ಸ್ವಂತ ಮನೆಯಿಲ್ಲ ಎಂದ ‘ರಾಗಾ’ಗೆ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿ ಎಂದ ಅರ್ಚಕ!

ಲಕ್ನೋ: ತನಗೆ ಸ್ವಂತ ಮನೆಯಿಲ್ಲ ಅಂತಾ ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅಯೋಧ್ಯೆಯ ದೇವಸ್ಥಾನದ ಆವರಣದಲ್ಲಿ ವಾಸ್ತವ್ಯ ಹೂಡಿ ಅಂತಾ ಹನುಮಾನ್ಗರ್ಹಿ ದೇವಸ್ಥಾನದ ಅರ್ಚಕ ಮಹಂತ್ ಸಂಜಯ್ ದಾಸ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅರ್ಚಕ ಮಹಂತ್ ಸಂಜಯ್ ದಾಸ್, ನಾವು ರಾಹುಲ್ ಗಾಂಧಿಯನ್ನು ಹನುಮಾನ್ಗರ್ಹಿ ಮತ್ತು ಅಯೋಧ್ಯೆಗೆ ಸ್ವಾಗತಿಸುತ್ತೇವೆ. ಅವರಿಗೆ ಹನುಮಾನ್ಗರ್ಹಿ ದೇಗುಲದಲ್ಲಿ ತಂಗಲು ಅವಕಾಶ ನೀಡುತ್ತೇವೆ. ಅವರು ಇಲ್ಲಿಗೆ ಬಂದರೆ ನಾವು ಅವರಿಗೆ ನಮ್ಮ ಸ್ಥಾನವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಸರ್ನೇಮ್ ಹೇಳಿಕೆ ವಿವಾದ – ಏಪ್ರಿಲ್ 13 ರವರೆಗೂ ರಾಹುಲ್ ಗಾಂಧಿಗೆ ರಿಲೀಫ್
2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ, ಕಳ್ಳರೆಲ್ಲಾ ಮೋದಿ ಎಂಬ ಹೆಸರನ್ನೇ ಏಕೆ ಇಟ್ಟುಕೊಂಡಿರುತ್ತಾರೆ ಎಂದು ವ್ಯಂಗ್ಯವಾಡಿದ್ದರು. ಈ ಹೇಳಿಕೆ ವಿರುದ್ಧ ಗುಜರಾತ್ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನು ಆಧರಿಸಿ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಅಷ್ಟೇ ಅಲ್ಲದೇ ಒಂದು ತಿಂಗಳೊಳಗೆ ದೆಹಲಿಯಲ್ಲಿರುವ ತುಘಲಕ್ ಲೇನ್ ಬಂಗಲೆ ತೊರೆಯುವಂತೆ ಲೋಕಸಭಾ ವಸತಿ ಸಮಿತಿ ನೋಟಿಸ್ ನೀಡಿದೆ. ಮನೆ ಖಾಲಿ ಮಾಡುವುದಾಗಿ ರಾಹುಲ್ ಗಾಂಧಿ ಸಹ ಪ್ರತಿಕ್ರಿಯೆ ನೀಡಿದ್ದಾರೆ.