ಈ ಮರದ ಗಾಳಿ ಉಸಿರಾಡಿದ್ರೆ ಸಾವು ಖಚಿತ? – ಈ ವೃಕ್ಷದ ಬಗ್ಗೆ ನಿಮಗೆ ಗೊತ್ತಾ?

ಈ ಮರದ ಗಾಳಿ ಉಸಿರಾಡಿದ್ರೆ ಸಾವು ಖಚಿತ? – ಈ ವೃಕ್ಷದ ಬಗ್ಗೆ ನಿಮಗೆ ಗೊತ್ತಾ?

ಭೂಮಿ ಮೇಲೆ ಅನೇಕ ಜಾತಿಯ ಸಸ್ಯಗಳು, ಮರಗಳು ಅಸ್ತಿತ್ವದಲ್ಲಿವೆ.  ಅವುಗಳು ತಮ್ಮದೇ ಆದ ಗುಣಗಳನ್ನು ಮತ್ತು ದೋಷಗಳನ್ನು ಹೊಂದಿವೆ.  ಕೆಲವೊಂದು  ಗಿಡ ಮರಗಳನ್ನು ಪೂಜಿಸಿದರೆ, ಇನ್ನೂ ಕೆಲವನ್ನು ನಮ್ಮ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತೇವೆ.  ಆದರೆ, ಎಂದಾದರೂ ನಾಗರಹಾವಿಗಿಂತಲೂ  ಹೆಚ್ಚು ವಿಷಕಾರಿಯಾದ ಸಸ್ಯದ ಬಗ್ಗೆ ತಿಳಿದಿದ್ದೀರಾ?… ಕೇವಲ ಅದರ ಸ್ಪರ್ಶದಿಂದ, ಆ ಮರದ ಗಾಳಿಯ ಸೇವನೆಯಿಂದ ಮನುಷ್ಯನ ಪ್ರಾಣಕ್ಕೆ ಅಪಾಯ ಎದುತಾಗುತ್ತಂತೆ!

ಇದನ್ನೂ ಓದಿ: ಈ ಕಾಡಿನ ಒಳಗೆ ಹೋದರೆ ಜೀವಂತ ಬರುವುದೇ ಅನುಮಾನ – ಇದೊಂದು ಸೂಸೈಡ್ ಫಾರೆಸ್ಟ್..!

ಸಾವಿನ ಮರ ಅಥವಾ ಅತ್ಯಂತ ಅಪಾಯಕಾರಿ ವೃಕ್ಷ ಎಂದು ಕುಖ್ಯಾತಿ ಗಳಿಸಿರುವ ಮರದ ಕಥೆ ಇದು. ಇದು `ವಿಶ್ವದ ಅತ್ಯಂತ ಅಪಾಯಕಾರಿ’ ವೃಕ್ಷ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ವಿಷಕಾರಿ `ಮಂಚಿನೀಲ್’ ಎಂಬ ಮರದ ಕಥೆ. ಇದನ್ನು `ಸಾವಿನ ಮರ’ ಎಂದೂ ಕರೆಯಲಾಗುತ್ತದೆ. ಯಾಕೆಂದರೆ, ಈ ಮರದಡಿಯಲ್ಲಿ ಹೋಗಿ ನಿಂತರೆ ಕಷ್ಟಗಳೇ ಕಾಣಲಾರಂಭಿಸುತ್ತೆ. ಕೆಲವೊಂದು ಸಲ ಜೀವ ಹೋಗುವ ಸಂಭವವೂ ಇದೆ ಎಂದರೆ ನಂಬಲೇಬೇಕು…!

