ಗಿಫ್ಟ್ ಕೊಟ್ಟು ಮತಬುಟ್ಟಿಗೆ ‘ಕೈ’ ಹಾಕಿದವ್ರಿಗೆ ಶಾಕ್ – ಹಾಲಿ ಶಾಸಕ ಮತ್ತು ಮಾಜಿ ಶಾಸಕನ ವಿರುದ್ಧ FIR!
ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮನಗೆಲ್ಲಲು ರಾಜಕಾರಣಿಗಳು ಅಕ್ರಮ ದಾರಿ ಹಿಡಿದಿದ್ದಾರೆ.. ಹಣ ಹಾಗೂ ವಸ್ತುಗಳ ರೂಪದಲ್ಲಿ ಆಮಿಷ ಒಡ್ಡುತ್ತಿದ್ದಾರೆ.. ರಾಜ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಜಾರಿಯಾಗಿದ್ದರೂ ಕೂಡ ಕುರುಡು ಕಾಂಚಾಣ ಸದ್ದು ಮಾಡ್ತಿದೆ.. ಇದೀಗ ಚುನಾವಣಾ ಆಮಿಷದ ಹಿನ್ನೆಲೆ ಮಾಜಿ ಸಚಿವ ಹಾಗೂ ಅವರ ಪುತ್ರನ ವಿರುದ್ಧ ಎಫ್ ಐಆರ್ ದಾಖಲಾಗಿದೆ..
ಮಾರ್ಚ್ 29ರಂದು ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ನೀತಿ ಸಂಹಿತೆ ಜಾರಿಯಾಗಿದೆ. ಹೀಗಿದ್ದರೂ ಕೂಡ ಮತದಾರರಿಗೆ ಆಮಿಷವೊಡ್ಡಿ ಗಿಫ್ಟ್ ಹಂಚುತ್ತಿದ್ದ ಆರೋಪದಡಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ದಾವಣಗೆರೆ ಉತ್ತರ ಕ್ಷೇತ್ರದ ಮಾಜಿ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ದ FIR ದಾಖಲಿಸಲಾಗಿದೆ. ಹೌದು SS ಮತ್ತು SSM ಅಭಿಮಾನಿ ಬಳಗದ ಹೆಸರಿನಲ್ಲಿ ಜನರಿಗೆ ಗಿಫ್ಟ್ ಹಂಚುತ್ತಿದ್ದರು. ಈ ವೇಳೆ ಪೊಲೀಸರು ದಾಳಿ ಮಾಡಿದ್ದು, ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ದಾವಣಗೆರೆಯ ಕೆಟಿಜೆ ನಗರದ ಠಾಣೆಯಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಎ1, ಎಸ್.ಎಸ್.ಮಲ್ಲಿಕಾರ್ಜುನ್ ಎ2 ಆರೋಪಿಗಳನ್ನಾಗಿಸಿ ಎಫ್ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ : ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಅನರ್ಹ – 6 ವರ್ಷ ಸ್ಪರ್ಧಿಸುವಂತಿಲ್ವಾ? ಮುಂದಿನ ಆಯ್ಕೆ ಏನು?
ಮಾರ್ಚ್ 29ರಂದು ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭಗತ್ ಸಿಂಗ್ ನಗರದಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 7.19 ಲಕ್ಷ ರೂಪಾಯಿ ಮೌಲ್ಯದ ಅಡುಗೆ ಸಲಕರಣೆಯನ್ನು ಪೊಲೀಸರು ಜಪ್ತಿ ಮಾಡಿದ್ದರು. ಅಡುಗೆ ಸಲಕರಣೆಗಳ ಮೇಲೆ ಕಾಂಗ್ರೆಸ್ ಶಾಸಕ ಶಾಮನೂರ ಶಿವಶಂಕರಪ್ಪ ಹಾಗೂ ಪುತ್ರ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಭಾವಚಿತ್ರ ಇತ್ತು. ಬಳಿಕ ಕಾಡಜ್ಜಿ ಹನಮಂತಪ್ಪ ಎಂಬುವವರ ವಿರುದ್ಧ ದೂರು ದಾಖಲು ಮಾಡಲಾಗಿತ್ತು. ಇದೀಗ ಇದೇ ಆರೋಪದ ಮೇಲೆ ಶಾಸಕ ಶಾಮನೂರು ಶಿವಶಂಕರಪ್ಪ, ಪುತ್ರ ಮಲ್ಲಿಕಾರ್ಜುನ್ ವಿರುದ್ಧ FIR ದಾಖಲಾಗಿದೆ.
ಮತ್ತೊಂದೆಡೆ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿದ ಸೀರೆಗಳಿಗೆ ಬೆಂಕಿ ಇಟ್ಟು ದಾವಣಗೆರೆ ದಕ್ಷಿಣ ಕ್ಷೇತ್ರದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ 60 ರೂಪಾಯಿ ಸೀರೆ ಉಟ್ಟುಕೊಳ್ಳುವಷ್ಟು ನಿರ್ಗತಿಕರಲ್ಲ ಎಂದು ರಸ್ತೆಯಲ್ಲಿ ಸೀರೆಗಳಿಗೆ ಬೆಂಕಿ ಇಟ್ಟು ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯ ವಿಧಾನ ಸಭಾ ಚುನಾವಣೆ ಹಿನ್ನೆಲೆ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಶಾಸಕ ಎಸ್.ಎಸ್ ಮಲ್ಲಿಕಾರ್ಜುನ ಭಾವಚಿತ್ರವಿರುವ ಬ್ಯಾಗ್ ನಲ್ಲಿ ಸೀರೆಗಳನ್ನು ಹಂಚಲಾಗಿತ್ತು.
ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಮತದಾರರ ಓಲೈಕೆಗಾಗಿ ರಾಜಕೀಯ ನಾಯಕರು ಹಣ, ಅಡುಗೆ ಸಾಮಾಗ್ರಿಗಳು, ಸೀರೆ ಸೇರಿದಂತೆ ನಾನಾ ಗಿಫ್ಟ್ಗಳನ್ನು ಹಂಚಿದ್ದಾರೆ. ದಾಖಲೆಗಳಿಲ್ಲದ ಕೋಟ್ಯಾನುಗಟ್ಟಲೇ ಹಣ ಪತ್ತೆಯಾಗಿದೆ.. ರಾಜ್ಯದ ವಿಧಾನಸಭಾ ಚುನಾವಣೆ ಅಕ್ರಮಗಳ ಮೇಲೆ ಕಣ್ಗಾವಲು ಇಟ್ಟಿರುವ ಚುನಾವಣಾ ಆಯೋಗವು ಇದುವರೆಗೆ 15 ಕೋಟಿ ರೂಪಾಯಿ ನಗದು, 57.72 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಹಾಗೇ 1,985 FIR ದಾಖಲು ಮಾಡಲಾಗಿದೆ..