ಶಾಲೆಯಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದು ಬಾಲಕ ಸಾವು – ಗೆಳೆಯನ ಕಣ್ಣೆದುರೇ ಹೋಯ್ತು ಪ್ರಾಣ

ಶಾಲೆಯಲ್ಲಿ ನಿರ್ಮಾಣ ಹಂತದ ಗೋಡೆ ಕುಸಿದು ಬಾಲಕ ಸಾವು – ಗೆಳೆಯನ ಕಣ್ಣೆದುರೇ ಹೋಯ್ತು ಪ್ರಾಣ

ಅವರಿಬ್ಬರೂ ಗೆಳೆಯರು. ಒಟ್ಟೊಟ್ಟಿಗೆ ಶಾಲೆಗೆ ಹೋಗುತ್ತಿದ್ದರು. ಒಟ್ಟೊಟ್ಟಿಗೆ ಆಟ ಆಡುತ್ತಿದ್ದರು. ಇವತ್ತು ಕೂಡ ಶನಿವಾರ ಅಂತಾ ಬೆಳಗ್ಗೆಯೇ ಇಬ್ಬರೂ ಶಾಲೆ ಅಂಗಳಕ್ಕೆ ಹೋಗಿ ಆಟ ಆಡುತ್ತಿದ್ದರು. ಆದರೆ ಮಕ್ಕಳ ಮೇಲೆ ಅದ್ಯಾರ ಕಣ್ಣು ಬಿದ್ದಿತ್ತೋ ಏನೋ. ಕ್ಷಣ ಮಾತ್ರದಲ್ಲೇ ದುರಂತ ಘಟಿಸಿ ಹೋಗಿತ್ತು. ಗೆಳೆಯನ ಎದುರೇ ಮತ್ತೊಬ್ಬನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ಇದನ್ನೂ ಓದಿ : ಕಾಂಗ್ರೆಸ್ ಗ್ಯಾರಂಟಿಗಳನ್ನೇ ಬಂಡವಾಳ ಮಾಡಿಕೊಂಡ ಸೈಬರ್ ಕಳ್ಳರು – ಸೇವಾಸಿಂಧು ಹೆಸರಲ್ಲಿ ಫೇಕ್ ಲಿಂಕ್ ಕಳಿಸಿ ಹಣ ಲೂಟಿ

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರು ಗ್ರಾಮದಲ್ಲಿ ದುರಂತವೊಂದು ನಡೆದಿದೆ. ಗ್ರಾಮದ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆಯ ಆವರಣದಲ್ಲಿ (Kiresur Village, Hubballi) ನಿರ್ಮಾಣ ಹಂತದ ಗೋಡೆ ಕುಸಿದು ವಿದ್ಯಾರ್ಥಿ 9 ವರ್ಷದ ವಿಶೃತ್ ಬೆಳಗಲಿ ಸಾವನ್ನಪ್ಪಿದ್ದಾನೆ. ಸ್ನೇಹಿತನನ್ನು ಕಾಪಾಡಲು ಹೋದ ಪ್ರಭು ನಾಗಾವಿ ಎಂಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ. ವಿವೇಕ ಯೋಜನೆಯಡಿ ಹೆಚ್ಚುವರಿ ಕೊಠಡಿ ಮಂಜೂರಾಗಿದ್ದು, ಹಲವಾರು ತಿಂಗಳಿಂದ ಈ ಕಟ್ಟಡ ಕಾಮಗಾರಿ ನಡೆಯುತ್ತಿದೆ. ‌ನಿನ್ನೆ ಮತ್ತೊಂದು ಹಂತದ ಗೋಡೆ ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಗೋಡೆ ಇನ್ನೂ ಹಸಿಯಾಗಿತ್ತು. ಇಂದು ವಿಶೃತ್ ಮತ್ತು ಪ್ರಜ್ವಲ್ ಬೆಳಗ್ಗೆ ಇಬ್ಬರು ಬೇಗ ಶಾಲೆಗೆ ಹೋಗಿದ್ದಾರೆ. ಇನ್ನೂ ಶಾಲೆಯ ಸಮಯವಾಗಿರದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಯಾವುದೇ ಶಿಕ್ಷಕರು ಇರಲಿಲ್ಲ. ಹೀಗಾಗಿ ನಿರ್ಮಾಣದ ಹಂತದ ಕಟ್ಟಡ ಬಳಿಗೆ ಮೂತ್ರವಿಸರ್ಜನೆಗೆ ತೆರಳಿದ್ದು, ಈ ವೇಳೆ ಏಕಾಏಕಿ ಗೋಡೆ ಕುಸಿದು ಈ ಬಾಲಕರ ಮೇಲೆ ಬಿದ್ದಿದೆ. ಗೋಡೆ ಬಿದ್ದ ರಭಸಕ್ಕೆ ವಿಶೃತ್ ಸ್ಥಳದಲ್ಲೇ ಸಾವಿನಪ್ಪಿದ್ದಾನೆ. ಇನ್ನು ಸ್ನೇಹಿತನನ್ನು ಕಾಪಾಡಲು ಹೋದ ಪ್ರಭು ಮೇಲೆ ಇಟ್ಟಿಗೆ ಬಿದ್ದು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ.

ಇನ್ನು ವಿದ್ಯಾರ್ಥಿಯ ಈ ಸಾವಿಗೆ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಕಟ್ಟಡ ಕಳಪೆ ಕಾಮಗಾರಿ ಒಂದು ಕಡೆಯಾದರೆ, ಮತ್ತೊಂದು ಕಡೆ ಕಟ್ಟಡಕ್ಕೆ ಭದ್ರತಾ ಸಿಬ್ಬಂದಿ ನೇಮಿಸುವಂತೆ ಶಾಲಾ ಆಡಳಿತ ಮಂಡಳಿ ಹೇಳಿದ್ದರೂ, ಯಾವುದೇ ಕಾವಲುಗಾರರನ್ನು ನೇಮಿಸದೇ ಇರುವುದು ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಸದ್ಯ ಪ್ರಭುಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮೃತ ವಿಶೃತ್ ಶಾಲೆಯಲ್ಲಿ ಬಹಳಷ್ಟು ಬುದ್ಧಿವಂತ ವಿದ್ಯಾರ್ಥಿ. ಇಂತಹ ವಿದ್ಯಾರ್ಥಿಗೆ ದೇವರು ಈ ರೀತಿ ಮೋಸ ಮಾಡುತ್ತಾನೆ ಅಂತ ಅಂದುಕೊಂಡಿರಲ್ಲ ಎಂದು ಶಿಕ್ಷಕರು ಕಣ್ಣೀರು ಹಾಕಿದ್ದಾರೆ. ಇನ್ನು ಘಟನೆಯ ಬಗ್ಗೆ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರಕ್ಕೆ ಮನವಿ ಮಾಡಲಾಗುತ್ತದೆ. ಜೊತೆಗೆ ಗುತ್ತಿಗೆದಾರನ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎನ್ನುವುದು ಅಧಿಕಾರಿಗಳ ಮಾತು. ತಪ್ಪು ಯಾರದ್ದೇ ಇದ್ದರೂ ಬಾಲಕ ಇನ್ನೆಂದು ಬಾರದ ಲೋಕ ಸೇರಿದ್ದಾರೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕಿದೆ.

suddiyaana