2 ಕ್ಷೇತ್ರಗಳ ಟಿಕೆಟ್ ಗೆ ಪರಮೇಶ್ವರ್ ಪಟ್ಟು – ಸಿದ್ದುಗೆ ಕೋಲಾರ ಟಿಕೆಟ್ ನೀಡದಂತೆ ಹೈಕಮಾಂಡ್ ಗೆ ಪತ್ರ!
ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದರಾ ‘ಕೈ’ ನಾಯಕರು?
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ಈಗಾಗಲೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ರಿಲೀಸ್ ಮಾಡಿದೆ. 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡಿದೆ. ಇನ್ನೂ 100 ಕ್ಷೇತ್ರಗಳ ಟಿಕೆಟ್ ಹಂಚಿಕೆ ವಿಚಾರ ಕಗ್ಗಂಟಾಗಿದ್ದು ಸಭೆ ಮೇಲೆ ಸಭೆ ನಡೆಸಲಾಗುತ್ತಿದೆ. ಈಗಾಗಲೇ ವರುಣಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಸಿದ್ದರಾಮಯ್ಯ ಕೋಲಾರದಿಂದ ಟಿಕೆಟ್ ಕೊಟ್ಟರೆ ಅಲ್ಲಿಯೂ ಸ್ಪರ್ಧೆ ಮಾಡುವುದಾಗಿ ಹೇಳುತ್ತಿದ್ದಾರೆ. ಸಿದ್ದರಾಮಯ್ಯರ ಇದೇ ನಡೆಗೆ ಕಾಂಗ್ರೆಸ್ ನ ಇತರೆ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯಗೆ 2 ಕ್ಷೇತ್ರಗಳಲ್ಲಿ ಟಿಕೆಟ್ ನೀಡದಂತೆ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿದ್ದಾರೆ. ಮತ್ತೊಂದೆಡೆ ಡಾ.ಜಿ ಪರಮೇಶ್ವರ್ ಕೂಡ ನನಗೂ 2 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ವಿಪಕ್ಷನಾಯಕ ಸಿದ್ದರಾಮಯ್ಯಗೆ ಈಗಾಗಲೇ ವರುಣಾ ಕ್ಷೇತ್ರದ ಟಿಕೆಟ್ ನೀಡಿದ್ದು ಇದರ ಜೊತೆಗೆ ಕೋಲಾರದ ಟಿಕೆಟ್ ಕೂಡ ನೀಡಿದ್ರೆ ತಪ್ಪು ಸಂದೇಶ ಹೋಗುತ್ತೆ. ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ವಂಚನೆ ಮಾಡಿದಂತೆ ಆಗುತ್ತದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಡಾ. ಜಿ ಪರಮೇಶ್ವರ್ ಸೇರಿದಂತೆ ಉಳಿದ ನಾಯಕರು ಕೂಡ 2 ಕ್ಷೇತ್ರ ಕೇಳುತ್ತಾರೆ. ವಿರೋಧ ಪಕ್ಷದ ನಾಯಕ ಸಿದರಾಮಯ್ಯ ಅವರಿಗೆ ಎರಡು ಕ್ಷೇತ್ರಗಳನ್ನು ನೀಡುವ ಬದಲು, ಒಂದು ಕ್ಷೇತ್ರವನ್ನು ಪಕ್ಷ ಸಂಘಟನೆ ಮಾಡಿದವರಿಗೆ ಕೊಡಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ‘ನಾನು ಸಿಎಂ ಅಭ್ಯರ್ಥಿ, ಡಿಕೆಶಿಯೂ ಅಭ್ಯರ್ಥಿ.. ಆಯ್ಕೆ ಮಾಡೋದು ಶಾಸಕರು’ – ಸಿದ್ದು ಮಾತಿನ ಮರ್ಮವೇನು?
ಕೊರಟಗೆರೆ ಕ್ಷೇತ್ರದಿಂದ ಈಗಾಗಲೇ ಡಾ.ಜಿ ಪರಮೇಶ್ವರ್ ಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಇದೀಗ ಸಿದ್ದರಾಮಯ್ಯಗೆ ವರುಣಾ ಜೊತೆ ಕೋಲಾರದಿಂದಲೂ ಟಿಕೆಟ್ ನೀಡುವ ಸಾಧ್ಯತೆ ದಟ್ಟವಾಗಿರುವುದರಿಂದ ಪರಮೇಶ್ವರ್ ಕೂಡ ನನಗೂ 2 ಕ್ಷೇತ್ರಗಳ ಟಿಕೆಟ್ ನೀಡಿ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಪುಲಕೇಶಿನಗರ ಕ್ಷೇತ್ರದ ಟಿಕೆಟ್ ಕೂಡ ನೀಡುವಂತೆ ಹಠ ಮಾಡುತ್ತಿದ್ದಾರೆ. ಕಳೆದ ಬಾರಿ ನನಗೆ ಅನ್ಯಾಯ ಆಗಿದೆ ಅದನ್ನ ಸರಿಪಡಿಸಿ. ಕೊರಟಗೆರೆಯಲ್ಲಿ ಸೋತಿದ್ದಕ್ಕೆ ಸಿಎಂ ಸ್ಥಾನ ಹೋಯ್ತು. ಹೀಗಾಗಿ ನಾನೂ ಸಿಎಂ ಕುರ್ಚಿ ಆಕಾಂಕ್ಷಿಯಾಗಿದ್ದು, ಸಿದ್ದರಾಮಯ್ಯರಂತೆ 2 ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಪರಮೇಶ್ವರ್ ಬೇಡಿಕೆಗೆ ಶಾಸಕರಾದ ಜಮೀರ್ ಅಹ್ಮದ್ ಮತ್ತು ಅಖಂಡ ಶ್ರೀನಿವಾಸಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪುಲಕೇಶಿನಗರದಲ್ಲಿ ಅಖಂಡ ಶ್ರೀನಿವಾಸಮೂರ್ತಿ ಹಾಲಿ ಶಾಸಕರಿದ್ದಾರೆ. ಇವರಿಗೆ ಟಿಕೆಟ್ ತಪ್ಪಿಸುವುದು ಸರಿಯಲ್ಲ. ಶಾಸಕರಿಲ್ಲದ ಕ್ಷೇತ್ರದಲ್ಲಿ ಬೇಕಾದರೆ ಸ್ಪರ್ಧಿಸಲಿ. ಜೊತೆಗೆ ಪರಮೇಶ್ವರ್ ಗೆ 2 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಗತ್ಯ ಕೂಡ ಇಲ್ಲ. ಸಿದ್ದರಾಮಯ್ಯಗೆ 2 ಕ್ಷೇತ್ರಗಳ ಟಿಕೆಟ್ ತಪ್ಪಿಸಲು ಪರಮೇಶ್ವರ್ ನಾಟಕ ಆಡುತ್ತಿದ್ದಾರೆ ಎಂದು ಜಮೀರ್ ಹಾಗೂ ಅಖಂಡ ಶ್ರೀನಿವಾಸ ಮೂರ್ತಿ ವರಿಷ್ಠರ ಮುಂದೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.