ತುಪ್ಪಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ – ಪೂರೈಕೆ ಹೆಚ್ಚಿಸುವಂತೆ ಕೆಎಂಎಫ್ ಗೆ ದುಂಬಾಲು!
ಬೆಳಗ್ಗೆದ್ದು ಟಿಫನ್ ಮಾಡಿದ್ರೂ ತುಪ್ಪ ಬೇಕು. ಸ್ವೀಟ್ ತಯಾರಿಸಿದ್ರೂ ತುಪ್ಪ ಹಾಕಲೇಬೇಕು. ಮಕ್ಕಳು ಊಟ ಮಾಡಲಿ ಅಂತಾ ಆಸೆ ತೋರಿಸೋಕೂ ತುಪ್ಪ ಇರಲೇಬೇಕು. ಅಷ್ಟೇ ಯಾಕೆ ಬೇಡಿದ್ದನ್ನ ಕರುಣಿಸಪ್ಪಾ ಅಂತಾ ದೇವರಿಗೆ ವಿಶೇಷ ಹರಕೆ ಹೊತ್ತು ದೀಪ ಹಚ್ಚೋಕೂ ತುಪ್ಪನೇ ಬೇಕು. ಅರೆ ತುಪ್ಪದ ಬಗ್ಗೆ ಯಾಕಿಷ್ಟು ಬರೆದಿದ್ದಾರೆ ಅಂತಾ ಯೋಚನೆ ಮಾಡುತ್ತಿದ್ದೀರಾ. ಅದಕ್ಕೆ ಕಾರಣನೂ ಮುಂದೆ ಇದೆ ಓದಿ.
ಇದನ್ನೂ ಓದಿ : ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ಹಿಂದಿ ಪದ – ಕೇಂದ್ರದ ‘ದಹಿ’ ವಿರುದ್ದ ಸಿಡಿದೆದ್ದ ಹೆಚ್ ಡಿಕೆ
ದಿನ ಬೆಳಗಾದ್ರೆ ಹಾಲು ಮತ್ತು ಮೊಸರು ಹೇಗೆ ಬೇಕೋ ಹಾಗೇ ತಿಂಡಿ, ಸ್ವೀಟ್ಸ್ ಅಂತಾ ತುಪ್ಪ ಬಳಸೋರ ಪ್ರಮಾಣ ಕೂಡ ಹೆಚ್ಚಾಗಿದೆ. ಆದರೆ ಇನ್ಮುಂದೆ ತುಪ್ಪವನ್ನ ನೋಡಿ ಬಳಸಬೇಕಾಗುತ್ತೆ. ಯಾಕಂದ್ರೆ ತುಪ್ಪದ ದರ ಗಗನಕ್ಕೇರಿದೆ. ಹೌದು ರಾಜ್ಯದಲ್ಲೀಗ ತುಪ್ಪಕ್ಕೆ (Ghee) ಹಾಹಾಕರ ಉಂಟಾಗಿದೆ. ಬೇಡಿಕೆ ಹೆಚ್ಚಳವಾಗಿರುವ ಹಿನ್ನೆಲೆ ತುಪ್ಪ (KMF Ghee Demand) ಪೂರೈಸಲು ಕೆಎಂಎಫ್ ಹರಸಾಹಸ ಪಡುತ್ತಿದೆ. ಮಾರುಕಟ್ಟೆಯಲ್ಲಿ ಶೇಕಡಾ 75ರಷ್ಟು ಮಂದಿ ನಂದಿನಿ ತುಪ್ಪವನ್ನ ಖರೀದಿಸುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ದಾಖಲೆ ಪ್ರಮಾಣದಲ್ಲಿ ತುಪ್ಪದ ಬೇಡಿಕೆ ಹೆಚ್ಚಾಗಿದೆ. ಪ್ರತೀ ವರ್ಷ 5 ರಿಂದ 6 ಶೇಕಡಾ ತುಪ್ಪದ ಬೇಡಿಕೆ ಹೆಚ್ಚುತ್ತಿತ್ತು. ಆದ್ರೆ ಈ ಬಾರಿ ತುಪ್ಪಕ್ಕೆ 33% ಬೇಡಿಕೆ ಹೆಚ್ಚಳವಾಗಿದೆ.
