ಮೀನಿನ ಖಾದ್ಯ ಸೇವಿಸಿ ಮಹಿಳೆ ಸಾವು, ಕೋಮಾ ಸ್ಥಿತಿಯಲ್ಲಿ ಪತಿ – ಯಾವುದು ಈ ಡೆಡ್ಲಿ ಫಿಶ್?

ಮೀನಿನ ಖಾದ್ಯ ಸೇವಿಸಿ ಮಹಿಳೆ ಸಾವು, ಕೋಮಾ ಸ್ಥಿತಿಯಲ್ಲಿ ಪತಿ – ಯಾವುದು ಈ ಡೆಡ್ಲಿ ಫಿಶ್?

ಮಾಂಸಹಾರಿಗಳಲ್ಲಿ ಅನೇಕರಿಗೆ ಮೀನಿನ ಖಾದ್ಯಗಳೆಂದರೆ ಅಚ್ಚುಮೆಚ್ಚು. ಹೀಗಾಗಿ ಮೀನಿನಲ್ಲಿ ನಾನಾ ಬಗೆಯ ಖಾದ್ಯಗಳನ್ನು ತಯಾರಿಸಿ ಸೇವಿಸುತ್ತಾರೆ. ಆದರೆ ಮೀನು ಸೇವಿಸುವವರು ಕೊಂಚ ಯೋಚಿಸಬೇಕಾಗಿದೆ. ಕೆಲವೊಂದು ಮೀನು ಸೇವಿಸುವಾಗ ಕೊಂಚ ಎಚ್ಚರ ತಪ್ಪಿದ್ರೂ ಜೀವಕ್ಕೆ ತೊಂದರೆ ಎದುರಾಗೋ ಸಾಧ್ಯತೆ ಹೆಚ್ಚಾಗಿದೆ. ಇದೀಗ ಮೀನೊಂದರ ಖಾದ್ಯ ಸೇವಿಸಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಆಕೆಯ ಪತಿ ಕೋಮಾ ಸ್ಥಿತಿಗೆ ತಲುಪಿರುವ ಘಟನೆ  ಮಲೇಷ್ಯಾದಲ್ಲಿ  ನಡೆದಿದೆ.

ಮಲೇಷ್ಯಾದ ಜೊಹೋರ್‌ ನಿವಾಸಿ ಲಿಮ್ ಸಿವ್ ಗುವಾನ್ (83) ಮೃತಪಟ್ಟ ಮಹಿಳೆ. ಆಕೆಯ ಪತಿ ಕೋಮಾ ಸ್ಥಿತಿಯಲ್ಲಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೃದ್ಧ ದಂಪತಿ ಸ್ಥಳೀಯ ಅಂಗಡಿಯಿಂದ ‘ಪಫರ್’ ಮೀನು ಖರೀದಿಸಿ ಮನೆಗೆ ತಂದಿದ್ದಾರೆ. ಬಳಿಕ ಆ ಮೀನುಗಳನ್ನು ಶುಚಿಗೊಳಿಸಿ ಖಾದ್ಯ ತಯಾರಿಸಿ ತಿಂದಿದ್ದರು.

ಇದನ್ನೂ ಓದಿ: ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ವ್ಯಕ್ತಿ – ಮೂವರು ಸಾವು, 9 ಮಂದಿಗೆ ಗಾಯ

ಮೀನು ಸೇವಿಸಿದ ಬಳಿಕ ಲಿಮ್ ಸಿವ್ ಗುವಾನ್ ಉಸಿರಾಟದ ತೊಂದರೆ ಉಂಟಾಗಿದೆ. ಇದಾದ ಬಳಿಕ ಆಕೆಯ ಪತಿಯೂ ಅಸ್ವಸ್ತಗೊಂಡಿದ್ದಾರೆ. ಕೂಡಲೇ ವೃದ್ದ ದಂಪತಿಯ ಮಕ್ಕಳು ತಂದೆ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಲಿಮ್ ಸಿವ್ ಗುವಾನ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಆಕೆಯ ಪತಿ ಕೋಮಾದಲ್ಲಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನನ್ನ ತಂದೆ-ತಾಯಿ ಹಲವು ವರ್ಷಗಳಿಂದ ಅದೇ ಮೀನು ವ್ಯಾಪಾರಿಯಿಂದ ಮೀನು ಖರೀದಿಸುತ್ತಿದ್ದಾರೆ. ಆದ್ದರಿಂದ ನನ್ನ ತಂದೆ ಆ ಮೀನಿನ ಬಗ್ಗೆ ಅಷ್ಟೇನು ಯೋಚಿಸಲಿಲ್ಲ ಎಂದು ಲಿಮ್‌ ದಂಪತಿ ಪುತ್ರಿ ಪ್ರತಿಕ್ರಿಯೆ ನೀಡಿದ್ದಾರೆ.

