ವಿಜಯನಗರದಲ್ಲಿ ಪತ್ತೆಯಾಯ್ತು ಬರೋಬ್ಬರಿ 3,000 ವರ್ಷ ಹಳೆಯ ಆದಿಮಾನವರ ಕೆತ್ತನೆ!

ವಿಜಯನಗರದಲ್ಲಿ ಪತ್ತೆಯಾಯ್ತು ಬರೋಬ್ಬರಿ 3,000 ವರ್ಷ ಹಳೆಯ ಆದಿಮಾನವರ ಕೆತ್ತನೆ!

ಬಳ್ಳಾರಿ: ವಿಜಯನಗರ ಸಾಮ್ರಾಜ್ಯದ ಅರಸರು ಸಾವಿರಾರು ವರ್ಷಗಳ ಕಾಲ ಹಂಪಿಯಲ್ಲಿ ಆಡಳಿತ ನಡೆಸಿದ್ದಾರೆ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಇದೀಗ ಈ ಉಲ್ಲೇಖಗಳಿಗೆ ಪುಷ್ಟಿ ನೀಡುವಂತಹ ಕುರುಹುಗಳು ವಿಜಯನಗರ ಜಿಲ್ಲೆಯಲ್ಲಿ ಪತ್ತೆಯಾಗಿವೆ.

ಕ್ರಿ.ಪೂ. 3,000 ವರ್ಷಗಳ ಹಿಂದೆ ಆದಿಮಾನವರು ಕೆತ್ತಿರುವ ಕೆತ್ತನೆಗಳು ಪತ್ತೆಯಾಗಿದೆ. ಹಂಪಿಯಿಂದ 12 ಕಿ.ಮೀ. ದೂರದ ಹೊಸಪೇಟೆ-ಬಳ್ಳಾರಿ ಹೆದ್ದಾರಿಯ ಪಾಪಿನಾಯಕನಹಳ್ಳಿಯ ಕರಿಕಲ್ಲು ಗುಡ್ಡದಲ್ಲಿ ಆದಿಮಾನವರು ಒಂದೇ ಕಡೆ ಗುಂಪಾಗಿ ನೆಲೆಸಿರುವ ಕುರುಹುಗಳು ಪತ್ತೆಯಾಗಿದೆ. ಬಂಡೆಗಳಲ್ಲಿನ ಕುಟ್ಟು ರೇಖಾಚಿತ್ರಗಳು ಕ್ರಿ.ಪೂ. 3,000 ವರ್ಷಗಳ ಮಾನವ ಜೀವನದ ಶೈಲಿಯ ಮೇಲೆ ಬೆಳಕು ಚೆಲ್ಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ನೀರು ಕುಡಿದ ನಂತರ ಯಾರ ಸಹಾಯವೂ ಇಲ್ಲದೇ ನಲ್ಲಿ ಬಂದ್‌ ಮಾಡುತ್ತೆ ಈ ಶ್ವಾನ!

ಗ್ರಾಮದ ಅಂಕಾಲಮ್ಮ ದೇಗುಲದ ಹಿಂಭಾಗದಲ್ಲಿ ಈ ಕರಿಕಲ್ಲು ಗುಡ್ಡ ಇದ್ದು, ಶಿಲಾಯುಗದ ಕುರುಹುಗಳ ಕುರಿತು ಅಧ್ಯಯನ ನಡೆಸುತ್ತಿರುವ ‘ವಿಜಯನಗರ ತಿರುಗಾಟ ಸಂಶೋಧನಾ ತಂಡ’ ಈ ಮಹತ್ವದ ಶೋಧನೆ ನಡೆಸಿದೆ. ಈ ಗುಡ್ಡದ ಬುಡದಿಂದ ತುದಿಯವರೆಗೆ 150ಕ್ಕೂ ಅಧಿಕ ಕುಟ್ಟು ರೇಖಾಚಿತ್ರಗಳನ್ನು ಪತ್ತೆಹಚ್ಚಿದೆ.

ಹಸು, ಜಿಂಕೆ, ಗೂಳಿ, ನಾಯಿ, ಹಂದಿ ಚಿತ್ರಗಳಲ್ಲದೆ, ಪ್ರಾಣಿಗಳ ಮೇಲೆ ಕುಳಿತುಕೊಂಡು, ಕೈಯಲ್ಲಿ ಬಿಲ್ಲು ಹಿಡಿದ ಮನುಷ್ಯ ಬೇಟೆಯಾಡುವ ಚಿತ್ರ, ಇಬ್ಬರು ಮನುಷ್ಯರು ನೃತ್ಯ ಮಾಡುವ ಚಿತ್ರ, ದೀರ್ಘ ಕೊಂಬಿನ ಹಸುವಿನ ಕುಟ್ಟು ಚಿತ್ರಗಳು ಪತ್ತೆಯಾಗಿವೆ ಎಂದು ಸಂಶೋಧನಾ ತಂಡ ಸದಸ್ಯರು ಮಾಹಿತಿ ನೀಡಿದ್ದಾರೆ.

Shwetha M