ಕಲಬುರಗಿ ಪಾಲಿಕೆಯಲ್ಲಿ ಕೊನೆಗೂ ಅರಳಿತು ‘ಕಮಲ’ – ಬಿಜೆಪಿ ಗೆಲುವಿನ ಹಿಂದೆ ಅದೆಂಥಾ ರಾಜಕೀಯ..?
ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೂ ಮುನ್ನವೇ ಬಿಜೆಪಿ ಕಾಂಗ್ರೆಸ್ಗೆ ಬಿಗ್ ಶಾಕ್ ಕೊಟ್ಟಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರಿನಲ್ಲಿ ಕಮಲ ಅರಳಿದ್ದು ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳು ಒಂದೇ ಒಂದು ಮತದಿಂದ ಗೆಲುವು ಸಾಧಿಸಿದ್ದಾರೆ. ವಾರ್ಡ್ ಸಂಖ್ಯೆ 46 ಪ್ರತಿನಿಧಿಸುವ ವಿಶಾಲ ದರ್ಗಿ ಮತ್ತು ವಾರ್ಡ್ ಸಂಖ್ಯೆ 25 ರಿಂದ ಶಿವಾನಂದ ಪಿಸ್ತಿ ಅವರು ಮೇಯರ್ ಮತ್ತು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಇದೇ ಮೊದಲ ಬಾರಿಗೆ ಕಲಬುರಗಿಯಲ್ಲಿ ಬಿಜೆಪಿ ಸ್ವತಂತ್ರ್ಯವಾಗಿ ಗೆಲುವು ಸಾಧಿಸಿದೆ. ಮೇಯರ್ ಆಗಿ ಬಿಜೆಪಿಯ ವಿಶಾಲ್ ದರ್ಗಿ ಅವರು ಆಯ್ಕೆಯಾದರೆ ಉಪ ಮೇಯರ್ ಆಗಿ ಶಿವಾನಂದ್ ಪಿಸ್ತಿ ಆಯ್ಕೆಯಾಗಿದ್ದಾರೆ. ಈ ಮೂಲಕ 12 ವರ್ಷಗಳ ಬಳಿಕ ಬಿಜೆಪಿ ಕಲಬುರಗಿ ಪಾಲಿಕೆಯ ಗದ್ದುಗೆಗೇರಿದೆ. ವಿಶಾಲ್ ದರ್ಗಿ 33 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಕಪನೂರ್ ಮತಗಳನ್ನು ಪಡೆದಿದ್ದಾರೆ. ಇನ್ನು ಉಪಮೇಯರ್ ಸ್ಥಾನಕ್ಕೆ ಬಿಜೆಪಿಯ ಶಿವಾನಂದ್ ಪಿಸ್ತಿ 33 ಮತಗಳನ್ನು ಪಡೆದರೆ ಕಾಂಗ್ರೆಸ್ ನ ವಿಜಯಲಕ್ಷ್ಮಿ 32 ಮತಗಳನ್ನು ಪಡೆದಿದ್ದಾರೆ. 2021ರ ಸೆಪ್ಟೆಂಬರ್ ತಿಂಗಳಲ್ಲಿ ಕಲಬುರಗಿ ಪಾಲಿಕೆ ಚುನಾವಣೆ ನಡೆದಿತ್ತು. ಬಿಜೆಪಿ 23, ಕಾಂಗ್ರೆಸ್ 27, ಜೆಡಿಎಸ್ 4, ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ : 2 ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಪ್ಲ್ಯಾನ್ ಮಾಡ್ತಿದ್ದಾರಾ ಸಿದ್ದರಾಮಯ್ಯ..!? – ಇದೆಲ್ಲಾ ಗಿಮಿಕ್ ಎಂದಿದ್ದೇಕೆ ಬಿಎಸ್ ವೈ?