ಲಕ್ಷಾಂತರ ಅಕ್ಕಿ ಕಾಳುಗಳಲ್ಲಿ ರಾಮ ನಾಮ ಬರೆದ ಭಕ್ತೆ! – ಕಾರಣವೇನು ಗೊತ್ತಾ?
ಪ್ರತಿನಿತ್ಯ ಎದ್ದ ಕೂಡಲೇ ದೇವರನ್ನು ಪ್ರಾರ್ಥಿಸಿಕೊಳ್ಳುತ್ತೇವೆ. ಕೆಲವೊಮ್ಮೆ ಪರೀಕ್ಷೆಯಲ್ಲಿ ಉತ್ತಮ ಅಂಕ ಬರಲಿ, ಮಕ್ಕಳಿಗೆ ಮದುವೆ ಆಗಲಿ, ಉತ್ತಮ ಆರೋಗ್ಯ, ನೆಮ್ಮದಿ ಜೀವನ ಸಿಗಲೆಂದು ದೇವರಿಗೆ ನಾನಾ ರೀತಿಯ ಹರಕೆ ಹೊತ್ತುಕೊಳ್ಳುವ ಭಕ್ತರಿದ್ದಾರೆ. ಆದರೆ ಇಲ್ಲೊಬ್ಬಳು ಭಕ್ತೆ ವಿಭಿನ್ನ ರೀತಿಯಲ್ಲಿ ದೇವರಿಗೆ ತನ್ನ ಹರಕೆಯನ್ನು ಅರ್ಪಿಸಿದ್ದಾಳೆ.
ತೆಲಂಗಾಣದ ನಿವಾಸಿ ಮಲ್ಲಿ ವಿಷ್ಣು ವಂದನಾ ಶ್ರೀರಾಮನ ಭಕ್ತೆ. ಬಾಲ್ಯದಿಂದಲೂ ಆಕೆ ಶ್ರೀರಾಮನನ್ನು ಪೂಜಿಸುತ್ತಾ ಬಂದಿದ್ದಾಳೆ. ಇಂದಿನ ಪೀಳಿಗೆಯ ಯುವಕರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಈಕೆ 2016 ರಲ್ಲಿ ಅಕ್ಕಿ ಕಾಳುಗಳಲ್ಲಿ ರಾಮ ನಾಮ ಬರೆಯಲು ಆರಂಭಿಸಿದ್ದಾಳೆ. ಈಗಾಗಲೇ 7,52,864 ಅಕ್ಕಿ ಕಾಳಿನಲ್ಲಿ ರಾಮ ನಾಮವನ್ನು ಬರೆದಿದ್ದು, ಅದರಲ್ಲಿ 1,01,116 ಅಕ್ಕಿ ಕಾಳುಗಳನ್ನು ಹರಕೆಯ ರೂಪದಲ್ಲಿ ಭದ್ರಾದ್ರಿ ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಸ್ಥಾನದ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾಳೆ.
ಇದನ್ನೂ ಓದಿ: ಅಂಗಡಿಗೆ ಹೋಗಲು ಕಷ್ಟ ಅನ್ನುವವರಿಗೆ ‘ಮಿಲ್ಕ್ ಎಟಿಎಂ’ ಸೇವೆ – ಮನೆಗಳಿಗೇ ಬರುತ್ತೆ ಫ್ರೆಶ್ ಹಾಲು!
ರಾಮಚಂದ್ರ ಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 30 ರಂದು ಸೀತಾ ರಾಮ ಕಲ್ಯಾಣ ನಡೆಯಲಿದೆ. ಈ ವೇಳೆ ಭಕ್ತಾಧಿಗಳು ದೇವರಿಗೆ ಅಕ್ಕಿ ಕಾಳುಗಳನ್ನು ಅಕ್ಷತೆ ರೂಪದಲ್ಲಿ ಹಾಕುತ್ತಾರೆ. ಈ ವರ್ಷ ಮಲ್ಲಿ ವಿಷ್ಣು ಬರೆದ ಅಕ್ಕಿ ಕಾಳುಗಳನ್ನು ದೇವರಿಗೆ ಅಕ್ಷತೆ ರೂಪದಲ್ಲಿ ಅರ್ಪಿಸಲಾಗುತ್ತದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಬಾಲ್ಯದಿಂದಲೂ ತನಗೆ ದೈವಭಕ್ತಿಯಲ್ಲಿ ಆಸಕ್ತಿಯಿತ್ತು. ಇಂದಿನ ಪೀಳಿಗೆಯ ಯುವಕರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುವ ಉದ್ದೇಶದಿಂದ 2016 ರಲ್ಲಿ ಅಕ್ಕಿ ಕಾಳುಗಳಲ್ಲಿ ರಾಮ ನಾಮ ಬರೆಯಲು ಶುರುಮಾಡಿದೆ. ಈಗಾಗಲೇ 7,52,864 ಅಕ್ಕಿ ಕಾಳುಗಳಲ್ಲಿ ರಾಮನಾಮ ಬರೆದಿದ್ದು, ಅದರಲ್ಲಿ 1,01,116 ಭದ್ರಾದ್ರಿ ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಸ್ಥಾನಕ್ಕೆ ಅರ್ಪಿಸಿದ್ದೇನೆ. ಇನ್ನುಳಿದ ಅಕ್ಕಿ ಕಾಳುಗಳನ್ನು ಆಂಧ್ರಪ್ರದೇಶದ ಅಲ್ಲಗಡ್ಡಾ, ವಿಜಯನಗರಂ ನಲ್ಲಿರುವ ಶ್ರೀ ಸೀತಾ ರಾಮಚಂದ್ರ ಸ್ವಾಮಿ ದೇವಾಲಯಗಳು ಮತ್ತು ತೆಲಂಗಾಣದ ಕರೀಂನಗರ ಜಿಲ್ಲೆಯ ನೆರೆಡುಚರ್ಲಾ, ಹೈದರಾಬಾದ್, ಇಲ್ಲಂತುಕುಂಟಾ ದೇವಾಲಯಗಳ ಅಧಿಕಾರಿಗಳಿಗೆ ಶ್ರೀರಾಮನ ಹೆಸರಿನೊಂದಿಗೆ ಹಸ್ತಾಂತರಿಸಲಿದ್ದೇನೆ ಎಂದು ಮಲ್ಲಿ ವಿಷ್ಣು ಹೇಳಿದ್ದಾರೆ.