ಸಾಮಾನ್ಯವಾಗಿ ಫ್ಲೋರಿಡಾ ಎವರ್ಗ್ಲೇಡ್ಸ್ ಮತ್ತು ಕೆರಿಬಿಯನ್ ಕರಾವಳಿ ಪ್ರದೇಶದಲ್ಲಿ ಕಂಡು ಬರುವ ಮರ ಇದು. ಈ ಭಾಗದ ಜೌಗು ಪ್ರದೇಶದಲ್ಲಿ ಸುಮಾರು 50 ಅಡಿ ಎತ್ತರ ಬೆಳೆಯುವ ಈ ಮರದ ಬಳಿ ಹೋಗುವುದಕ್ಕೇ ಜನ ಹೆದರುತ್ತಾರೆ. ಅಷ್ಟರಮಟ್ಟಿಗೆ ಈ ಮರ ಭೀತಿ ಸೃಷ್ಟಿಸಿದೆ. `ಮಂಚಿನೀಲ್’ ಮರ ಅದೆಷ್ಟು ವಿಷಕಾರಿಯಾಗಿದೆ ಎಂದರೆ ಮಳೆಯ ಸಮಯದಲ್ಲಿ ಈ ವೃಕ್ಷದ ಕೆಳಗೆ ನಿಂತರೆ ಚರ್ಮವು ಸುಟ್ಟಂತಹ ಅನುಭವವಾಗುತ್ತೆ. ದೇಹದಲ್ಲಿ ಗುಳ್ಳೆಗಳು ಏಳುತ್ತವೆ. ಈ ಮರದ ಹಣ್ಣನ್ನು ತಿಂದರೆ ಆಂತರಿಕ ರಕ್ತಸ್ರಾವ ಉಂಟಾಗುತ್ತದೆ. ಒಮ್ಮೊಮ್ಮೆ ಸಾವಿಗೂ ಕಾರಣವಾಗಬಹುದು!

ಈ ಮರದ ತೊಗಟೆ, ಎಲೆ ಮತ್ತು ಹಣ್ಣುಗಳಲ್ಲಿ ಹಾಲಿನಂತಹ ದ್ರವ ಬರುತ್ತೆ. ಈ ದ್ರವ ಚರ್ಮದ ಸಂಪರ್ಕಕ್ಕೆ ಬಂದರೆ ತೀವ್ರವಾದ ಸುಟ್ಟಂತಹ ಗುಳ್ಳೆಗಳು ಉಂಟಾಗುತ್ತವೆ. ಅಷ್ಟೇ ಅಲ್ಲ ಮಂಚಿನೀಲ್ ಮರದ ಕಟ್ಟಿಗೆ ಸುಟ್ಟಾಗ ಬರುವ ಹೊಗೆಯಿಂದ ಕಣ್ಣಿನ ಉರಿಯೂತ ಮತ್ತು ತಾತ್ಕಾಲಿಕ ಕುರುಡುತನ ಕಾಡಿದ್ದೂ ಇದೆ ಅಂತಾ ಹೇಳಲಾಗುತ್ತಿದೆ. ಆದರೆ, ಈ ಮರಗಳು ಇಲ್ಲಿನ ಪರಿಸರ ವ್ಯವಸ್ಥೆಗೆ ಬಹಳ ಅಗತ್ಯವೂ ಆಗಿದೆ. ಸಮುದ್ರದ ಅಲೆಗಳಿಂದ ಉಂಟಾಗುವ ಮಣ್ಣಿನ ಸವೆತವನ್ನು ಇವುಗಳು ತಡೆಯಲು ಸಹಾಯ ಮಾಡುತ್ತವೆ. ಆದರೆ, ಈ ಮರಗಳು ಜನರ ಪಾಲಿಗೆ ಮಾತ್ರ ಬಹಳ ಕಂಟಕವಾಗಿ ಪರಿಣಮಿಸಿವೆ. ಈ ಸಾವಿನ ಮರ ಈ ಭಾಗದಲ್ಲಿ ಅದೆಷ್ಟು ಭೀತಿ ಮೂಡಿಸಿದೆ ಅಂದ್ರೆ, ಆ ಮರ ಇರುವ ಪ್ರದೇಶಗಳಲ್ಲಿ ಎಚ್ಚರಿಕೆಯ ಫಲಕಗಳನ್ನೂ ಅಳವಡಿಸಲಾಗಿದೆ.

suddiyaana