ರಾಮ ನವಮಿಯಂದೇ ದುರಂತ – ದೇವಸ್ಥಾನದ ಬಾವಿಗೆ ಬಿದ್ದ 25 ಮಂದಿ

ರಾಮ ನವಮಿಯಂದೇ ದುರಂತ – ದೇವಸ್ಥಾನದ ಬಾವಿಗೆ ಬಿದ್ದ 25 ಮಂದಿ

ಇಂದೋರ್‌: ಶ್ರೀರಾಮ ನವಮಿ ಆಚರಣೆ ವೇಳೆ ಮಧ್ಯಪ್ರದೇಶದ ಇಂದೋರ್ ನಲ್ಲಿ ದೊಡ್ಡ ಅವಘಡವೊಂದು ಸಂಭವಿಸಿದೆ. ದೇವಸ್ಥಾನದ ಮೆಟ್ಟಿಲುಬಾವಿ ಕುಸಿದು ಸುಮಾರು 25 ಮಂದಿ ಬಾವಿಗೆ ಬಿದ್ದಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಇಂದೋರ್ ನ ಪಟೇಲ್ ನಗರದ ಮಹಾದೇವ್ ಜುಲೇಲಾಲ್ ದೇವಸ್ಥಾನದ ಮೆಟ್ಟಿಲುಬಾವಿ ಕುಸಿದಿದೆ. ಈ ವೇಳೆ ಸುಮಾರು 25 ಮಂದಿ ಬಾವಿಗೆ ಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ‘ಗುಬ್ಬಿ’ ‘ಕೈ’ಗೆ ಬ್ರಹ್ಮಾಸ್ತ್ರ – ಜೆಡಿಎಸ್ ತೊರೆದು ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಎಸ್.ಆರ್ ಶ್ರೀನಿವಾಸ್!

ರಾಮ ನವಮಿ ಆಚರಣೆ ವೇಳೆ ಪುರಾತನ ಬಾವಡಿ (ದೊಡ್ಡ ಬಾವಿ) ಯ ಮೇಲ್ಛಾವಣಿಯ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಹೀಗಾಗಿ ಭಾರ ಹೊರಲು ಸಾಧ್ಯವಾಗದೆ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ವೇಗಗೊಳಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಅವಘಡದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 10ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಪೊಲೀಸರು, ಜಿಲ್ಲಾಡಳಿತ ಮತ್ತು ಎಸ್‌ಡಿಆರ್‌ಎಫ್ ಸೇರಿದಂತೆ ಹಲವಾರು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

suddiyaana