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರಲ್ಲೇ ಬಿಜೆಪಿ ನಾಯಕರು ಕಮಲ ಅರಳಿಸಿದ್ದು, ಕಲಬುರಗಿ ಮಹಾನಗರ ಪಾಲಿಕೆ ಇದೀಗ ಬಿಜೆಪಿ ಪಾಲಾಗಿದೆ. ಪಾಲಿಕೆ ಮೇಯರ್, ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿಗಳು ಜಯಶಾಲಿಗಳಾಗಿದ್ದಾರೆ. ಪಾಲಿಗೆ ಮೇಯರ್ ಚುನಾವಣೆ ಭಾರೀ ಕುತೂಹಲ ಮೂಡಿಸಿತ್ತು. ಅದಾಗ್ಯೂ, ಎರಡೂ ಸ್ಥಾನಗಳು ಬಹುತೇಕ ನಮಗೆ ಫಿಕ್ಸ್ ಎಂದು ಅರಿತ ಬಿಜೆಪಿ ನಾಯಕರು ಕಾರ್ಯಕರ್ತರು ವಿಜಯೋತ್ಸವ ನಡೆಸಲು ಟೌನ್ ಹಾಲ್ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಅದರಂತೆ ಹೊರಬಿದ್ದ ಫಲಿತಾಂಶದಲ್ಲಿ ಮೇಯರ್, ಉಪಮೇಯರ್ ಆಗಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಘೋಷಣೆಯಾಗುತ್ತಿದ್ದಂತೆ ಬಿಜೆಪಿ ನಾಯಕರು, ಕಾರ್ಯಕರ್ತರು ವಿಜಯೋತ್ಸವ ಆರಂಭಿಸಿದ್ದಾರೆ. ಇನ್ನೊಂದಡೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಜೆಡಿಎಸ್ ಮುಖಂಡರು ಆಕ್ರೋಶ ಹೊರಹಾಕಲು ಮುಂದಾದರು. ಟೌನ್ ಹಾಲ್ ಸುತ್ತಮುತ್ತ ನಿಷೇದಾಜ್ಞೆ ಜಾರಿ ಮಾಡಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ನಾಯಕರು ಜಮಾಯಿಸಿದ್ದರಿಂದ ಟೌನ್ ಹಾಲ್ ಸುತ್ತಮುತ್ತ ನಿಷೇದಾಜ್ಞೆ ಇದೆ, ಇಲ್ಲಿ ಹೇಗೆ ಬಿಜೆಪಿಯುವರು ಇಷ್ಟೊಂದು ಜನ ಸೇರುತ್ತೀರಿ? ನೀವು ನಿಮ್ಮ ಪಕ್ಷದ ಬಾವುಟ ಹಿಡಿದರೆ ನಾವು ನಮ್ಮ ಪಕ್ಷದ ಬಾವುಟ ಹಿಡಿಯುತ್ತೇವೆ ಅಂತ ಕೃಷ್ಣಾರೆಡ್ಡಿ ಆಕ್ರೋಶ ಹೊರಹಾಕಿದರು.