ಇತ್ತೀಚಿನ ದಿನಗಳಲ್ಲಿ ತುಪ್ಪ ಸಿಗದೇ ಹೋಟೆಲ್ ಮತ್ತು ಸ್ವೀಟ್ ಅಂಗಡಿ (Hotel And Sweet Shops) ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ತುಪ್ಪದ ಕೊರತೆ ಉಂಟಾಗಿ ತುಪ್ಪದ ಪದಾರ್ಥ ತಯಾರು ಮಾಡುವುದನ್ನ ಹಲವು ಹೋಟೆಲ್ ಮತ್ತು ಸ್ವೀಟ್ ಅಂಗಡಿ ಮಾಲೀಕರು ನಿಲ್ಲಿಸಿದ್ದಾರೆ ಎನ್ನಲಾಗಿದೆ. ಕಳೆದ ಮೂರು ತಿಂಗಳಿನಿಂದ ಮಾರುಕಟ್ಟೆಯಲ್ಲಿ ತುಪ್ಪದ ಕೊರತೆ ಉಂಟಾಗಿದೆ. ಹೋಟೆಲ್ ಮತ್ತು ಸ್ವೀಟ್ ಅಂಗಡಿ ಮಾಲೀಕರು ಅನೇಕ ಬಾರಿ ತುಪ್ಪದ ಪೂರೈಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ತುಪ್ಪದ ಕೊರತೆ ಉಂಟಾಗಿದ್ದೇಕೆ?
*ಹಾಲು ಉತ್ಪಾದನೆ ಕಡಿಮೆಯಾದ ಹಿನ್ನೆಲೆ ತುಪ್ಪ ಉತ್ಪಾದನೆಗೆ ಪೆಟ್ಟು
*ನಂದಿನಿ ತುಪ್ಪದ ದರ ಕಡಿಮೆ, ಹೀಗಾಗಿ ಬೇರೆ ರಾಜ್ಯಗಳಿಂದಲೂ ಬೇಡಿಕೆ
*ನಂದಿನಿ ತುಪ್ಪಕ್ಕೆ ಈ ಬಾರಿ ಮಿತಿ ಮೀರಿದ ಬೇಡಿಕೆ
*ದೇಶದಲ್ಲೇ ಅತೀ ಕಡಿಮೆ ಬೆಲೆಗೆ ಮಾರಾಟವಾಗೋ ಎರಡನೇ ಸ್ಥಾನದಲ್ಲಿರುವ ನಂದಿನಿ ತುಪ್ಪ
*ಮಾಮೂಲಿಗಿಂತ ಶೇಕಡಾ 33% ಹೆಚ್ಚಿದ ಬೇಡಿಕೆ
ಕರ್ನಾಟಕದಲ್ಲಿ ಹಾಲು, ಮೊಸರು, ತುಪ್ಪ ಯಾವುದೇ ಖರೀದಿ ಮಾಡಬೇಕಾದ್ರೂ ನಂದಿನಿ ಉತ್ಪನ್ನವೇ ಬೇಕು. ಉತ್ತಮ ಗುಣಮಟ್ಟ ಸಿಗುತ್ತೆ ಅನ್ನೋ ಕಾರಣಕ್ಕೆ ಎಲ್ಲರೂ ನಂದಿನಿ ಹಾಲು, ಮೊಸರು ಬಳಸುತ್ತಾರೆ. ಆದರೆ ಇತ್ತೀಚೆಗೆ ನಂದಿನಿ ಮೊಸರಿನ ಪ್ಯಾಕೆಟ್ ಕಂಡು ಕನ್ನಡಿಗರು ಕೆಂಡವಾಗಿದ್ದರು. ಹಾಗಂತ ಗುಣಮಟ್ಟದ ಕೊರತೆ ಏನೂ ಇರಲಿಲ್ಲ. ಅಸಲಿಗೆ ಸಿಟ್ಟಿಗೆ ಕಾರಣವಾಗಿದ್ದು ದಹಿ ಪದ. ಹೌದು ನಂದಿನಿ ಮೊಸರಿನ ಪ್ಯಾಕೇಟ್ ಮೇಲೆ ಹಿಂದಿಯ ದಹಿ ಅನ್ನುವ ಪದ ಮುದ್ರಣವಾಗುತ್ತಿತ್ತು. ಕರುನಾಡಿನ ಜನರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ ದಹಿ ಮುದ್ರಣವನ್ನು ಹಿಂಪಡೆದುಕೊಂಡಿದೆ.