ಒಬ್ಬನೇ ವ್ಯಕ್ತಿಯಿಂದ 8,428 ಪ್ಲೇಟ್ ಇಡ್ಲಿ ಆರ್ಡರ್! – ಆತ ಪಾವತಿಸಿದ ಹಣವೆಷ್ಟು ಗೊತ್ತಾ?
ದಕ್ಷಿಣ ಭಾರತೀಯರಿಗಂತೂ ಇಡ್ಲಿ ಅಂದ್ರೆ ಪಂಚಪ್ರಾಣ. ಮನೆಯಲ್ಲಿ, ಸಮಾರಂಭಗಳಲ್ಲಿ, ಹೊಟೇಲ್ ಗೆ ಹೋದಾಗಲೂ ಜನ ಹೆಚ್ಚಾಗಿ ಇದನ್ನೇ ತಿನ್ನುತ್ತಾರೆ. ಇದೀಗ ವಿಶ್ವ ಇಡ್ಲಿ ದಿನದ ಪ್ರಯುಕ್ತ ಭಾರತದ ಪ್ರಮುಖ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಸ್ವಿಗ್ಗಿ, ಆಸಕ್ತಿದಾಯಕ ವಿಚಾರವೊಂದನ್ನು ಬಹಿರಂಗಪಡಿಸಿದೆ. ಈ ಅಂಕಿ ಅಂಶದ ಪ್ರಕಾರ ಮಾರ್ಚ್ 30, 2022 ರಿಂದ ಮಾರ್ಚ್ 25, 2023ರ ವರೆಗಿನ ಅವಧಿಯಲ್ಲಿ ದಕ್ಷಿಣ ಭಾರತದ ನೆಚ್ಚಿನ ಬ್ರೇಕ್ ಫಾಸ್ಟ್ ಇಡ್ಲಿಯನ್ನು ಎಷ್ಟು ಜನ ಸೇವಿಸಿದ್ದಾರೆ ಎನ್ನುವುದನ್ನು ಬಹಿರಂಗಪಡಿಸಿದೆ.
ಇದನ್ನೂ ಓದಿ: ನಂದಿನಿ ಮೊಸರಿನ ಪ್ಯಾಕೆಟ್ ಮೇಲೆ ಹಿಂದಿ ಪದ – ವಿರೋಧ, ಟೀಕೆ ಬೆನ್ನಲ್ಲೇ ಆದೇಶ ಹಿಂಪಡೆದ ಎಫ್ಎಸ್ಎಸ್ಎಐ
ಸ್ವಿಗ್ಗಿ ಅಂಕಿ ಅಂಶದ ಪ್ರಕಾರ ಕಳೆದ 12 ತಿಂಗಳಲ್ಲಿ 3.3 ಕೋಟಿ ಪ್ಲೇಟ್ ಗಳಷ್ಟು ಇಡ್ಲಿಯನ್ನು ಜನ ಖರೀದಿಸಿದ್ದಾರೆ ಅಂತಾ ಗೊತ್ತಾಗಿದೆ. ಮಸಾಲಾ ದೋಸೆಯ ನಂತರ ಇಡ್ಲಿ ಸ್ವಿಗ್ಗಿಯಲ್ಲಿ ಎರಡನೇ ಅತಿ ಹೆಚ್ಚು ಆರ್ಡರ್ ಮಾಡಿದ ಉಪಹಾರವಾಗಿದೆ ಅಂತಾ ಸ್ವಿಗ್ಗಿ ವಿಶ್ಲೇಷಣೆಯಿಂದ ತಿಳಿದುಬಂದಿದೆ.
8,428 ಪ್ಲೇಟ್ ಇಡ್ಲಿ ಆರ್ಡರ್ ಮಾಡಿದ ವ್ಯಕ್ತಿ!
