ಮೆಗ್ಗಾನ್ ಆಸ್ಪತ್ರೆ ಆವರಣದಲ್ಲೇ ಮಗುವನ್ನ ಬಿಟ್ಟು ಹೋದ ಹೆಮ್ಮಾರಿ – ಕಂದನನ್ನ ಕಚ್ಚಿ ಕಚ್ಚಿ ಕೊಂದ ನಾಯಿ!
ಮನೆಯಲ್ಲಿ ಗರ್ಭಿಣಿ ಇದ್ದಾಳೆ ಅಂದರೆ ಕುಟುಂಬಸ್ಥರ ಖುಷಿ ಅಷ್ಟಿಷ್ಟಲ್ಲ. ಮಗು ಯಾವಾಗ ಮನೆಗೆ ಬರುತ್ತೆ ಅಂತಾ ದಿನಗಳನ್ನ ಲೆಕ್ಕ ಹಾಕುತ್ತಾರೆ. ಮಗು ಹುಟ್ಟಿದಾಗ ಸಿಹಿ ಹಂಚಿ ಸಂಭ್ರಮಿಸುತ್ತಾರೆ. ಆದರೆ ಈ ಕಂದನಿಗೆ ಮಾತ್ರ ಆ ಭಾಗ್ಯ ಸಿಗಲೇ ಇಲ್ಲ. ಗರ್ಭದಿಂದ ಹೊರಬಂದ ಕೆಲವೇ ಹೊತ್ತಿನಲ್ಲಿ ನಾಯಿಗಳ ಪಾಲಾಗಿದೆ. ಹೆತ್ತವಳ ಕ್ರೂರ ಮನಸ್ಸಿಗೆ ಹುಟ್ಟಿದ ಕೆಲವೇ ನಿಮಿಷಗಳಲ್ಲೇ ಉಸಿರು ಚೆಲ್ಲಿದೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಅವಾಂತರಗಳ ಗೂಡಾಗಿದೆ. ಇದೀಗ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಪುಟ್ಟ ಕಂದನ ಜೀವವೇ ಹೋಗಿದೆ. ಮಗುವನ್ನು ಹೆತ್ತ ತಾಯಿಯೊಬ್ಬಳು (mother) ತನ್ನ ನವಜಾತ ಶಿಶುವನ್ನು ಬೀದಿಗೆ ಎಸೆದಿದ್ದಾಳೆ. ಮುಂದೆ ಕೆಲವೇ ಕ್ಷಣಗಳಲ್ಲಿ ಆ ಮಗು ಬೀದಿ ನಾಯಿ (dog) ದಾಳಿಗೆ ಬಲಿಯಾಗಿದೆ. ಹೆಣ್ಣು ಶಿಶುವನ್ನು ಹೆತ್ತ ತಾಯಿಯು ಬಳಿಕ ಆ ಮುಗ್ಧ ಮಗುವನ್ನು ಹೆರಿಗೆ ವಾರ್ಡ್ ಆವರಣದಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾಳೆ. ಈ ಕವರ್ ನಲ್ಲಿರುವ ಮಗುವನ್ನು ಬೀದಿ ನಾಯಿಯು ಎಳೆದುಕೊಂಡು ಹೋಗಿದೆ. ಮಗುವಿನ ಮೇಲೆ ದಾಳಿ ಮಾಡಿದೆ. ಈ ನಡುವೆ ಮಗುವಿನ ಮೇಲಿನ ದಾಳಿ ನೋಡಿದ ಸ್ಥಳೀಯರು ಸಹಾಯಕ್ಕೆ ದೌಡಾಯಿಸಿದ್ದಾರೆ. ಮಗುವನ್ನು ಬಚಾವ್ ಮಾಡಲು ಯತ್ನಿಸಿದ್ದಾರೆ. ನಾಯಿಯನ್ನು ಓಡಿಸಿ ಮಗುವಿನ ಹತ್ತಿರ ಹೋಗಿ ನೋಡುವಷ್ಟರಲ್ಲಿ ಮಗುವಿನ ಪ್ರಾಣ ಅದಾಗಲೇ ಹಾರಿಹೋಗಿತ್ತು.
ಇದನ್ನೂ ಓದಿ : ಚಲಿಸುತ್ತಿದ್ದ ಕಾರಿನಲ್ಲಿಯೇ ಯುವತಿ ಮೇಲೆ ರಾತ್ರಿಯಿಡೀ ಗ್ಯಾಂಗ್ ರೇಪ್ – ಕಾಮುಕರ ಅಟ್ಟಹಾಸಕ್ಕೆ ಬೆಚ್ಚಿದ ಬೆಂಗಳೂರು
ನವಜಾತ ಹೆಣ್ಣು ಶಿಶುವಿನ ಮೇಲೆ ನಾಯಿ ದಾಳಿ ಮಾಡಿದ್ದರಿಂದ ಮಗುವಿನ ಮೈ ತುಂಬಾ ಗಾಯಗಳಾಗಿದ್ದವು. ಸದ್ಯ ಈ ಘಟನೆಯಿಂದ ಹೆರಿಗೆ ವಾರ್ಡ್ ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಒಂದೆಡೆ ಹೆತ್ತ ತಾಯಿಯೇ ತನ್ನ ಕರುಳು ಬಳ್ಳಿಯನ್ನು ಬೀದಿಯಲ್ಲಿ ಬಿಸಾಡಿ ಹೋಗಿದ್ದಾಳೆ. ಮತ್ತೊಂದೆಡೆ ಆ ಮಗು ಬೀದಿ ನಾಯಿಗೆ ಬಲಿಯಾಗಿದೆ. ಈ ಎರಡು ಘಟನೆಯಿಂದ ಹೆರಿಗೆ ವಾರ್ಡ್ ಮತ್ತು ಆಸ್ಪತ್ರೆಯಲ್ಲಿರುವ ಮಹಿಳೆಯರು ಮತ್ತು ಸ್ಥಳೀಯರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಆರಂಭದಿಂದಲೂ ಸರಿಯಾದ ವ್ಯವಸ್ಥೆಗಳಿಲ್ಲ. ಸದ್ಯ ಈ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ ಯಾರು ಎನ್ನುವುದು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಘಟನೆ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ. ಮಗುವಿನ ಮೃತದೇಹವನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮೆಗ್ಗಾನ್ ಹೆರಿಗೆ ವಾರ್ಡ್ ನಲ್ಲಿರುವ ವೈದ್ಯರು ಮತ್ತು ನರ್ಸ್ ಹಾಗೂ ಸಿಬ್ಬಂದಿಯ ವಿಚಾರಣೆ ಶುರುವಾಗಿದೆ.