿಸಿಲಿಗೆ ರಾಜ್ಯದಲ್ಲಿ ಮತ್ತೊಂದು ಬಲಿ! – ಬಿಸಿಲಿನಲ್ಲಿ ಆಟವಾಡುತ್ತಿದ್ದ ಬಾಲಕ ದುರಂತ ಅಂತ್ಯ!

ರಣ ಬಿಸಿಲಿಗೆ ರಾಜ್ಯದಲ್ಲಿ ಮತ್ತೊಂದು ಬಲಿ! – ಬಿಸಿಲಿನಲ್ಲಿ ಆಟವಾಡುತ್ತಿದ್ದ ಬಾಲಕ ದುರಂತ ಅಂತ್ಯ!

ದೇಶದಾದ್ಯಂತ ತಾಪಮಾನವು ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಬಿಸಿಗಾಳಿ ಮತ್ತು ಅತಿಯಾದ ಉಷ್ಣಾಂಶದಿಂದ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಈಗಾಗಲೇ ದೇಶದಲ್ಲಿ ಹೀಟ್‌ಸ್ಕ್ರೋಕ್‌ಗೆ ಜನರು ಬಲಿಯಾಗುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಬಿಸಿಲಿಗೆ ಮತ್ತೊಂದು ಬಲಿಯಾಗಿದೆ. ಬಿಸಿಲಿನಲ್ಲಿ ಆಟವಾಡುತ್ತಿದ್ದ ಬಾಲಕ ದುರಂತ ಅಂತ್ಯ ಕಂಡಿದ್ದಾನೆ.

ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ವಧು ಬಾಳಲ್ಲಿ ವಿಧಿಯಾಟ! – ಬ್ಯೂಟಿ ಪಾರ್ಲರ್‌ಗೆ ಹೊರಟ ಯುವತಿ ಅಪಘಾತಕ್ಕೆ ಬಲಿ!

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ. ಶ್ರೀಶೈಲ ಬಿರಾದಾರ (15) ಮೃತ ಬಾಲಕ ಎಂದು ವರದಿಯಾಗಿದೆ.

ಶಾಲಾ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಶ್ರೀಶೈಲ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಆಟವಾಡಿದ್ದ ಎನ್ನಲಾಗಿದೆ. ಕೆಲ ಹೊತ್ತಿನಲ್ಲಿಯೇ ಆತ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಬಾಲಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಅದರ ಪರಿಣಾಮಗಳು ಸ್ಪಷ್ಟವಾಗಿ ಕಾಣಿಸಿಕೊಳ್ಳಲಾರಂಭಿಸಿವೆ. ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ವೈದ್ಯರು ಗಂಭೀರ ಎಚ್ಚರಿಕೆ ನೀಡಿದ್ದು, ಮಕ್ಕಳು-ವೃದ್ಧರು, ಗರ್ಭಿಣಿಯರು ಹೆಚ್ಚು ಅಪಾಯದಲ್ಲಿದ್ದು, ಹೆಚ್ಚಿನ ಕಾಳಜಿ ವಹಿಸುವಂತೆ ತಿಳಿಸಿದ್ದಾರೆ. ಹೆಚ್ಚು ನೀರು ಹಾಗೂ ದ್ರವ ಪದಾರ್ಥಗಳನ್ನು ಸೇವಿಸಲು ತಿಳಿಸಲಾಗಿದೆ. ಈ ಬಾರಿ ರಾಜ್ಯ ಸರ್ಕಾರ ವಿಶೇಷವಾಗಿ ಹೀಟ್‌ ಸ್ಟ್ರೋಕ್‌ಗೆ ಒಳಗಾಗಿದ್ದವರಿಗಾಗಿ ವಾರ್ಡ್‌ ತೆರದಿದ್ದು, ಸಕಲ ಸಿದ್ಧತೆ ನಡೆಸಲಾಗಿದೆ.

Shwetha M