ವಿಶ್ವ ಇಡ್ಲಿ ದಿನಾಚರಣೆಯ ಅಂಗವಾಗಿ ನಡೆಸಿದ ಸಮೀಕ್ಷೆಯಲ್ಲಿ ಇನ್ನೊಂದು ಆಶ್ಚರ್ಯಕರ ಸಂಗತಿ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ವರ್ಷದ 365 ದಿನಗಳಲ್ಲಿ ಸುಮಾರು 8,428 ಪ್ಲೇಟ್ ಇಡ್ಲಿ ಆರ್ಡರ್ ಮಾಡಿದ್ದಾನಂತೆ!
ಹೌದು, ಹೈದರಾಬಾದ್ ನ ಈ ವ್ಯಕ್ತಿ ಒಂದು ವರ್ಷದಲ್ಲಿ ತನ್ನ ಗೆಳೆಯರು ಮತ್ತು ಕುಟುಂಬ ಸದಸ್ಯರಿಗಾಗಿ ಒಂದು ವರ್ಷದಲ್ಲಿ ಬರೋಬ್ಬರಿ 8,428 ಪ್ಲೇಟ್ ಇಡ್ಲಿ ಆರ್ಡರ್ ಮಾಡಿದ್ದಾನೆ. ಅದಕ್ಕಾಗಿ ಆತ ಪಾವತಿಸಿದ್ದು ಬರೋಬ್ಬರಿ 6 ಲಕ್ಷ ರೂಪಾಯಿ ಅಂತಾ ಸ್ವಿಗ್ಗಿ ಹೇಳಿದೆ.
ಜನರು ಹೆಚ್ಚು ಇಡ್ಲಿ ಆರ್ಡರ್ ಮಾಡಿರುವ ಸಮಯವೆಂದರೆ ಅದು ಬೆಳಗ್ಗೆ 8ರಿಂದ 10ರ ವರೆಗೆ. ಆದರೆ ಹಲವು ನಗರಗಳಲ್ಲಿ ಮಧ್ಯಾಹ್ನದ ವೇಳೆಯಲ್ಲೂ ಇಡ್ಲಿ ಆರ್ಡರ್ ಮಾಡಿರುವ ಅನೇಕ ಉದಾಹರಣೆಗಳಿವೆ ಅಂತಾ ಸ್ವಿಗ್ಗಿ ಹೇಳಿದೆ.
ಇಡ್ಲಿಯ ಆರ್ಡರ್ ಗಳಿಗೆ ನೆಚ್ಚಿನ ರೆಸ್ಟೋರೆಂಟ್ ಗಳ ಟಾಪ್ 5 ರ ಪಟ್ಟಿಯಲ್ಲಿ ಬೆಂಗಳೂರು, ಚೆನ್ನೈಗಳಲ್ಲಿ ಅಡ್ಯಾರ್ ಆನಂದ್ ಭವನ್ಗಳಾಗಿವೆ. ಹೈದರಾಬಾದ್ ನಲ್ಲಿ ವರಲಕ್ಷ್ಮಿ ಟಿಫನ್ಸ್, ಉಡುಪೀಸ್ ಉಪಹಾರ್ ಹಾಗೂ ಚೆನ್ನೈ ನಲ್ಲಿ ಸಂಗೀತಾ ವೆಜ್ ರೆಸ್ಟೋರೆಂಟ್ ಗಳಿವೆ ಎಂದು ಸ್ವಿಗ್ಗಿ ಹೇಳಿದೆ.
ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಅತಿ ಹೆಚ್ಚು ಆರ್ಡರ್ಗಳು ಸ್ವಿಗ್ಗಿಗೆ ಲಭಿಸಿದೆ. ಮುಂಬೈ, ಕೊಯಮತ್ತೂರು, ಪುಣೆ, ವಿಝಾಗ್, ದೆಹಲಿ, ಕೋಲ್ಕತಾ, ಕೊಚ್ಚಿಯಲ್ಲೂ ಇಡ್ಲಿ ಪ್ರಿಯರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ ಎಂದು ಸ್ವಿಗ್ಗಿ ತಿಳಿಸಿದೆ.