100 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಬಾಲಕಿ – 50 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕವೂ ಉಳಿಯಲಿಲ್ಲ ಪ್ರಾಣ

100 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಬಾಲಕಿ – 50 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕವೂ ಉಳಿಯಲಿಲ್ಲ ಪ್ರಾಣ

ಹೆತ್ತವರು ಹರಕೆ ಹೊತ್ತಿದ್ದರು. ಗ್ರಾಮಸ್ಥರೆಲ್ಲಾ ಪ್ರಾರ್ಥನೆ ಮಾಡಿದ್ರು. ರಕ್ಷಣಾ ಸಿಬ್ಬಂದಿ ಹಗಲಿರುಳೆನ್ನದೆ ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ಪ್ರಾರ್ಥನೆ ಫಲಿಸಲಿಲ್ಲ. ಬೇಡಿಕೆ ಈಡೇರಲಿಲ್ಲ. ಕೊಳವೆ ಬಾವಿಗೆ ಬಿದ್ದಿದ್ದ ಬಾಲಕಿ ಬದುಕಿ ಬರಲೇಇಲ್ಲ.

ಬರೋಬ್ಬರಿ 100 ಅಡಿ ಆಳದ ಬೋರ್‌ವೆಲ್‌ಗೆ (Borewell) ಬಿದ್ದು ರಕ್ಷಿಸಲ್ಪಟ್ಟಿದ್ದ ಎರಡೂವರೆ ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಮಧ್ಯಪ್ರದೇಶದ (Madhya Pradesh) ಸೆಹೋರ್‌ನಲ್ಲಿ ಇಂಥಾದ್ದೊಂದು ದಾರುಣ ಘಟನೆ ನಡೆದಿದೆ. ಸುಮಾರು 50 ಗಂಟೆಗಳ ಕಾಲ ಬೋರ್‌ವೆಲ್‌ನಲ್ಲಿ ಸಿಲುಕಿದ್ದ ಬಾಲಕಿಯನ್ನು ಅಧಿಕಾರಿಗಳು ನಿರಂತರವಾಗಿ ಕಾರ್ಯಾಚರಣೆ ಮಾಡಿ (Rescue Operation) ರಕ್ಷಿಸಿದ್ದರು. ಎರಡು ದಿನಕ್ಕೂ ಹೆಚ್ಚು ಕಾಲ ನಡೆದ ಬಾಲಕಿಯ ರಕ್ಷಣಾ ಕಾರ್ಯಾಚರಣೆಯಲ್ಲಿ ರೊಬೊಟಿಕ್ ತಂಡ, ಭಾರತೀಯ ಸೇನೆ, NDRF, SDERF ಸಿಬ್ಬಂದಿ ಸೇರಿದಂತೆ ನೂರಾರು ಮಂದಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಾಲಕಿ 300 ಅಡಿ ಬೋರ್‌ವೆಲ್‌ಗೆ ಬಿದ್ದು 40ರಿಂದ 100 ಅಡಿ ಆಳಕ್ಕೆ ಜಾರಿದ್ದಳು. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಯಂತ್ರಗಳಿಂದ ಉಂಟಾದ ಕಂಪನಗಳಿಗೆ ಅವಳು ಮತ್ತಷ್ಟು ಕೆಳಕ್ಕೆ ಹೋಗಿದ್ದಾಳೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದರು.

ಇದನ್ನೂ ಓದಿ : ದಂಡ ಹಾಕಿದ್ದೂ ಸಾರ್ಥಕ ಆಯ್ತು – ಕೆಎಸ್ಆರ್‌ಟಿಸಿಗೆ ಹರಿದು ಬಂತು ಲಕ್ಷ ಲಕ್ಷ ಆದಾಯ..!

ಕೊನೆಗೂ 50 ಗಂಟೆಗಳ ಬಳಿಕ ಬಾಲಕಿಯನ್ನು ಮೇಲೆತ್ತಲಾಗಿತ್ತಾದ್ರೂ ಆಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೆಹೋರ್ ಜಿಲ್ಲಾಧಿಕಾರಿ, ಎಲ್ಲ ಪ್ರಯತ್ನಗಳ ಹೊರತಾಗಿಯೂ, ನಾವು ಹುಡುಗಿಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಇಬ್ಬರು ವೈದ್ಯರ ತಂಡವು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ದೇಹವು ಕೊಳೆತ ಸ್ಥಿತಿಯಲ್ಲಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಆಕೆಯ ಸಾವಿಗೆ ಉಸಿರುಗಟ್ಟುವಿಕೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಬಾಲಕಿಯ ಸಾವಿಗೆ ಕಾರಣವಾದ ಬೋರ್‌ವೆಲ್‌ ಇದ್ದ ಜಮೀನಿನ ಮಾಲೀಕ ಮತ್ತು ಬೋರ್‌ವೆಲ್‌ಗೆ ಕೊರೆದ ಮಾಯಕ್ ಅವಸ್ತಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನು ಕಾರ್ಯಾಚರಣೆಯ ವೇಳೆ ಬಾಲಕಿಗೆ ಪೈಪ್‌ ಮೂಲಕ ಆಕ್ಸಿಜನ್ ಪೂರೈಕೆ ಮಾಡಲಾಗಿತ್ತಾದರೂ, ಮಳೆ ಗಾಳಿಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿತ್ತು. ಕೊನೆಗೆ ಬಾಲಕಿಯನ್ನು ಮೇಲಕ್ಕೆ ಎತ್ತಲಾಯಿತಾದರೂ ಆಕೆಯನ್ನು ಉಳಿಸಲು ಸಾಧ್ಯವಾಗಿಲ್ಲ.

suddiyaana