2021ರ ಸೆಪ್ಟೆಂಬರ್ ತಿಂಗಳಲ್ಲಿ ಕಲಬುರಗಿ ಪಾಲಿಕೆ ಚುನಾವಣೆ ನಡೆದಿತ್ತು. BJP 23, ಕಾಂಗ್ರೆಸ್ 27, JDS 4, ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಇರಲಿಲ್ಲ. ಅದರಂತೆ ಅಧಿಕಾರಕ್ಕೆ ಬರಲು MLCಗಳ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ಅಧಿಕಾರ ಚುಕ್ಕಾಣಿ ಹಿಡಿಯಲು ಜೆಡಿಎಸ್ ಬೆಂಬಲದೊಂದಿಗೆ ಅಧಿಕಾರಕ್ಕೇರಲು ಕಾಂಗ್ರೆಸ್ ಕೂಡ ತಂತ್ರ ರೂಪಿಸಿತ್ತು. ಆದರೆ, ಎರಡು ರಾಷ್ಟ್ರೀಯ ಪಕ್ಷಗಳಿಗೆ ಬಹುಮತಕ್ಕೆ ಸಂಖ್ಯೆ ಬಲ ಕಡಿಮೆ ಇದ್ದಿದ್ದರಿಂದ ಎಲ್ಲರ ಚಿತ್ತನ ನಾಲ್ವರು ಜೆಡಿಎಸ್ ಸದಸ್ಯರ ಮೇಲಿತ್ತು. ಕಾಂಗ್ರೆಸ್ಗೆ ಬೆಂಬಲಿಸುತ್ತೇವೆ ಎಂದು ಜೆಡಿಎಸ್ ಪಾಲಿಕೆ ಸದಸ್ಯರು ಹೇಳಿದ್ದರು. ನಾಲ್ವರ ಪೈಕಿ ಒಬ್ಬರನ್ನಾದರೂ ಮತದಾನಕ್ಕೆ ಬರದಂತೆ ನೋಡಿಕೊಳ್ಳಲು ಬಿಜೆಪಿ ನಾಯಕರು ಕಸರತ್ತು ನಡೆಸಿದ್ದರು. ಒಬ್ಬರು ಮತದಾನದಿಂದ ದೂರ ಉಳಿದರೆ ಬಿಜೆಪಿ ಮೇಯರ್ ಚುಕ್ಕಾಣಿ ಹಿಡಿಯಲಿದೆ. ಹೀಗಾಗಿ ನಾಲ್ವರು ಜೆಡಿಎಸ್ ಪಾಲಿಕೆ ಸದಸ್ಯರ ಮೇಲೆ ಎಲ್ಲರ ಕಣ್ಣು ಬಿದ್ದಿತ್ತು. ಕೊನೆಗೂ ಬಿಜೆಪಿ ತಂತ್ರಗಾರಿಕೆ ಫಲಿಸಿ ಸ್ವತಂತ್ರವಾಗಿ ಪಾಲಿಕೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು.
ಅಧಿಕಾರ ಪಡೆಯಲು ಬಿಜೆಪಿ ಜಿಲ್ಲೆಗೆ ಸಂಬಂಧಿಸದೇ ಇದ್ದ ವಿಧಾನ ಪರಿಷತ್ ಸದಸ್ಯರನ್ನು ಪಾಲಿಕೆಯ ಮೇಯರ್ ಚುನಾವಣೆಯ ಮತದಾರರ ಪಟ್ಟಿಗೆ ಸೇರಿಸಿದ್ದರು. ಲಕ್ಷ್ಮಣ್ ಸವದಿ, ಬಾರತಿ ಶೆಟ್ಟಿ, ಲೆಹರಸಿಂಗ್ ಸೇರಿದಂತೆ ಅನೇಕ ಹೆಸರನ್ನು ಸೇರಿಸಿದ್ದರು. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ನ್ಯಾಯಾಲಯದ ಮೊರೆ ಹೋಗಿತ್ತು. ಹೈಕೋರ್ಟ್ ಪರಿಷತ್ ಸದಸ್ಯರಿಗೆ ಕೂಡಾ ಮತದಾನಕ್ಕೆ ಅವಕಾಶ ನೀಡಿತ್ತು. ಸದ್ಯ ಪಾಲಿಕೆ ಸದಸ್ಯರು, ಶಾಸಕರು, ಸಂಸದ, ಇಬ್ಬರು ರಾಜ್ಯಸಭೆ ಸದಸ್ಯರು, ಪರಿಷತ್ ಸದಸ್ಯರು ಸೇರಿ ಒಟ್ಟು ಮತದಾರರ ಸಂಖ್ಯೆ 68 ಆಗಿದ್ದು, ಅಧಿಕಾರಕ್ಕೆ ಬರಲು ಮ್ಯಾಜಿಕ್ ನಂಬರ್ 35 ಬೇಕಿತ್ತು.