ಮೀನುಗಾರರ ರಕ್ಷಣೆಗೆ ಬಂತು ಬೋಟ್ ಆ್ಯಂಬುಲೆನ್ಸ್ – ನೀರಿನಲ್ಲೇ ವೇಗವಾಗಿ ಬರಲಿದೆ ಸೀ ಆಂಬ್ಯುಲೆನ್ಸ್

ಮೀನುಗಾರರ ರಕ್ಷಣೆಗೆ ಬಂತು ಬೋಟ್ ಆ್ಯಂಬುಲೆನ್ಸ್ –  ನೀರಿನಲ್ಲೇ ವೇಗವಾಗಿ ಬರಲಿದೆ ಸೀ ಆಂಬ್ಯುಲೆನ್ಸ್

ರಾಜ್ಯದಲ್ಲಿ ಅದೆಷ್ಟೋ ಮೀನುಗಾರರಿದ್ದಾರೆ. ಆದರೆ, ಸಮುದ್ರದಲ್ಲಿ ಏನಾದರೂ ಅನಾಹುತ ಸಂಭವಿಸದರೆ ತಕ್ಷಣವೇ ನೆರವು ಸಿಗುವುದಿಲ್ಲ. ಹೀಗಾಗಿ ಸೀ ಆಂಬ್ಯುಲೆನ್ಸ್‌ ಬೇಕು ಅನ್ನೋ ಬೇಡಿಕೆ ಕೆಲ ವರ್ಷಗಳಿಂದ ಬೇಡಿಕೆಯಿತ್ತು. ಕೊನೆಗೂ ಸೀ ಆ್ಯಂಬುಲೆನ್ಸ್ ನೀರಿಗಿಳಿಯಲಿದೆ.

ಇದನ್ನೂ ಓದಿ:ಪಬ್‌ಜಿ ಅಡಿಕ್ಟ್‌ ಆಗುವ ಮುನ್ನ ಎಚ್ಚರ! – ಪಬ್‌ಜಿ ಆಡುತ್ತಲೇ ಪ್ರಾಣ ಬಿಟ್ಟ ಯುವಕ!

ರಸ್ತೆಯಲ್ಲಿ ಅಪಘಾತವಾದರೆ ತಕ್ಷಣವೇ ಆ್ಯಂಬುಲೆನ್ಸ್ ಗೆ ಕರೆ ಮಾಡಬಹುದು. ಆಗ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಾಯವಾಗುತ್ತದೆ. ಆದರೆ, ಸಮುದ್ರದಲ್ಲಿ ಅಪಘಾತವಾದಾಗ ಗಾಯಾಳುಗಳನ್ನು ಸಾಗಿಸಲು ಕಷ್ಟವಾಗುತ್ತದೆ. ಇದೀಗ ಮೀನುಗಾರರ ಚಿಂತೆ ದೂರ ಮಾಡಲು ಸೀ ಆ್ಯಂಬುಲೆನ್ಸ್ ರೆಡಿಯಾಗಿದೆ. ಉಳ್ಳಾಲದ ನಾಡದೋಣಿ ಹಾಗೂ ಗಿಲಿನೆಟ್ ಮೀನುಗಾರರ ಸಂಘದಿಂದ ಬೋಟ್ ಆಂಬ್ಯುಲೆನ್ಸ್ ತಯಾರಿಸಲಾಗಿದೆ. ಇದು ರಾಜ್ಯದಲ್ಲೇ ಮೊದಲ ಬಾರಿ ಮಂಗಳೂರಿನಲ್ಲಿ ಸಿದ್ಧವಾದ ಬೋಟ್ ಆಂಬ್ಯುಲೆನ್ಸ್ ಆಗಿದೆ.

