ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ ಒಳಮೀಸಲಾತಿ ಕಿಡಿ – ಬಂಜಾರ ಸಮುದಾಯದ ಸಿಟ್ಟು ಸ್ಫೋಟ!
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕ್ಷೇತ್ರ ಶಿಕಾರಿಪುರದಲ್ಲಿ ನಿನ್ನೆ ಒಳಮೀಸಲಾತಿ ಕಿಚ್ಚು ಧಗಧಗಿಸಿತ್ತು. ಬಂಜಾರ ಸಮುದಾಯದವರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಲಾಠಿಚಾರ್ಜ್ ಕೂಡ ನಡೆದಿತ್ತು. ಬಿಎಸ್ವೈ ಮನೆ ಮೇಲೆ ಕಲ್ಲು ತೂರಾಟ ಕೂಡ ನಡೆದಿತ್ತು. ಇದೇ ಕಿಚ್ಚು ಈಗ ರಾಜ್ಯಾದ್ಯಂತ ವ್ಯಾಪಿಸುತ್ತಿದೆ.
ಒಳಮೀಸಲಾತಿ ಜಾರಿ ವಿರೋಧಿಸಿ ಶಿವಮೊಗ್ಗದ ಇತರ ಭಾಗಗಳಲ್ಲೂ ಇವತ್ತು ಆಕ್ರೋಶ ಭುಗಿಲೆದ್ದಿತ್ತು. ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿಯಲ್ಲಿ ಬಂಜಾರ ಸಮುದಾಯದವರು ಒಳ ಮೀಸಲಾತಿ ಜಾರಿ ವಿರೋಧಿಸಿ ರಸ್ತೆ ತಡೆ ನಡೆಸಿದ್ರು. ರಸ್ತೆಯಲ್ಲಿ ಟೈರ್ ಸುಟ್ಟು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ರು. ಯಾವುದೇ ಕಾರಣಕ್ಕೂ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದ್ರು.
ಇದನ್ನೂ ಓದಿ : ಕಾಂಗ್ರೆಸ್ ಸೇರ್ಪಡೆಗೆ ಸಜ್ಜಾದ ಬಿಜೆಪಿ ಹಾಲಿ ಶಾಸಕ – ಮಾತುಕತೆ ಫೈನಲ್.. ಯಾವ ಕ್ಷೇತ್ರದ ಟಿಕೆಟ್..!?
ಮತ್ತೊಂದೆಡೆ ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾದಲ್ಲೂ ಲಂಬಾಣಿ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ. ಹಾಗೇ ಬಿಜೆಪಿ ಕಚೇರಿ ಮೇಲೆ ಮತ್ತು ರಸ್ತೆಗಳಲ್ಲಿನ ವಿದ್ಯುತ್ ದೀಪಗಳಿಗೆ ಕಟ್ಟಿದ್ದ ಪಕ್ಷದ ಧ್ಚಜಗಳನ್ನು ಕಿತ್ತು ಹಾಕಿದ್ದಾರೆ. ಬಿಜೆಪಿಯ ಶಾಸಕರು ಹಾಗೂ ಸಂಸದರನ್ನು ತಾಂಡಾದೊಳಗೆ ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಪ್ರಕರಣದ ಬಗ್ಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ತನಿಖೆ ನಡೆಯುತ್ತಿದೆ. ಗಲಾಟೆಯಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳವರು ಭಾಗಿಯಾಗಿದ್ದಾರೆಂಬ ಮಾಹಿತಿ ಸಿಕ್ಕಿದೆ ಎಂದಿದ್ದಾರೆ..