ರೈಲಿನಲ್ಲಿ ಮೂವರ ಸಾವಿಗೆ ಕಾರಣನಾದವನ ಬಂಧನ

ರೈಲಿನಲ್ಲಿ ಮೂವರ ಸಾವಿಗೆ ಕಾರಣನಾದವನ ಬಂಧನ

ತಿರುವನಂತಪುರಂ: ಚಲಿಸುತ್ತಿದ್ದ ರೈಲಿನಲ್ಲಿ ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಸಹ ಪ್ರಯಾಣಿಕನೊಂದಿಗೆ ಜಗಳವಾಡಿ ಆತನಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ರಾತ್ರಿ ಚಲಿಸುತ್ತಿದ್ದ ರೈಲಿನಲ್ಲಿ ವ್ಯಕ್ತಿಯೊಬ್ಬ ಸಹ ಪ್ರಯಾಣಿಕನೊಂದಿಗೆ ಜಗಳವಾಡಿ, ಬಳಿಕ ಆತನಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರು. 9 ಮಂದಿ ಗಾಯಗೊಂಡಿದ್ದರು. ಇದೀಗ ಕೇಂದ್ರ ಗುಪ್ತಚರ ಮತ್ತು ಭಯೋತ್ಪಾದನಾ ನಿಗ್ರಹ ಅಧಿಕಾರಿಗಳ ತಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರುಖ್ ಎಂಬುವವನನ್ನು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಬಂಧಿಸಿದೆ.

ಇದನ್ನೂ ಓದಿ: ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ವ್ಯಕ್ತಿ – ಮೂವರು ಸಾವು, 9 ಮಂದಿಗೆ ಗಾಯ

ಈಗಾಗಲೇ ಕೇರಳ ಪೊಲೀಸರ ತಂಡ ರತ್ನಗಿರಿ ತಲುಪಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಅವರಿಗೆ ಹಸ್ತಾಂತರಿಸಲಾಗುವುದು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತ ಆರೋಪಿ ದಾಳಿಯ ಹಿಂದಿನ ಉದ್ದೇಶವೇನು ಅಂತಾ ತಿಳಿಸಿಲ್ಲ. ಆದರೆ ಕೋಳಿಕ್ಕೋಡ್ ಜಿಲ್ಲೆಯ ಎಲತ್ತೂರ್ ಬಳಿ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ವಾದದ ನಂತರ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿರುವುದಾಗಿ ಒಪ್ಪಿಕೊಂಡಿದ್ದಾನೆ ಅಂತಾ ಅಧಿಕಾರಿ ತಿಳಿಸಿದ್ದಾರೆ.

ಭಾನುವಾರ ರಾತ್ರಿ 9:30ರ ಸುಮಾರಿಗೆ ಕೇರಳದ  ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿನ ಡಿ1 ಕಂಪಾರ್ಟ್‌ಮೆಂಟ್‌ನೊಳಗೆ ಪ್ರಯಾಣಿಕರೊಬ್ಬನ ಮೇಲೆ ಶಾರುಖ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಈ ವೇಳೆ ಮೂವರು ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದರು. ಇವರಲ್ಲಿ ಐವರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಮತ್ತು ಮೂವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಭಾರತದಲ್ಲಿ ಭಯೋತ್ಪಾದನೆ ಸಂಬಂಧಿತ ಪ್ರಕರಣಗಳ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಕಣ್ಣೂರು ನಿಲ್ದಾಣದಲ್ಲಿ ರೈಲು ಕೋಚ್‌ಗಳನ್ನು ಪರೀಕ್ಷಿಸಿ ವಿಧಿವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಪ್ರಕರಣದ ತನಿಖೆಗಾಗಿ ಕೇರಳ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು ಮತ್ತು ಶಂಕಿತನ ಬಗ್ಗೆ ಸುಳಿವು ನೀಡಿದವರಿಗೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು.

suddiyaana