ನದಿ ಹಾಗೂ ಸಮುದ್ರದಲ್ಲಿ ಬೋಟ್ ಅಥವಾ ದೋಣಿ ಮಗುಚಿದಾಗ, ಬೆಂಕಿ ಅವಘಡ ಸಂಭವಿಸಿದಾಗ ಮೀನುಗಾರರನ್ನು ರಕ್ಷಿಸೋದು ದೊಡ್ಡ ಸವಾಲಾಗಿದೆ. ಎಷ್ಟೋ ಬಾರಿ ಮೀನುಗಾರರೇ ಹರಸಾಹಸ ಪಟ್ಟು ಮೀನುಗಾರರ ಜೀವ ಉಳಿಸಿದ್ದಾರೆ. ಇನ್ನೆಷ್ಟೋ ಬಾರಿ ದಡಕ್ಕೆ ಕರೆ ತರುವಷ್ಟರಲ್ಲಿ ಸಾಕಷ್ಟು ಮೀನುಗಾರರು ಸಾವನ್ನಪ್ಪಿರುವ ಉದಾಹರಣೆಯೂ ಇದೆ. ಇದೀಗ ಮೀನುಗಾರರ ರಕ್ಷಣೆಗೆಂದೇ ಬೋಟ್ ಆಂಬ್ಯುಲೆನ್ಸ್ ತಯಾರಿಸಲಾಗಿದೆ. ಇದು ನೋಡೋಕೆ ಸಾಮಾನ್ಯ ಬೋಟ್‌ನಂತೆ ಇದೆ. ಆದರೆ ಇದರಲ್ಲಿ ಸೈರನ್, ಎಮರ್ಜೆನ್ಸಿ ಕೆಂಪು ದೀಪ, ಸ್ಟ್ರೆಚರ್, ಆಮ್ಲಜನಕ ವೈದ್ಯಕೀಯ ಉಪಕರಣ, ಲೈಫ್ ಜಾಕೆಟ್ ವ್ಯವಸ್ಥೆ ಇದೆ. ದುರಂತದ ಸಂಭವಿಸಿದಾಗ ಬೋಟ್ ಆಂಬ್ಯುಲೆನ್ಸ್ ಮೈಕ್‌ನಲ್ಲಿ ಅನೌನ್ಸ್ ಮಾಡಿ ಸೈರನ್ ಹಾಕುತ್ತಾ ಬಂದ್ರೆ ಇತರೆ ಬೋಟ್‌ಗಳು ದಾರಿ ಮಾಡಿಕೊಡುತ್ತದೆ. ಇದರಿಂದ ತಕ್ಷಣ ಅಪಾಯದಲ್ಲಿ ಇರುವವರನ್ನು ದಡಕ್ಕೆ ಸಾಗಿಸಲು ಸುಲಭ ಆಗುತ್ತೆ ಅಂತಾರೆ ಬೋಟ್ ಆಂಬ್ಯುಲೆನ್ಸ್ ಮಾಲೀಕರು.

ಬೋಟ್ ಆಂಬ್ಯುಲೆನ್ಸ್ ರೆಡಿ ಮಾಡಿರುವ ಹನೀಫ್ ಕೂಡಾ ಈ ಬೋಟ್ ಆಂಬ್ಯುಲೆನ್ಸ್ ಬಗ್ಗೆ ವಿವರಿಸಿದ್ದಾರೆ. ಮೂರು ವರ್ಷಗಳ ಹಿಂದೆ ನಮಗೆ ಈ ಯೋಚನೆ ಬಂತು, ಈಗ ಇದು ಲಭ್ಯವಾಗಿದೆ. ನಮ್ಮ ಯೋಜನೆ ಶುರುವಾದ ಬಳಿಕ ಸರ್ಕಾರ ಕೂಡ ಇದಕ್ಕೆ 7 ಕೋಟಿ ರೂಪಾಯಿಯನ್ನು ಮೂರು ಆ್ಯಂಬುಲೆನ್ಸ್ ಗಾಗಿ ಸೀಮಿತವಾಗಿ ನೀಡಿತ್ತು, ಆದರೆ ಇದುವರೆಗೂ ಆ್ಯಂಬುಲೆನ್ಸ್ ಬಂದಿಲ್ಲ. ಶೀಘ್ರವೇ ಅವು ಕೂಡ ಮೀನುಗಾರರ ಸೇವೆ ಸಿಗಲಿದೆ ಎಂಬ ವಿಶ್ವಾಸವಿದೆ. ಬೋಟ್ ಆಂಬ್ಯುಲೆನ್ಸ್ ರಕ್ಷಣೆಗೆ ಬರುವಾಗಲೇ, ನಮ್ಮೂರ ಧ್ವನಿ ಅನ್ನೋ ಆಂಬ್ಯುಲೆನ್ಸ್‌ಗೆ ಮಾಹಿತಿ ನೀಡ್ತಾರೆ. ಆಗ ದಡಕ್ಕೆ ಬರುತ್ತಿದ್ದಂತೆ ರಕ್ಷಣೆ ಮಾಡಿದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗುತ್ತದೆ. ಸರ್ಕಾರದ ಸೀ ಆ್ಯಂಬುಲೆನ್ಸ್‌ಗೆ ಕಾಯದೇ ಮೀನುಗಾರರೇ ಬೋಟ್ ಆಂಬ್ಯುಲೆನ್ಸ್‌ ಸಿದ್ಧಪಡಿಸಿದ್ದಾರೆ. ಆದರೆ, ಸರ್ಕಾರ ಈ ನಿಟ್ಟಿನಲ್ಲಿ ಗಮನ ವಹಿಸಬೇಕು ಅನ್ನೋದು ಮೀನುಗಾರರ ಒತ್ತಾಯ.

Sulekha