ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಕಿಚ್ಚನಿಗೆ ಬ್ಲ್ಯಾಕ್ ಮೇಲ್ – ಪತ್ರ ಬರೆದವನ ಸುಳಿವು ಸಿಕ್ಕಿದ್ದೇಗೆ?

ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಕಿಚ್ಚನಿಗೆ ಬ್ಲ್ಯಾಕ್ ಮೇಲ್ – ಪತ್ರ ಬರೆದವನ ಸುಳಿವು ಸಿಕ್ಕಿದ್ದೇಗೆ?

ರಾಜಕೀಯ ಸೇರ್ಪಡೆ, ಚುನಾವಣೆಯಲ್ಲಿ ಪ್ರಚಾರ, ಸಿಎಂ ಬಸವರಾಜ ಬೊಮ್ಮಾಯಿಗೆ ಬೆಂಬಲ. ಹೀಗೆ ಸಾಲು ಸಾಲು ಸುದ್ದಿಗಳಿಂದ ಸ್ಯಾಂಡಲ್ ವುಡ್ ಬಾದ್ ಶಾ ಕಿಚ್ಚ ಸುದೀಪ್ ಸದ್ದು ಮಾಡುತ್ತಿದ್ದಾರೆ. ಇದರ ನಡುವೆಯೇ ಸುದೀಪ್​ ಗೆ ಬರೆದಿದ್ದ ಖಾಸಗಿ ವಿಡಿಯೋ ಲೀಕ್ ಬೆದರಿಕೆ ಪತ್ರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಲೆಟರ್ ಬರೆದಿದ್ದು ಯಾರು ಅನ್ನೋ ಬಗ್ಗೆ ಅಧಿಕಾರಿಗಳಿಗೆ ಸುಳಿವು ಸಿಕ್ಕಿದೆ ಎನ್ನಲಾಗಿದೆ.

ಕನ್ನಡದ ಹೆಸರಾಂತ ನಟ ಕಿಚ್ಚ ಸುದೀಪ್‌ ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ಘೋಷಿಸುವ ಮುನ್ನವೇ ಅವರ ಮನೆಗೆ ಬೆದರಿಕೆ ಪತ್ರ ಬಂದಿತ್ತು. ಈ ಸಂಬಂಧ ಸಿಸಿಬಿ ದೂರು ದಾಖಲಿಸಿಕೊಂಡಿದ್ದು, ಕಿಚ್ಚನ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಪತ್ರ ಬರೆದವರು ಯಾರು ಅಂತ ಗೊತ್ತು ಎಂದು ನಟ ಸುದೀಪ್‌ ಬುಧವಾರ ಹೇಳಿಕೆ ನೀಡಿದ್ದರು. ಬೆದರಿಕೆ ಪತ್ರಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ. ಈ ಬ್ಲ್ಯಾಕ್ ಮೇಲ್ ಹಿಂದೆ ಇರೋದು ಚಿತ್ರರಂಗದವರೇ ಎಂದಿದ್ರು. ಇನ್ನು, ನಟನ ಮಾಜಿ ಡ್ರೈವರ್‌ ಜೊತೆ ಸೇರಿ ವಿರೋಧಿಗಳು ಷಡ್ಯಂತ್ರ ರೂಪಿಸಿದ್ರಾ ಅನ್ನೋ ಅನುಮಾನ ಇದ್ದು, ಈ ಹಿನ್ನೆಲೆ ಕಿಚ್ಚನ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : ‘ಸಿಎಂ ನಟರಿಗೆ ಶರಣು, ನನ್ನ ಪಕ್ಷಕ್ಕೆ ನಾನೇ ಸ್ಟಾರ್’! – ಸುದೀಪ್ ಬಿಜೆಪಿ ಬೆಂಬಲಕ್ಕೆ ‘ಕೈ, ದಳ’ ವ್ಯಂಗ್ಯ

ಬೆದರಿಕೆ ಪತ್ರ ಸಂಬಂಧ ಸುದೀಪ್​ ಮ್ಯಾನೇಜರ್​ ಜಾಕ್​ ಮಂಜು ಅವರು ಪುಟ್ಟೇನಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದರ ಬೆನ್ನಲ್ಲೇ ಬೆದರಿಕೆ ಪತ್ರ ಪ್ರಕರಣವನ್ನು ಪೊಲೀಸ್​ ಆಯುಕ್ತ ಪ್ರತಾಪ್​ ರೆಡ್ಡಿ ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಸುದೀಪ್ ಅವರಿಗೆ ಬಂದಿರುವ ಬೆದರಿಕೆ ಪತ್ರದಲ್ಲಿ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿರುವ ವ್ಯಕ್ತಿಗಳು, ಖಾಸಗಿ ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ನಿನ್ನೆಯಷ್ಟೇ ಸುದೀಪ್ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆಂಬ ಸುದ್ದಿ ಸಂಚಲನ ಮೂಡಿಸಿತ್ತು. ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸುದೀಪ್ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದರು. ಚಿತ್ರರಂಗದಲ್ಲಿ ಎಲ್ಲಾ ಉದ್ಯಮದಂತೆ ಒಳ್ಳೆಯವರು, ಕೆಟ್ಟವರು, ನಮಗೆ ಬೇಕಾದವರು, ಆಗದವರು ಇದ್ದಾರೆ. ನನ್ನ ಮನೆಯ ವಿಳಾಸ ಗೊತ್ತಿದೆ, ಹೀಗಾಗಿ ಬೆದರಿಕೆ ಪತ್ರ ಕಳುಹಿಸಿದ್ದಾರೆ. ಇದು ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎಂದು ಗೊತ್ತಿದೆ. ಕ್ರಮ ತೆಗೆದುಕೊಳ್ಳಲು ದೂರು ನೀಡಿದ್ದೇವೆ, ಇಂತಹ ಬೆದರಿಕೆಗಳಿಗೆಲ್ಲ ಹೆದರುವವನು ನಾನಲ್ಲ ಎಂದು ಹೇಳಿದ್ದರು.

suddiyaana