ತಿಮ್ಮಪ್ಪನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ದುರಂತ – ಕರಡಿ ದಾಳಿಯಿಂದ 6 ವರ್ಷದ ಬಾಲಕಿ ಸಾವು

ತಿಮ್ಮಪ್ಪನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ದುರಂತ – ಕರಡಿ ದಾಳಿಯಿಂದ 6 ವರ್ಷದ ಬಾಲಕಿ ಸಾವು

ಅವರು ಬಂದಿದ್ದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ. ಆದರೆ, ಅವರಿಗೆ ತಿಮ್ಮಪ್ಪನ ಆಶೀರ್ವಾದ ಸಿಗುವ ಬದಲು ಸಿಕ್ಕಿದ್ದು ಜೀವನಪೂರ್ತಿ ಮಗಳ ಅಗಲಿಕೆಯ ಶೋಕ. ತಿಮ್ಮಪ್ಪಾ ಕಾಪಾಡಪ್ಪಾ ಅಂದುಕೊಂಡು ತಿರುಪತಿ ಜಿಲ್ಲೆಯ ಶಶಿಕಲಾ ಕುಟುಂಬ ಶುಕ್ರವಾರ ರಾತ್ರಿ ದೇವರ ದರ್ಶನಕ್ಕೆ ಬಂದಿದ್ದರು. ಅಲಿಪಿರಿ ವಾಕ್ವೇಯಲ್ಲಿ ನಡೆದುಕೊಂಡು ಹೋಗುವಾಗ ಶಶಿಕಲಾ ಅವರ ಮಗಳು ದಿಢೀರ್ ನಾಪತ್ತೆಯಾಗಿದ್ದಾಳೆ. ನಂತರ ಮಗಳು ಸಿಕ್ಕಿದ್ದು ಶವವಾಗಿ.

ಇದನ್ನೂ ಓದಿ: ಕರೆಂಟ್ ಶಾಕ್ ರೂಪದಲ್ಲಿ ಹೊಂಚಾಕಿತ್ತು ವಿಧಿ – ಮೊಮ್ಮಗಳ ರಕ್ಷಣೆಗೆ ಹೋದ ಅಜ್ಜಿ, ತಾತನೂ ಬಲಿ

ತೆಳ್ಳಾರಿ ನಡಿಗೆದಾರಿಯಲ್ಲಿ ತೆರಳುತ್ತಿದ್ದ ಭಕ್ತರಿಗೆ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಮಗುವಿನ ಮೃತ ದೇಹವೊಂದು ಸಿಕ್ಕಿತ್ತು. ಮಗುವಿನ ತಲೆ ಮತ್ತು ದೇಹದ ಮೇಲೆ ಗಂಭೀರ ಗಾಯಗಳಾಗಿತ್ತು. ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಕೂಡ ಈ ಮಗು ಶಶಿಕಲಾ ಅವರ ಮಗುವೆಂದು ಗುರುತಿಸಿದ್ದರು. ಆರಂಭದಲ್ಲಿ ಇದು ಚಿರತೆಯ ದಾಳಿ ಎಂದು ಭಾವಿಸಿದ್ದರು. ಚಿರತೆ ದಾಳಿ ಮಾಡಿದ್ದರೆ ದೇಹವನ್ನು ಕಿತ್ತು ತಿನ್ನುತ್ತಿತ್ತು. ಆದರೆ ಇದೀಗ ಮಗುವಿನ ತಲೆ ಮತ್ತು ದೇಹದ ಮೇಲೆ ಕೆಲವೇ ಗಾಯಗಳಾಗಿದ್ದು, ಇದು ಕರಡಿ ದಾಳಿಯಿರಬಹುದು ಎನ್ನುತ್ತಿದ್ದಾರೆ ಅಧಿಕಾರಿಗಳು.

ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ಆರು ವರ್ಷದ ಬಾಲಕಿ ಕರಡಿ ದಾಳಿಯಿಂದ ಮೃತಪಟ್ಟಿದ್ದಾಳೆ ಎಂಬ ವಿಚಾರ ನಿಜಕ್ಕೂ ಮನಕಲಕುವಂತದ್ದು. ಅಧಿಕಾರಿಗಳು ಕೂಡಾ ಕರಡಿ ದಾಳಿಯಿಂದ ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾರೆ. ಬಾಲಕಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದಾಗ ಕರಡಿ ಮಗುವನ್ನು ತೆಗೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ ಎಂದು ಟಿಟಿಡಿ ಡಿಎಫ್ಒ ಶ್ರೀನಿವಾಸುಲು ಹೇಳಿದರು. ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳ ಮೂಲಕ ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಟಿಟಿಡಿ ಡಿಎಫ್ಒ ಶ್ರೀನಿವಾಸುಲು ಹೇಳಿದ್ದಾರೆ. ತಿರುಪತಿಯ ರುಯಾ ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷೆಯ ವರದಿ ಬರುವವರೆಗೂ ನಮಗೆ ಸಂಪೂರ್ಣವಾಗಿ ದೃಢೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

suddiyaana