2 ವರ್ಷ ಜೈಲು ಶಿಕ್ಷೆ ಪ್ರಶ್ನಿಸಿ ಇಂದು ರಾಹುಲ್‌ ಗಾಂಧಿ ಮೇಲ್ಮನವಿ –  ಸೂರತ್‌ ಗೆ ತೆರಳಲಿದೆ ರಾಗಾ ಟೀಮ್

2 ವರ್ಷ ಜೈಲು ಶಿಕ್ಷೆ ಪ್ರಶ್ನಿಸಿ ಇಂದು ರಾಹುಲ್‌ ಗಾಂಧಿ ಮೇಲ್ಮನವಿ –  ಸೂರತ್‌ ಗೆ ತೆರಳಲಿದೆ ರಾಗಾ ಟೀಮ್

ಸೂರತ್‌: ಸಂಸದ ಸ್ಥಾನದಿಂದನ ಅನರ್ಹರಾಗಿರುವ ರಾಹುಲ್ ಗಾಂಧಿ ಇಂದು ತಮ್ಮ ವಿರುದ್ಧದ ತೀರ್ಪನ್ನು ಪ್ರಶ್ನಿಸಿ ಸೂರತ್ ನ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ.

ಮೋದಿ ಸರ್ ನೇಮ್  ಹೇಳಿಕೆಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಸಾಬೀತಾದ ನಂತರ ರಾಹುಲ್ ಗಾಂಧಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು. ಮಾರ್ಚ್ 23 ರಂದು ಸೂರತ್ ನ ಚೀಫ್ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪಿನ ನಂತರ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು.

ಇದನ್ನೂ ಓದಿ:ಸಂಸದ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ – ವಯನಾಡು ಕ್ಷೇತ್ರದ ಉಪಚುನಾವಣೆ ಯಾವಾಗ?

ತೀರ್ಪು ನೀಡಿದ್ದ ನ್ಯಾಯಾಲಯ ರಾಹುಲ್ ಗಾಂಧಿಗೆ ಜಾಮೀನು ನೀಡಿ  ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲ ಅವಕಾಶ ನೀಡಿತ್ತು. ಇದೀಗ 11 ದಿನಗಳ ಬಳಿಕ ಇಂದು ಮಧ್ಯಾಹ್ನ 2 ಗಂಟೆ ವೇಳೆಗೆ ರಾಹುಲ್ ಗಾಂಧಿ ಸೂರತ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಿದ್ದಾರೆ.

ರಾಹುಲ್ ಗಾಂಧಿಯೊಂದಿಗೆ ತಂಗಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಕೆಸಿ ವೇಣುಗೋಪಾಲ್ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲಾ,  ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹಾಗೂ ಪಕ್ಷದ ಇತರ ಹಿರಿಯ ನಾಯಕರು ಸೂರತ್‌ಗೆ ತೆರಳಲಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲಿ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ರಾಹುಲ್‌ ಗಾಂಧಿ, ಕಳ್ಳರೆಲ್ಲಾ ಮೋದಿ ಎಂಬ ಹೆಸರನ್ನೇ ಏಕೆ ಇಟ್ಟುಕೊಂಡಿರುತ್ತಾರೆ ಎಂದು ವ್ಯಂಗ್ಯವಾಡಿದ್ದರು. ಈ ಹೇಳಿಕೆ ವಿರುದ್ಧ ಗುಜರಾತ್‌ನ ಬಿಜೆಪಿ ಶಾಸಕ  ಪೂರ್ಣೇಶ್‌ ಮೋದಿ  ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಸೆಷನ್ಸ್ ಕೋರ್ಟ್ ನಲ್ಲಿ ರಾಹುಲ್ ಗಾಂಧಿ ವಿರುದ್ದದ ತೀರ್ಪಿಗೆ ತಡೆಯಾಜ್ಞೆ ಸಿಕ್ಕಿದರೆ ಮಾತ್ರ ಅನರ್ಹತೆಯಿಂದ ರಾಗಾ ಪಾರಾಗಲಿದ್ದಾರೆ.

suddiyaana