ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್ – ಮತ್ತೆ ನಾಪತ್ತೆಯಾದ ಬಿಜೆಪಿ ಶಾಸಕ..!

ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್ – ಮತ್ತೆ ನಾಪತ್ತೆಯಾದ ಬಿಜೆಪಿ ಶಾಸಕ..!

ಊರೆಲ್ಲಾ ಹುಡುಕಿದ್ರೂ ಸಿಕ್ಕಿರಲಿಲ್ಲ. ಪೊಲೀಸರು ತಂಡ ಮಾಡಿಕೊಂಡು ತಲಾಶ್ ನಡೆಸಿದ್ರೂ ಪತ್ತೆಯಾಗಿರಲಿಲ್ಲ. ಹಗಲಿರುಳೆನ್ನದೆ ಜಾಲಾಡಿದ್ರೂ ಸಣ್ಣ ಸುಳಿವೂ ಇರಲಿಲ್ಲ. ಆದರೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡುತ್ತಿದ್ದಂತೆ ಬಿಲ ಹೊಕ್ಕಿದ್ದ ಶಾಸಕ ದಿಢೀರ್ ಪ್ರತ್ಯಕ್ಷರಾಗಿದ್ದರು. ಕಂತೆ ಕಂತೆ ಹಣ ಎಲ್ಲಾ ನಂದೇ ಅಂತಾ ಮೆರವಣಿಗೆ ಮಾಡಿ ಭಾರೀ ಸದ್ದು ಮಾಡಿದ್ದರು. ಆದರೀಗ ಅದೇ ಶಾಸಕ ಮತ್ತೊಮ್ಮೆ ತಲೆಮರೆಸಿಕೊಂಡಿದ್ದಾರೆ.

ಒಂದಲ್ಲ ಎರಡಲ್ಲ. ಬರೋಬ್ಬರಿ 8 ಕೋಟಿ ಹಣ ಪತ್ತೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತೊಮ್ಮೆ ಎಸ್ಕೇಪ್ ಆಗಿದ್ದಾರೆ. ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿ ಸೋಮವಾರ ಆದೇಶ ನೀಡಿದೆ. ಪರಿಣಾಮವಾಗಿ ವಿರೂಪಾಕ್ಷಪ್ಪಗೆ ಬಂಧನ ಭೀತಿ ಎದುರಾಗಿದೆ. ಹೀಗಾಗಿ ಸೋಮವಾರ ಚನ್ನಗಿರಿಯಲ್ಲಿ ಸರ್ಕಾರಿ ಕಾರ್ಯಕ್ರಮ‌ದಲ್ಲಿ ಭಾಗಿಯಾಗಿದ್ದ ಅವರು, ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಚನ್ನಗಿರಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದ್ದರು. ಸ್ವ ಗ್ರಾಮ ಚನ್ನಗಿರಿ ತಾಲೂಕಿನ ಚನ್ನೇಶಪುರಕ್ಕೂ ಹೋಗದೇ ನಾಪತ್ತೆಯಾಗಿದ್ದು, ಬೆಂಗಳೂರಿಗೆ ತೆರಳಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಬಿಎಸ್ ವೈ ಮನೆಗೆ ಕಲ್ಲೇಟು.. ಪೊಲೀಸರಿಂದ ಲಾಠಿ ಚಾರ್ಜ್ – ಒಳಮೀಸಲಾತಿ ಕಿಚ್ಚಿಗೆ ಶಿಕಾರಿಪುರ ಕೊತಕೊತ!

ಮಾಡಾಳ್ ಪುತ್ರ ಪ್ರಶಾಂತ್ ಬೆಂಗಳೂರು ಜಲಪೂರೈಕೆ ಮತ್ತು ಒಳಚರಂಡಿ ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿಯಾಗಿದ್ದು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್ ನೀಡಲು ಲಂಚಕ್ಕೆ ಬೇಡಿಯಿಟ್ಟಿದ್ದರು ಎಂಬ ಆರೋಪ ಅವರ ಮೇಲಿದೆ. ಲೋಕಾಯುಕ್ತ ದಾಳಿ ವೇಳೆ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ವಿರೂಪಾಕ್ಷಪ್ಪ ಕಚೇರಿಯಲ್ಲಿ 3 ಬ್ಯಾಗ್​ಗಳಲ್ಲಿ 2 ಸಾವಿರ ರೂ. ಮತ್ತು 500 ರೂಪಾಯಿ ಕಂತೆ ಕಂತೆ ನೋಟುಗಳು ಪತ್ತೆ ಆಗಿದ್ದವು. 8 ಕೋಟಿಗೂ ಅಧಿಕ ಹಣ ಸಿಕ್ಕಿತ್ತು.

ಪುತ್ರ ಪ್ರಶಾಂತ್ ಜೈಲು ಪಾಲಾದ ಬಳಿಕ ಎ1 ಆರೋಪಿಯಾಗಿದ್ದ ಮಾಡಾಳ್ ವಿರೋಪಾಕ್ಷಪ್ಪ ನಾಪತ್ತೆಯಾಗಿದ್ದರು. ಆರು ದಿನಗಳ ಕಾಲ ತಲೆಮರೆಸಿಕೊಂಡಿದ್ದ ವಿರೂಪಾಕ್ಷಪ್ಪ ಜಾಮೀನು ಸಿಗುತ್ತಿದ್ದಂತೆಯೇ ಚನ್ನಗಿರಿಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಮೆರವಣಿಗೆ ಮೂಲಕ ವಾಪಸಾಗಿದ್ದಕ್ಕೆ ಬಿಜೆಪಿಯಲ್ಲಿಯೂ ಭಾರೀ ವಿರೋಧ ವ್ಯಕ್ತವಾಗಿತ್ತು. ಮತ್ತೊಂದೆಡೆ ಮಾಡಾಳ್​ಗೆ ತರಾತುರಿಯಲ್ಲಿ ಜಾಮೀನು ಮಂಜೂರು ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೈಕೋರ್ಟ್ ವಕೀಲರು ಬೇಸರ ವ್ಯಕ್ತಪಡಿಸಿದ್ದರು. ಸಿಜೆಐಗೂ ಪತ್ರ ಬರೆದಿದ್ದರು.

suddiyaana