ಏಕ ಕಾಲದಲ್ಲಿ ಎರಡು ದೈವಗಳ ನರ್ತನ ಸೇವೆ – ದೈವನರ್ತನ ಮಾಡುವಾಗಲೇ ಕುಸಿದು ನರ್ತಕ ಸಾವು!
ಹುಟ್ಟು ಉಚಿತ ಸಾವು ಖಚಿತ ಅನ್ನೋ ಮಾತಿದೆ. ಹುಟ್ಟು ಯಾವಾಗ ಅನ್ನೋದನ್ನ ಬೇಕಿದ್ರೆ ಅಂದಾಜಿಸಬಹುದು. ಆದರೆ ಸಾವು ಯಾವಾಗ ಹೇಗೆ ಬರುತ್ತೆ ಅನ್ನೋದನ್ನ ಊಹಿಸೋಕೂ ಅಸಾಧ್ಯ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂಥಾದ್ದೇ ಘಟನೆ ನಡೆದಿದೆ. ದೈವನರ್ತನದ ವೇಳೆಯೇ ನರ್ತಕರೊಬ್ಬರು ಕುಸಿದು ಪ್ರಾಣ ಬಿಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ (Kadaba Taluku) ಎಡಮಂಗಲದಲ್ಲಿ ಇಂಥಾದ್ದೊಂದು ದುರಂತ ನಡೆದಿದೆ. ಮೃತ ದೈವನರ್ತಕರನ್ನ 60 ವರ್ಷದ ಕಾಂತು ಅಜಿಲ ಎಂದು ಗುರುತಿಸಲಾಗಿದೆ. ಎಡಮಂಗಲ ಸಮೀಪದ ಇಡ್ಯಡ್ಕ (Idyadka) ಎಂಬಲ್ಲಿ ಶಿರಾಡಿ ದೈವದ ನರ್ತನಕ್ಕೆ ಮೊದಲು ಉಳ್ಳಾಕುಲು, ನಾಗಬ್ರಹ್ಮ ದೈವದ ನರ್ತನ ಸೇವೆ ನಡೆಯುತ್ತಿತ್ತು. ಬಳಿಕ ಶಿರಾಡಿ ದೈವ (Shiradi Daiva) ದ ಕೋಲ ನಡೆಯುತ್ತಿದ್ದ ಸಮಯದಲ್ಲಿ ಕಾಂತು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ದೇವರ ಸೇವೆ ಮಾಡುತ್ತಿದ್ದ ಸಂದರ್ಭದಲ್ಲಿಯೇ ಈ ರೀತಿ ಸಾವು ಬಂದಿರುವುದು ನೆರೆದವರಲ್ಲಿ ಆತಂಕ ಸೃಷ್ಟಿಸಿದೆ.
ಇದನ್ನೂ ಓದಿ : ನಿನ್ನನ್ನೇ ಮದುವೆಯಾಗುವೆ ಎಂದ ದೈವ ನರ್ತಕ – ಎರಡೇ ದಿನದಲ್ಲಿ ಅದೇ ಮಹಿಳೆ ಜೊತೆ ಪಾತ್ರಿ ಪರಾರಿ!
ದೈವ ನರ್ತನ ನಡೆಯುತ್ತಿದ್ದಾಗಲೇ ಕಾಂತು ಅಜಿಲ ಅವರು ಕುಸಿದು ಬಿದ್ದಿದ್ದಾರೆ. ಕೆಲವೇ ಹೊತ್ತಿನಲ್ಲಿ ಕೊನೆಯುಸಿರೆಳೆದಿದ್ದಾರೆ. ದೈವ ನರ್ತನದ ಸನ್ನಿವೇಶ ಮತ್ತು ನರ್ತಕ ಕುಸಿದು ಬೀಳುವ ದೃಶ್ಯ ಅಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಎಡಮಂಗಲ ಕೂಡುಕಟ್ಟಿನ ಪ್ರಸಿದ್ಧ ದೈವ ನರ್ತಕರಾಗಿರುವ ಕಾಂತು ಅಜಿಲ ಅವರು ಈ ಭಾಗದಲ್ಲಿ ಶಿರಾಡಿ ದೈವದ ನರ್ತನ ಸೇವೆಯಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿದ್ದರು. ಬುಧವಾರ ರಾತ್ರಿ ಇಲ್ಲಿಗೆ ಸಮೀಪದ ಇಡ್ಯಡ್ಕ ಎಂಬಲ್ಲಿ ದೈವಗಳ ಕೋಲ ಸೇವೆ ನಡೆಯುತ್ತಿತ್ತು. ಕಾಂತು ಅಜಿಲ ಶಿರಾಡಿ ದೈವದ ಕೋಲ ಕಟ್ಟಿದ್ದರು.
ಎರಡು ದೈವಗಳ ನರ್ತನ ಸೇವೆ ಏಕ ಕಾಲದಲ್ಲಿ ನಡೆಯುತ್ತಿತ್ತು. ಭಕ್ತರು ಸುತ್ತಲೂ ಕುಳಿತು ನೋಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಕಾಂತು ಅಜಿಲ ನರ್ತನ ಸೇವೆಯಲ್ಲಿ ತಲ್ಲೀನರಾಗಿದ್ದಾಗಲೇ ಕುಸಿದು ಬಿದ್ದರು. ತಕ್ಷಣ ನೆರೆದ ಭಕ್ತರು ಧಾವಿಸಿ ಎಬ್ಬಿಸಿದರು. ಆದರೆ, ಕೆಲವೇ ಹೊತ್ತಿನಲ್ಲಿ ಕಾಂತು ಅಜಿಲ ಮೃತಪಟ್ಟಿದ್ದಾರೆ.