9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು- ಶಿಕ್ಷಕರ ನಿಂದನೆಗೆ ಬೇಸತ್ತು ಶಾಲೆಯಲ್ಲೇ ಸಾವಿಗೆ ಶರಣು

9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು- ಶಿಕ್ಷಕರ ನಿಂದನೆಗೆ ಬೇಸತ್ತು ಶಾಲೆಯಲ್ಲೇ ಸಾವಿಗೆ ಶರಣು

ಇತ್ತೀಚೆಗೆ ವಿದ್ಯಾರ್ಥಿಗಳು ದುಡುಕಿನ ನಿರ್ಧಾರಕ್ಕೆ ಬರುತ್ತಿರುವ ಪ್ರಕರಣ ಹೆಚ್ಚಾಗಿದೆ. ಈಗ ಮಕ್ಕಳಿಗೆ ಜೋರು ಮಾಡುವ ಹಾಗಿಲ್ಲ. ಹಾಗಂತಾ ತಪ್ಪು ಮಾಡಿದರೆ ಹೇಳಲು ರೀತಿ ನೀತಿಯೂ ಇದೆ. ಇದನ್ನು ಮಕ್ಕಳು ತೆಗೆದುಕೊಳ್ಳುವ ರೀತಿಯೂ ಬೇರೆ ಬೇರೆಯಾಗಿರುತ್ತದೆ. ಯಾದಗಿರಿಯಲ್ಲಿ ಹೈಸ್ಕೂಲ್ ಹುಡುಗನೊಬ್ಬ ಶಿಕ್ಷಕರು ನಿಂದಿಸಿದ್ದಾರೆ ಎಂಬ ಆರೋಪದ ಮೇಲೆ ನೇಣಿಗೆ ಶರಣಾಗಿದ್ದಾನೆ.

ಇದನ್ನೂ ಓದಿ: ಮಗಳು ಓಡಿ ಹೋಗಿದ್ದಕ್ಕೆ ಗಂಡನ ಕಿರಿಕ್ – ರೊಚ್ಚಿಗೆದ್ದು ಪತಿ ಕಥೆ ಮುಗಿಸಿದ ಹೆಂಡತಿ

ಯಾದಗಿರಿ ಜಿಲ್ಲೆಯ ವಡಗೇರಾ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಪವನ್  ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅದು ಕೂಡಾ ಶಾಲಾ ಆವರಣದಲ್ಲಿಯೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಶಿಕ್ಷಕರ ನಿಂದನೆಯೇ ಬಾಲಕನ ಈ ನಿರ್ಧಾರಕ್ಕೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.  15 ವರ್ಷದ ಪವನ್  ವಡಗೇರಾ ಸರ್ಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಜನವರಿ 21ರಂದು ಮಧ್ಯಾಹ್ನದ ವೇಳೆಗೆ ಶಾಲಾ ಆವರಣದಲ್ಲಿರುವ ಮರದ ಕೆಳಗೆ ಪವನ್ ಶವ ಪತ್ತೆಯಾಗಿದೆ. ಮರಕ್ಕೆ ಕಟ್ಟಿದ್ದ ಹಗ್ಗಕ್ಕೆ ಬಾಲಕ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶಾಲೆಯಲ್ಲಿ ಶಿಕ್ಷಕರು ಕಾರಣವಿಲ್ಲದೆ ತನ್ನನ್ನು ಬೈಯುತ್ತಿದ್ದಾರೆ ಎಂದು ಪವನ್ ಈ ಹಿಂದೆ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ. ಶಿಕ್ಷಕರು ನೀಡುತ್ತಿದ್ದ ಮಾನಸಿಕ ಕಿರುಕುಳ ಮತ್ತು ನಿಂದನೆಯಿಂದ ಬೇಸತ್ತು ಪವನ್ ಈ ಕಠಿಣ ನಿರ್ಧಾರ ಕೈಗೊಂಡಿದ್ದಾನೆ ಎಂದು ಕುಟುಂಬದ ಸದಸ್ಯರು ಆರೋಪ ಮಾಡಿದ್ದಾರೆ. ಘಟನೆಯ ನಂತರ ಶಾಲಾ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಬಾಲಕನ ಸಾವಿನ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕ ಅಯ್ಯಪ್ಪ ಸೇರಿದಂತೆ ಒಟ್ಟು 6 ಜನ ಶಿಕ್ಷಕರ ವಿರುದ್ಧ ವಡಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪವನ್ ತಾಯಿಯ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಲಾ ಆವರಣದಲ್ಲೇ ಇಂತಹ ಘಟನೆ ನಡೆದಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.

 

Sulekha