ಜೋಹೋರ್‌ನ ಆರೋಗ್ಯ ಮತ್ತು ಏಕತಾ ಸಮಿತಿಯ ಅಧ್ಯಕ್ಷ ಲಿಂಗ್ ಟಿಯಾನ್ ಸೂನ್ ಘಟನೆ ಬಗ್ಗೆ ಮಾತನಾಡಿದ್ದಾರೆ. ದಂಪತಿ ಮೀನು ಬಳಸಿ ಅಡುಗೆ ಮಾಡಿ ಸೇವಿಸಿದ್ದರು. ಈ ವೇಳೆ ಮಹಿಳೆಯು ನಡುಕ ಹಾಗೂ ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಆಕೆಯ ಪತಿ ಕೂಡ ಒಂದು ಗಂಟೆಯ ನಂತರ ಇದೇ ರೀತಿಯ ರೋಗಲಕ್ಷಣಗಳಿಂದ ಬಳಲಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಷ್ಟರಲ್ಲಿ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಆಹಾರ ವಿಷಪೂರಿತವಾಗಿದ್ದೇ ಮಹಿಳೆ ಸಾವಿಗೆ ಕಾರಣ. ಇದರ ಪರಿಣಾಮವಾಗಿ ಹೃದಯ ಸಂಬಂಧಿ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಹೀಗಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಹೊಸ ವರದಿ ಬಂದಿಲ್ಲ. ಘಟನೆ ನಡೆದ ದಿನದಂದು ಮಾರಾಟವಾದ ಎಲ್ಲಾ ಜಾತಿಯ ಮೀನುಗಳನ್ನು ಜಿಲ್ಲಾ ಆರೋಗ್ಯ ಕಚೇರಿ (ಪಿಡಿಕೆ) ವಿಶ್ಲೇಷಣೆಗಾಗಿ ತೆಗೆದುಕೊಳ್ಳಲಾಗಿದೆ. ಆಹಾರದ ಆಯ್ಕೆಯಲ್ಲಿ ಅನುಮಾನ ಬಂದರೆ ಜಾಗರೂಕರಾಗಿರಿ ಎಂದು ಜನರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಜಪಾನಿನ ಜನಪ್ರಿಯ ಆಹಾರವಾದ ಪಫರ್ ಮೀನಿನಲ್ಲಿ ಮಾರಣಾಂತಿಕ ವಿಷಕಾರಿ ಟೆಟ್ರೋಡೋಟಾಕ್ಸಿನ್ ಮತ್ತು ಸ್ಯಾಕ್ಸಿಟಾಕ್ಸಿನ್ ಅಂಶ ಇದೆ. ಈ ಅಂಶ ಮಾನವನ ದೇಹಕ್ಕೆ ಸೇರಿದರೆ ಸಾವನ್ನಪ್ಪುತ್ತಾರೆ. ಹೀಗಾಗಿ ಮೀನಿನಿಂದ ಈ ವಿಷವನ್ನು ಹೇಗೆ ತೆಗೆದುಹಾಕಬೇಕು ಎಂಬ ಬಗ್ಗೆ ತರಬೇತಿ ಪಡೆದಿರುವ ಅರ್ಹ ಬಾಣಸಿಗರಿಗೆ ಮಾತ್ರ ಮೀನು ಆಹಾರ ತಯಾರಿಸಲು ಅನುಮತಿ ನೀಡಲಾಗಿದೆ ಎಂದು ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮಾಹಿತಿ ನೀಡಿದೆ.

suddiyaana